ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರ ಮಧ್ಯೆ ವಾಗ್ವಾದ ಉಂಟಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಶುಕ್ರವಾರ ಹುಬ್ಬಳ್ಳಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಕಮಿಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ನಾಗೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಮಧ್ಯೆ ಎಸಿಪಿ ಮಲ್ಲಾಪುರೆ ಪೊಲೀಸ್ ಆಯುಕ್ತರ ವರ್ತನೆಗೆ ಬೇಸತ್ತು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದಾಗಿ ಆಯುಕ್ತರಿಗೆ ಎಚ್ಚರಿಕೆ ನೀಡಿರುವುದು ಐಪಿಎಸ್ ಅಧಿಕಾರಿಗಳ ವಾರ್ ಗೆ ಕಾರಣವಾಗಿದೆ ಎನ್ನಲಾಗಿದೆ.
Advertisement
ನಿನ್ನೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಗಳ ಕಾಲ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ, ಎಸಿಪಿ, ಪಿಐಗಳ ಸಭೆ ನಡೆಯಿತು. ಸಭೆಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಬಂದೋಬಸ್ತ್, ಹೊಸ ವರ್ಷಾಚರಣೆ ವೇಳೆ ಕೈಗೊಂಡ ಬಂದೋಬಸ್ತ್ ಗಳ ಬಗ್ಗೆ ಅಧಿಕಾರಿಗಳ ಮಧ್ಯೆ ಚರ್ಚೆ ನಡೆದಿದೆ. ಈ ವೇಳೆ ಕಮಿಷನರ್ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗುತ್ತಿದ್ದಂತೆ ಕಮಿಷನರ್ ವರ್ತನೆ ವಿರುದ್ದ ಡಿಸಿಪಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದ ಪರಿಣಾಮ ಡಿಸಿಪಿ ನಾಗೇಶ್, ನಾನು ಐಪಿಎಸ್ ಇದ್ದೀನಿ, ನನಗೆ ಹೇಗೆ ಕರ್ತವ್ಯ ನಿರ್ವಹಿಸಬೇಕು ಅನ್ನೋ ಬಗ್ಗೆ ಹೇಳಬೇಡಿ ಎಂದು ಕಮಿಷನರ್ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಸಭೆಯಲ್ಲಿದ್ದ ಕೆಲ ಅಧಿಕಾರಿಗಳು ಇಬ್ಬರನ್ನು ಸಮಾಧಾನಪಡಿಸಲು ಮುಂದಾದ ಪ್ರಸಂಗವೂ ನಡೆಯಿತು.
Advertisement
ಸಿಟ್ಟಿನಿಂದಲೇ ಹೊರನಡೆದ ಡಿಸಿಪಿ!
ಕಮಿಷನರ್ ಹಾಗೂ ಡಿಸಿಪಿ ಮಧ್ಯೆ ಮಾತಿನ ಚಕಮಕಿ ನಡೆದು ಇಬ್ಬರ ಮಧ್ಯೆ ವಾಗ್ವಾದ ನಡೆದ ನಂತರ ಡಿಸಿಪಿ ನಾಗೇಶ್ ಅಸಮಾಧಾನದಿಂದಲೇ ಸಭೆಯಿಂದ ಹೊರ ನಡೆದರು. ಡಿಸಿಪಿ ಸಭೆಯಿಂದ ಹೊರಬರುತ್ತಿದ್ದಂತೆಯೇ ಉಳಿದ ಕಿರಿಯ ಅಧಿಕಾರಿಗಳ ಜೊತೆ ಪೊಲೀಸ್ ಆಯುಕ್ತರು ಸಭೆಯನ್ನ ಮುಂದುವರಿಸಿದರು.
ಪೊಲೀಸ್ ಆಯುಕ್ತ ಆರ್ ದಿಲೀಪ್ ಹಾಗೂ ಡಿಸಿಪಿ ನಾಗೇಶ್ ಮಧ್ಯೆ ಕಳೆದ ಹಲವಾರು ತಿಂಗಳಿನಿಂದ ಎಲ್ಲವೂ ಸರಿಯಿಲ್ಲದಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಎಲ್ಲ ಅಧಿಕಾರಿಗಳ ಮುಂದೆಯೂ ಇದೀಗ ಇಬ್ಬರೂ, ಒಬ್ಬರ ವಿರುದ್ಧ ಮತ್ತೊಬ್ಬರು ಅಸಮಾಧಾನ ಹೊರಹಾಕಿರುವುದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಅಧಿಕಾರಿಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿದೆ.