ಕಾಬುಲ್: ವಾರಗಟ್ಟಲೆ ನಡೆದ ಮಾರಕ ಗಡಿ ಘರ್ಷಣೆಗಳು ಮತ್ತು ವಿಫಲ ಶಾಂತಿ ಮಾತುಕತೆಗಳ ನಂತರ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಅವರು ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿದ್ದಾರೆ.
ಇಸ್ಲಾಮಾಬಾದ್ ತನ್ನ ಆಂತರಿಕ ಸಂಘರ್ಷಗಳನ್ನು ಡ್ಯುರಾಂಡ್ ರೇಖೆಯಾದ್ಯಂತ ಹೆಚ್ಚಿಸುತ್ತಿದೆ ಎಂದು ಹಕ್ಕಾನಿ ಆರೋಪಿಸಿದ್ದಾರೆ. ಅಗ್ನಿಶಾಮಕ ನಿರ್ದೇಶನಾಲಯದ ತರಬೇತಿ ಸೆಮಿನಾರ್‌ನ ಸಮಾರೋಪ ಅಧಿವೇಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಇದಕ್ಕೆ ತಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಫ್ಘಾನಿಸ್ತಾನದ ಜನರಿಗೆ ಆಂತರಿಕ ಸಮಸ್ಯೆಗಳಿರಬಹುದು. ಆದರೆ, ಅವರು ವಿದೇಶಿ ಆಕ್ರಮಣದ ವಿರುದ್ಧ ಒಗ್ಗಟ್ಟಾಗಿದ್ದಾರೆ. ನೀವು ನಿಮ್ಮ ಸಮಸ್ಯೆಗಳನ್ನು ಅಫ್ಘಾನಿಸ್ತಾನಕ್ಕೆ ತಂದು ಇಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತಿದ್ದೀರಿ. ಈ ತಪ್ಪಿನಿಂದ ನೀವು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪಾಕ್ ವಿರುದ್ಧ ಗುಡುಗಿದ್ದಾರೆ.
ಪಾಕ್-ಅಫ್ಘಾನ್ ಗಡಿಯಲ್ಲಿ ಹೆಚ್ಚುತ್ತಿರುವ ಹಗೆತನದ ಮಧ್ಯೆ ಈ ಹೇಳಿಕೆ ಬಂದಿದೆ. ಇತ್ತೀಚೆಗೆ ತಾಲಿಬಾನ್ ಪಡೆಗಳು ಮತ್ತು ಪಾಕಿಸ್ತಾನಿ ಪಡೆಗಳ ನಡುವಿನ ಘರ್ಷಣೆಗಳು ಹಲವಾರು ಸಾವುನೋವುಗಳಿಗೆ ಕಾರಣವಾಗಿವೆ. ಎರಡೂ ಕಡೆಯವರು ಪರಸ್ಪರ ಅಪ್ರಚೋದಿತ ಆಕ್ರಮಣದ ಆರೋಪಗಳನ್ನು ಹೊರಿಸಿಕೊಂಡಿದ್ದಾರೆ. ಟರ್ಕಿಶ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ಒಂದು ಸುತ್ತಿನ ಶಾಂತಿ ಮಾತುಕತೆ ಸೇರಿದಂತೆ ಉದ್ವಿಗ್ನತೆ ಶಮನಗೊಳಿಸುವ ಹಲವಾರು ಪ್ರಯತ್ನಗಳು ನಡೆದಿವೆ.
ತಾಲಿಬಾನ್‌ನ ಶ್ರೇಣಿಯಲ್ಲಿನ ಪ್ರಬಲ ವ್ಯಕ್ತಿ ಮತ್ತು ಹಕ್ಕಾನಿ ನೆಟ್‌ವರ್ಕ್‌ನ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ, ಸೀಮಿತ ಶಸ್ತ್ರಾಸ್ತ್ರಗಳ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿದ್ಧವಾಗಿರುವ ರಾಷ್ಟ್ರವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ನಮ್ಮಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿಗಳು ಅಥವಾ ಶಕ್ತಿಶಾಲಿ ಶಸ್ತ್ರಾಸ್ತ್ರಗಳಿಲ್ಲ. ಆದರೆ, ನಮ್ಮ ದೃಢನಿಶ್ಚಯ ಪ್ರಬಲವಾಗಿದೆ ಎಂದು ತಿಳಿಸಿದ್ದಾರೆ.
 


 
		 
		 
		 
		 
		
 
		 
		 
		 
		