ನವದೆಹಲಿ: ಇಂಡಿಗೋ ವಿಮಾನ ವಿಳಂಬ ಮತ್ತು ರದ್ದತಿಯಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿದ್ದು, ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ಕಾಯುವ ಅಗತ್ಯ ಇರುವುದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಹೇಳಿದ್ದಾರೆ.
ಈ ಅಡಚಣೆಯನ್ನು ಪರಿಶೀಲಿಸಲು ಮತ್ತು ಎಲ್ಲಿ ತಪ್ಪು ಆಗಿದೆ ಎಂಬುದನ್ನು ತಿಳಿಯಲು ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ತಕ್ಷಣದ ಆದ್ಯತೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಮರಳುವುದು ಮತ್ತು ಪ್ರಯಾಣಿಕರಿಗೆ ಎಲ್ಲಾ ಬೆಂಬಲವನ್ನು ಒದಗಿಸುವುದು ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ಎರಡು ದಿನಗಳಿಂದ ಇದ್ದ ಬಾಕಿ ಉಳಿದಿರುವ ಸಮಸ್ಯೆಗಳನ್ನು ನಿವಾರಿಸಲಾಗಿದೆ. ನಾಳೆಯಿಂದ, ಯಾವುದೇ ದಟ್ಟಣೆ ಇರುವುದಿಲ್ಲ. ವಿಮಾನ ನಿಲ್ದಾಣಗಳಲ್ಲಿ ಯಾವುದೇ ಕಾಯುವಿಕೆ ಇರುವುದಿಲ್ಲ. ಎಲ್ಲವೂ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದಿದ್ದಾರೆ.
ತನಿಖೆ ನಡೆಸಲು ನಾವು ಒಂದು ಸಮಿತಿಯನ್ನು ರಚಿಸಿದ್ದೇವೆ. ಎಲ್ಲಿ ತಪ್ಪಾಗಿದೆ, ಯಾರು ತಪ್ಪು ಮಾಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಯಲಿದೆ. ಅದರ ಬಗ್ಗೆಯೂ ನಾವು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ. ನಾವು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಸಮಸ್ಯೆಗೆ ಕಾರಣರಾದವರು ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
FDTL ಮಾನದಂಡಗಳು, ವೇಳಾಪಟ್ಟಿಯನ್ನು ಗಮನಿಸುತ್ತಿದ್ದೇವೆ. ನಾವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

