ನವದೆಹಲಿ: ಮುಂಬೈ ಭಯೋತ್ಪಾದಕ (Mumbai Terror Attack) ದಾಳಿಯ ಸಂಚುಕೋರ ತಹವ್ವುರ್ ರಾಣಾನನ್ನು (Tahawwur Rana) ಕೊನೆಗೂ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಯಿತು.
ರಾಣಾ ಇದ್ದ ವಿಶೇಷ ವಿಮಾನ ಗುರುವಾರ ಸಂಜೆ ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದೆ. ದೆಹಲಿಯಲ್ಲಿ ಎನ್‌ಐಎ ಬಂಧನ ಪ್ರಕ್ರಿಯೆ ನಡೆಸಿದೆ. ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ (64)ನನ್ನು ಲಾಸ್ ಏಂಜಲೀಸ್ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಅಮೆರಿಕದಲ್ಲಿ ಬೀಡುಬಿಟ್ಟಿರುವ ಭಾರತದ ಬಹು ಏಜೆನ್ಸಿ ತಂಡವು, ರಾಣಾನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಸಿತು.
ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ರಾಣಾ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ, ಆತನ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ಗಡೀಪಾರಿನಿಂದ ತಪ್ಪಿಸಿಕೊಳ್ಳುವ ರಾಣಾನ ಕೊನೆಯ ಪ್ರಯತ್ನವೂ ವಿಫಲವಾಗಿದ್ದು, ಇಂದು ಭಾರತಕ್ಕೆ ಕರೆತರಲಾಗುತ್ತಿದೆ.
ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರನಾಗಿದ್ದ.