ಕನ್ನಡದ ನಟಿ, ಟಗರು ಸಿನಿಮಾದಲ್ಲಿ (Tagaru Cinema) ಕಾನ್‌ಸ್ಟೇಬಲ್ ಸರೋಜಾ ಪಾತ್ರ ಮಾಡುವ ಮೂಲಕ ಫೇಮಸ್ ಆಗಿದ್ದ ತ್ರಿವೇಣಿ ರಾವ್ (Triveni Rao) ಅಲಿಯಾಸ್ ರುಷಿಕಾ ರಾಜ್ ಸದ್ದಿಲ್ಲದೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡದ ಹಲವಾರು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡಿದ್ದ ಈ ನಟಿ, ಮಾಜಿ ಸಿಎಂ ಹಾಗೂ ಹಾಲಿ ಸಂಸದರೊಬ್ಬರ ಜೊತೆ ಮದುವೆ ಆಗಿದ್ದು ಅಚ್ಚರಿಗೆ ಕಾರಣವಾಗಿದೆ. ಜೂನ್ 17 ರಂದೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ಶಿವರಾಜ್‌ಕುಮಾರ್ (Shivarajkumar), ಡಾಲಿ ಧನಂಜಯ್ ನಟನೆಯ ಟಗರು, ಹೊಸಬರ ʻಅಲ್ಲೇ ಡ್ರಾ ಅಲ್ಲೇ ಬಹುಮಾನʼ, ʻರಾಜ ಮಾರ್ತಾಂಡʼ, ʻಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡʼ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದವರು ತ್ರಿವೇಣಿ ರಾವ್. ಅವರು ಹೆಚ್ಚು ಸದ್ದು ಮಾಡಿದ್ದು ಟಗರು ಸಿನಿಮಾದ ಕಾನ್ಸ್‌ಟೇಬಲ್ ಸರೋಜಾ ಪಾತ್ರದ ಮೂಲಕ.
ಆಮೇಲೆ ಬೇರೆ ಭಾಷೆಗಳ ಚಿತ್ರದಲ್ಲೂ ನಟಿಸಿದ್ದರು. ಇದೀಗ ಸದ್ದಿಲ್ಲದೇ ತ್ರಿಪುರಾದ ಮಾಜಿ ಸಿಎಂ ಹಾಗೂ ಹಾಲಿ ಸಂಸದರೂ ಆಗಿರುವ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಜೊತೆ ಮದುವೆ ಮಾಡಿಕೊಂಡಿದ್ದಾರೆ. 55ರ ವಯಸ್ಸಿನ ಬಿಪ್ಲಬ್ ಕುಮಾರ್ ದೇಬ್‌ಗೆ ಇದು 2ನೇ ಮದುವೆ.

ನಟಿ ತ್ರಿವೇಣಿ ರಾವ್ ವಾಸವಿರೋದು ಬೆಂಗಳೂರಿನಲ್ಲಿ. ಬಿಪ್ಲಬ್ ಕುಮಾರ್ ದೇಬ್ ಇರೋದು ತ್ರಿಪುರಾದಲ್ಲಿ. ನಟಿಯ ಪರಿಚಯ ಬಿಪ್ಲಬ್ ಕುಮಾರ್ ದೇಬ್ ಅವರಿಗೆ ಹೇಗಾಯಿತು? ಅನ್ನುವ ಕುತೂಹಲ ಎಲ್ಲರದ್ದು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ನಟಿಯನ್ನು ಮಾಜಿ ಸಿಎಂ ಒಪ್ಪಿರೋದು ಕೂಡ ಅಚ್ಚರಿಗೆ ಕಾರಣವಾಗಿದೆ.
ಸದ್ಯಕ್ಕೆ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ಹಲವಾರು ಪ್ರಶ್ನೆಗಳನ್ನೂ ಮೂಡಿಸಿವೆ. ಮುಂದಿನ ದಿನಗಳಲ್ಲೇ ಅವರೇ ಈ ಕುರಿತು ಮಾತಾಡಬಹುದು.
ಈ ಜೋಡಿಯ ಆರತಕ್ಷತೆಗೆ ಅನೇಕ ರಾಜಕಾರಣಿಗಳು, ಸಿನಿಮಾ ನಟ ನಟರು ಹಾಗೂ ಎರಡೂ ಕುಟುಂಬದ ಸದಸ್ಯರು ಹಾಜರಿದ್ದರು.
