Tag: mekedatu project

  • ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ರು: ಸಿ.ಟಿ ರವಿ

    ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ರು: ಸಿ.ಟಿ ರವಿ

    ಹುಬ್ಬಳ್ಳಿ: ಕಾಂಗ್ರೆಸ್‍ನವರು ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.

    congress logo 1

    ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಣಿಯಲ್ಲಿ ಮಾತನಾಡಿದ ಅವರು, ಕೈ ಪಕ್ಷವು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಈಗ ಮೇಕೆದಾಟು ಯೋಜನೆ ಬಿಟ್ಟು ಮೇಕೆ ತಿನ್ನುವುದರಲ್ಲಿ ಮಗ್ನರಾಗಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬದ್ಧತೆ ಇದೆ. ಅದಕ್ಕೆ ಸಂಬಂಧಿಸಿದಂತೆ ಡಿಪಿಆರ್ ನಡೀತಾ ಇದೆ ಎಂದರು. ಇದನ್ನೂ ಓದಿ: ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

    ಮೋದಿ ಹಠಾವೋ ಅನ್ನೋ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರು ಏನೇನು ಹೇಳುತ್ತಾರೆಯೋ ಅದಕ್ಕೆ ಉಲ್ಟಾ ಆಗಿ ನಡೆಯುತ್ತದೆ. ಅಪ್ಪನ ಆಣೆ ಮೋದಿ ಪ್ರಧಾನಿ ಆಗಲ್ಲ ಅಂದರು. ಎರಡು ಬಾರಿ ಮೋದಿ ಪ್ರಧಾನಿ ಆದರು. ಹಠಾವೋ ಹಠಾವೋ ಅಂತಾ ಇರೋದು ಅವರನ್ನ ಕಾಂಗ್ರೆಸ್ ನಿಂದ ಹಠಾವೋ ಮಾಡಬಾರದು ಅಂತಾ. ಸಿದ್ದರಾಮಯ್ಯನವರ ಮನೆಯಲ್ಲೇ ಅವರ ಮಾತು ಕೇಳಲ್ಲ. ಅವರ ಮನೆಯಲ್ಲೇ ಮೋದಿ ಮೋದಿ ಅಂತಾರೆ ಎಂದು ಹೇಳಿದರು.

    mekedatu 1

    ಇದೇ ವೇಳೆ ಮಾಲೇಗಾಂವ್ ಸ್ಫೋಟ ಪ್ರಕರಣ ವಿಚಾರದಲ್ಲಿ ಕಾಂಗ್ರೆಸ್ ಯೋಗಿ ಆದಿತ್ಯನಾಥ್ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಷಡ್ಯಂತ್ರ ರಚಿಸಿ ಆತಂಕವಾದಿಗಳ ಜೊತೆ ಸಮೀಕರಿಸಿ ರಾಷ್ಟ್ರದ್ರೋಹ ಮಾಡುತ್ತಿದ್ದು, ಅವರು ಕ್ಷಮೆ ಕೇಳಬೇಕು. ಹಿಂದುತ್ವವಾದಿಗಳನ್ನ ಆತಂಕವಾದಿಗಳು ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ತಪ್ಪು ನಿರ್ಣಯಗಳಿಂದ 44 ಸ್ಥಾನಳಿಗೆ ಬಂದು ನಿಂತಿದ್ದಾರೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಸಿಂಗಲ್ ಡಿಜಿಟ್ ಕೂಡಾ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    yogi adityanath

    ಕಾಂಗ್ರೆಸ್ ಸರ್ಕಾರ ಬಂದರೆ ಮತಾಂತರ ಕಾಯ್ದೆ ರದ್ದು ಮಾಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಅಧಿಕಾರಕ್ಕೆ ಬರಲ್ಲ. ಅವರದ್ದು ಒಂದು ತಿರುಕನ ಕನಸು. ಕಪಾಲಿ ಬೆಟ್ಟದ ಮೇಲೆ ಮೂರ್ತಿ ಸ್ಥಾಪನೆ ಮಾಡಲು ಹೋಗಿ ಅಧಿಕಾರ ಗಿಟ್ಟಿಸಿಕೊಂಡರು. ಸರ್ಕಾರದಲ್ಲಿ ಪದವಿ ಗಿಟ್ಟಿಸಿಕೊಳ್ಳಲು ಲಿಯೋ ಪಾಸ್ಟರ್ ರೀತಿ ಮಾತನಾಡಬೇಕಾಗುತ್ತದೆ ಕಾರ್ಯಕಾರಣಿಯಲ್ಲಿ ವಿಷಯಾಧಾರಿತ ಚರ್ಚೆ ನಡೆದಿದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ಖಾಲಿ ಇಲ್ಲದಿರುವ ಕುರ್ಚಿಗೆ ಟವಲ್ ಹಾಕುತ್ತಿದ್ದಾರೆ ಎಂದರು. ಇದನ್ನೂ ಓದಿ: ಎರಡ್ಮೂರು ಬಾರಿ ಸಚಿವರಾದವರು ಈಗ ಸ್ಥಾನ ಬಿಟ್ಟುಕೊಡಲಿ: ರೇಣುಕಾಚಾರ್ಯ ಆಗ್ರಹ

    ನಮ್ಮ ಸರ್ಕಾರ ಎಲ್ಲ ಧರ್ಮಗಳ ಹಿತಾಸಕ್ತಿ ಕಾಯುತ್ತದೆ. ಸಿದ್ದರಾಮಯ್ಯನವರ ಉದ್ದೇಶ ಅಂಬೇಡ್ಕರ್‍ರವರನ್ನು ಮರೆತು ಕ್ರಿಸ್ತನ ಕೈ ಹಿಡಿಯಬೇಕು ಎಂಬುದು ಅವರ ಉದ್ದೇಶ. ಬುದ್ದ-ಬಸವ-ಕನಸದಾಸರನ್ನ ಮರೆತು ಕ್ರಿಸ್ತನ  ಹಿಡಿದುಕೊಳ್ಳಬೇಕು ಅನ್ನೋದು ಅವರ ಉದ್ದೇಶವಾಗಿದೆ.

    SIDDRAMAIHA

    ಡಿಸೆಂಬರ್ 30 ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಸರ್ಕಾರ ನಡೆಯುತ್ತದೆ. ನಮ್ಮಲ್ಲಿ ಭಾಷಾ ಸಂಘರ್ಷ ಇಲ್ಲ. ನಾವು ಸಾಮರಸ್ಯ ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ. ಸಂಘರ್ಷದ ಅವಶ್ಯಕತೆ ಇಲ್ಲ. ಮಹಾರಾಷ್ಟ್ರದವರು ಸಹ ನಮ್ಮ ಸಹೋದರರು ಎಂದು ಹೇಳಿದರು.

  • ಮೇಕೆದಾಟು ಯೋಜನೆಗೆ ತಮಿಳುನಾಡಿನವರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ: ಗೋವಿಂದ್ ಕಾರಜೋಳ

    ಮೇಕೆದಾಟು ಯೋಜನೆಗೆ ತಮಿಳುನಾಡಿನವರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ: ಗೋವಿಂದ್ ಕಾರಜೋಳ

    ಹಾಸನ: ಮೇಕೇದಾಟು ಯೋಜನೆ ಜಾರಿ ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯಕ್ಕೆ ಧಕ್ಕೆ ಯಾಗದ ರೀತಿ ಕೆಲಸ ಮಾಡಲಾಗುವುದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ನೀರಾವರಿ ಸಚಿವ ಗೋವಿಂದ್ ಕಾರಜೋಳ ತಿಳಿಸಿದರು.

    ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ ಯೋಜನೆ ಕಾಮಗಾರಿಸ್ಥಳ ವೀಕ್ಷಣೆಗೂ ಮುನ್ನಾ, ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದೆ, ನೀರಾವರಿ ಯೋಜನೆಯಲ್ಲ. ಆದ್ದರಿಂದ ತಮಿಳುನಾಡಿಗೆ ಕೊಡಬೇಕಾದ ನೀರನ್ನು ಕೊಡುತ್ತೇವೆ. ಯೋಜನೆ ವಿಚಾರವಾಗಿ ತಮಿಳುನಾಡು ವಿನಾಕಾರಣ ಕೇಸ್ ಹಾಕಿದೆ. ನಾವೂ ಕೂಡ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ಖಂಡಿತವಾಗಿ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ

    mekedatu 1 1

    ನೆಲಜಲ ರಕ್ಷಣೆ ಪ್ರಶ್ನೆ ಬಂದಾಗ ಬಿಜೆಪಿಯವರು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಈ ವಿಷಯದಲ್ಲಿ ರಾಜಕೀಯ ಗಿಮಿಕ್ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಪಕ್ಷದ ವಿಷಯ ಬರಲ್ಲ, ರಾಜ್ಯದ ವಿಷಯವಷ್ಟೆ ಬರುತ್ತೆ ಎಂದು ಹೇಳಿದರು.

    mekedatu

    ಬೆಳಗಾವಿ ಗೆಲುವು ಸಂತಸ ತಂದಿದೆ

    ನಮ್ಮ ಅಭಿವೃದ್ಧಿ ಕೆಲಸಕ್ಕೆ ಮನ್ನಣೆಯಾಗಿ ನಿರೀಕ್ಷೆಯಂತೆ ಬೆಳಗಾವಿ ಮತದಾರರು ಪಕ್ಷಕ್ಕೆ ಬೆಂಬಲಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಅಲ್ಲದೆ ಜನರ ಪ್ರೀತಿ ವಿಶ್ವಾಸ ನಂಬಿಕೆಗೆ ದ್ರೋಹ ಬಗೆಯದೆ ಆಡಳಿತ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ನಮ್ಮ ಪಾಲಾಗಿದೆ ಎಂದರು.

    vote

    ಈ ಭಾಗದ ಪಕ್ಷದ ಶಾಸಕರು, ನಾಯಕರು ಶ್ರಮ ಹಾಕಿ ನಮ್ಮನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನ ಜನ ಬಯಸಿದ ಆಡಳಿತ ನೀಡಿ ಪ್ರಭುತ್ವ ಸಾಧಿಸುತ್ತೇವೆ. ಯಾವತ್ತೂ ಕೂಡ ಬೆಳಗಾವಿಯಲ್ಲಿ ಬಹುಮತ ಇರಲಿಲ್ಲ. ಇಂದಿನ ಗೆಲುವು ಸಂತಸ ತಂದಿದೆ. ಉತ್ತಮ ಆಡಳಿತದ ಮೂಲಕ ಜನರ ಋಣ ತೀರುಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ: ರಮ್ಯಾ

    ಹುಬ್ಬಳ್ಳಿ, ಧಾರವಾಡದಲ್ಲಿ ಮತ್ತೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಜನ ನೆಮ್ಮದಿಯಿಂದ ಇರುವಂತೆ ಆಡಳಿತ ನೀಡುವ ಭರವಸೆ ನೀಡಿದ ಅವರು ಈ ಎಲ್ಲಾ ಬೆಳವಣಿಗೆಗೆ ನರೇಂದ್ರ ಮೋದಿ ನಮ್ಮ ಪಕ್ಷದ ರೋಲ್ ಮಾಡೆಲ್. ಅವರ ಧ್ಯೇಯ ವಾಕ್ಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಂತೆ ಅಡಳಿತ ನಡೆಸುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್

    ಕಲ್ಬುರ್ಗಿಯಲ್ಲಿ ಕ್ಯಾಲುಕೆಲೇಷನ್ ಸ್ವಲ್ಪ ತಪ್ಪಾಗಿದೆ. ಇಲ್ಲದಿದ್ದರೆ ಬಿಜೆಪಿ ಇನ್ನಷ್ಟು ಹೆಚ್ಚು ಸ್ಥಾನ ಪಡೆಯುತ್ತಿತ್ತು . 2023ರ ಚುನಾವಣೆಯಲ್ಲೂ ಬಿಜೆಪಿ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

  • ಮೇಕೆದಾಟು ಮಾಡೇ ಮಾಡುತ್ತೇವೆ, ನಾಡಿನ ರಕ್ಷಣೆ ನಮ್ಮ ಹೊಣೆ: ಜಿಎಂ ಸಿದ್ದೇಶ್ವರ್

    ಮೇಕೆದಾಟು ಮಾಡೇ ಮಾಡುತ್ತೇವೆ, ನಾಡಿನ ರಕ್ಷಣೆ ನಮ್ಮ ಹೊಣೆ: ಜಿಎಂ ಸಿದ್ದೇಶ್ವರ್

    – ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ನನ್ನ ವಿರೋಧವಿಲ್ಲ

    ದಾವಣಗೆರೆ: ಯಾರೇ ಪ್ರತಿಭಟನೆ ಮಾಡಲಿ ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮೇಕೆದಾಟು ಯೋಜನೆ ಕುರಿತು ಮಾತನಾಡಿದ್ದಾರೆ. ಈಗಾಗಲೇ ಸಿಎಂ ನಿರ್ಧಾರ ಮಾಡಿದ್ದಾರೆ. ಮೇಕೆದಾಟು ಮಾಡೇ ಮಾಡುತ್ತೇವೆ. ನಾವು ಯಾರಿಗೂ ಜಗ್ಗಲ್ಲ ಬಗ್ಗಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಏನು ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ನಾಡಿನ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಮೇಕೆದಾಟು ಮಾಡೇ ಮಾಡುತ್ತೇವೆ ಎಂದಿದ್ದಾರೆ.

    Mekedatu project 5

    ಇದೇ ವೇಳೆ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ನಾನು ವಿರೋಧ ಮಾಡಲ್ಲ. ಕ್ಯಾಂಟಿನ್ ಹೆಸರಿನಲ್ಲಿ ನಾನಾ ರೀತಿಯಲ್ಲಿ ವಿರೋಧ ಆಗುತ್ತಿದೆ. ಇಂದಿರಾ ಗಾಂಧಿ ನಮ್ಮ ದೇಶದ ಲೀಡರ್ ಆಗಿದ್ದವರು. ದೇಶದ ಪ್ರಧಾನಿಯಾಗಿ ಹತ್ತು ಹದಿನೈದು ವರ್ಷ ಆಡಳಿತ ಮಾಡಿದವರಾಗಿದ್ದಾರೆ. ವಾಜಪೇಯಿ, ಇಂದಿರಾ ಗಾಂಧಿ ಆಡಳಿತ ಅಲ್ಲಗೆಳೆಯಲು ಆಗಲ್ಲ. ಆದ್ದರಿಂದ ಈ ಬಗ್ಗೆ ನಾನು ವಿರೋಧ ಮಾಡಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡುತ್ತೆ. ಹುಕ್ಕಾ ಬಾರ್ ಬಗ್ಗೆ ನನಗೆ ಏನಂತ ಗೊತ್ತಿಲ್ಲ ಎಂದ ಸಿದ್ದೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ:  ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ

    Mekedatu project 1

    ಏನಿದು ಮೇಕೆದಾಟು ಯೋಜನೆ?
    ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ ಮೇಕೆದಾಟು. ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುತ್ತದೆ.

    Mekedatu project 4

    ಕರ್ನಾಟಕಕ್ಕೆ ಈ ಅಣೆಕಟ್ಟು ಅಗತ್ಯ ಯಾಕೆ?
    ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್‍ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್‍ನ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ.

  • ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ

    ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ

    ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಆಡಳಿತಾರೂಢ ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡಿನ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದೆ, ಆ ನಿಲುವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಬೆಂಬಲಿಸುತ್ತಿದ್ದಾರೆ. ಯಾಕೆ ಈ ದಂದ್ವನೀತಿ? ಈ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತಳೆದಿರುವ ಗಟ್ಟಿನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    c t RAVI 1

    ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗುಮಾರಿಗಳ ಬಾಯಿ ಮುಚ್ಚಿಸದೆ ಹೋದರೆ ಅನಗತ್ಯವಾಗಿ ಇದೊಂದು ಆಂತರಿಕ ವಿವಾದವಾಗಿ ನಾವು ನಾವೇ ಕಚ್ಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ಅದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರು, ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯ ಇಲ್ಲ ಎಂದರು.

    ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಪಕ್ಷ ರಾಜಕೀಯ ಮಾಡಲು ಹೋಗುವುದಿಲ್ಲ, ಯಾವ ಬಗೆಯ ರಾಜಿಯನ್ನೂ ಮಾಡುವುದಿಲ್ಲ. ಅಧಿಕಾರದಲ್ಲಿರಲಿ, ಇಲ್ಲದೆ ಇರಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಗಳು ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ತಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಬೇಕು ಎಂದರು.

    BOMMAI 2

    ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಣ್ಣುಮುಚ್ಚಾಲೆ ಆಟ ಆಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿ ನ್ಯಾಯದ ಪರವಾದ ಗಟ್ಟಿನಿಲುವು ತೆಗೆದುಕೊಳ್ಳಬೇಕು. ಅನಗತ್ಯ ತಕರಾರು ತೆಗೆಯುತ್ತಿರುವ ತಮಿಳುನಾಡು ಸರ್ಕಾರಕ್ಕೆ ಬಿಗಿಮಾತಿನಿಂದ ಬುದ್ದಿ ಹೇಳಬೇಕು. ಮಹದಾಯಿ ಯೋಜನೆಯ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ತಳೆದ ದಂದ್ವ ನಿಲುವು ರಾಜ್ಯದ ಹಿತಾಸಕ್ತಿಗೆ ಮಾರಕವಾಯಿತು. ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷಗಳಲ್ಲಿ ನದಿನೀರು ಹಂಚಿಕೆಯಲ್ಲಿ ಯಾವುದೇ ವ್ಯತ್ಯಯವಾಗದೆ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದು ಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ ಎಂದರು.

    mekedatu 2

    ಕೆ.ಆರ್.ಎಸ್ ಜಲಾಶಯದಿಂದ ಅನಿಯಂತ್ರಿತವಾಗಿ ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರಿನಲ್ಲಿ 64 ಟಿಎಂಸಿ ನೀರನ್ನು ಬಳಸಿಕೊಂಡು ರೂಪಿಸಲಾಗಿರುವ ಮೇಕೆದಾಟು ಯೋಜನೆಯ ಮೊದಲ ಪ್ರಸ್ತಾವವವನ್ನು 2013ರಲ್ಲಿ ನಮ್ಮ ಸರ್ಕಾರ ಸಲ್ಲಿಸಿತ್ತು. 2019ರಲ್ಲಿ ನಮ್ಮದೇ ಸಂಯುಕ್ತ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ನಮ್ಮ ಪಕ್ಷ ಈ ಯೋಜನೆಗೆ ಬದ್ಧವಾಗಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವ ಹಾನಿಯೂ ಇಲ್ಲ. ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಹಿಂದಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಂತೆ ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ನೆರೆ ರಾಜ್ಯಗಳ ಜೊತೆ ಸೌಹಾರ್ದಯುತ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಕಣಿವೆ ರಾಜ್ಯಗಳ ಅನುಮತಿ ಅಗತ್ಯ – ಕೇಂದ್ರದ ಉತ್ತರಕ್ಕೆ ಪ್ರಜ್ವಲ್ ಕೆಂಡಾಮಂಡಲ

    ಮೇಕೆದಾಟು ಮೂಲಭೂತವಾಗಿ ಬೆಂಗಳೂರು-ಮೈಸೂರು ನಗರಗಳಿಗಾಗಿ ರೂಪಿಸಿರುವ ಕುಡಿಯುವ ನೀರಿನ ಯೋಜನೆ. ಬೆಂಗಳೂರಿನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು ಭಾಷಿಕರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಜನರಿದ್ದಾರೆ. ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿ ಅಲ್ಲ. ತಮಿಳುನಾಡು ಸರ್ಕಾರ ಕೂಡಾ ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅವುಗಳನ್ನು ಕರ್ನಾಟಕ ವಿರೋಧಿಸಿಲ್ಲ. ಪ್ರಾಕೃತಿಕ ಸಂಪತ್ತನ್ನು ಹಂಚಿಕೊಂಡು ಬೆಳೆಯಬೇಕು ಎನ್ನುವುದು ನಮ್ಮ ನಿಲುವು. ತಮಿಳುನಾಡು ಹಠ ಹಿಡಿದು ಮೇಕೆದಾಟು ಯೋಜನೆಯನ್ನು ವಿರೋಧಿಸಿದರೆ ರಾಜಕೀಯ ಸಂಘರ್ಷ ಅನಿವಾರ್ಯವಾಗಬಹುದು ಎಂದೂ ಅವರು ಇದೇ ವೇಳೆ ಎಚ್ಚರಿಸಿದರು. ಇದನ್ನೂ ಓದಿ: ಮೇಕೆದಾಟು ವಿಚಾರ – ಉಪವಾಸ ಸತ್ಯಾಗ್ರಹ ಮಾಡ್ತೀವಿ ಎಂದಿರೋ ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು

  • ಖಾತೆ ಹಂಚಿಕೆ ವಿಚಾರದಲ್ಲಿ ಇಬ್ಬರಿಗೆ ಮಾತ್ರ ಅಸಮಾಧಾನ, ಸಿಎಂ ಸರಿಪಡಿಸುತ್ತಾರೆ: ಕೆ.ಎಸ್.ಈಶ್ವರಪ್ಪ

    ಖಾತೆ ಹಂಚಿಕೆ ವಿಚಾರದಲ್ಲಿ ಇಬ್ಬರಿಗೆ ಮಾತ್ರ ಅಸಮಾಧಾನ, ಸಿಎಂ ಸರಿಪಡಿಸುತ್ತಾರೆ: ಕೆ.ಎಸ್.ಈಶ್ವರಪ್ಪ

    – ಅಣ್ಣಾಮಲೈ ಉಪವಾಸ ಮಾಡಿದ್ರೆ ನಮಗೆ ಸಂಬಂಧವಿಲ್ಲ
    – ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ

    ಶಿವಮೊಗ್ಗ: ನೂತನ ಸಚಿವರಿಗೆ ಮುಖ್ಯಮಂತ್ರಿ ಅವರು ಈಗಾಗಲೇ ಖಾತೆ ಹಂಚಿಕೆ ಮಾಡಿದ್ದಾರೆ. ಆದರೆ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಅವರು ಮಾತ್ರ ತಮಗೆ ಬೇರೆ ಬೇರೆ ಖಾತೆ ಬೇಕು ಎಂದು ಕೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಅವರು ಇಬ್ಬರನ್ನು ಸಮಾಧಾನ ಪಡಿಸುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಖಾತೆ ಹಂಚಿಕೆಯಲ್ಲಿ ಆಗಲಿ, ಸಚಿವ ಸಂಪುಟದಲ್ಲಿ ಆಗಲಿ ಯಾವುದೇ ಗೊಂದಲವಿಲ್ಲ. ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ಅವರ ಭಾವನೆಗಳನ್ನು ತೋಡಿಕೊಂಡಿದ್ದಾರೆ ಅಷ್ಟೇ. ಅವರಿಬ್ಬರು ಮುಖ್ಯಮಂತ್ರಿ ಅವರ ಬಳಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತಾರೆ. ಇದರಲ್ಲಿ ಬಹಳ ವಿಶೇಷ ಏನು ಇಲ್ಲ ಎಂದರು.

    K S Eshwarappa 1

    ಇನ್ನು ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಮಾತನಾಡಿದ ಸಚಿವರು ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪಿನ ಅನುಸಾರ ಮೇಕೆದಾಟು ಯೋಜನೆ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕು ಮೇಕೆದಾಟು ಯೋಜನೆ ನಿಲ್ಲುವುದಿಲ್ಲ ಎಂದರು.

    K S Eshwarappa 1

    ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಉಪವಾಸ ಆದರೂ ಮಾಡಲಿ, ಏನಾದರೂ ಮಾಡಲಿ ಅದು ನಮಗೆ ಸಂಬಂಧವಿಲ್ಲ. ರಾಜಕಾರಣಿಯಾಗಿ ಅವರ ರಾಜ್ಯಕ್ಕೆ ಏನು ಬೇಕು ಅದನ್ನ ಅವರು ಯೋಚನೆ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಅವರ ರಾಜ್ಯಕ್ಕೆ ಒಳ್ಳೆಯದಾಗುವ ದಿಕ್ಕಿನಲ್ಲಿ ಹೋರಾಟ ಮಾಡಿ, ಅಲ್ಲಿ ಪಕ್ಷವನ್ನು ಕಟ್ಟಿಕೊಳ್ಳಲಿ. ಅದರ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಅವರು ಗಮನ ಹರಿಸಲಿ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

    annamalai 3

    ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಆಗಿ ಆಶೀರ್ವಾದ ಪಡೆದಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯ ರಾಜಕಾರಣಿ, ರೈತ ನಾಯಕರು ಅಂತಾ ಭೇಟಿ ಆಗಿದ್ದಾರೆ ಹೊರತು ಜೆಡಿಎಸ್ ನಾಯಕರು ಅಂತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು

    Bommai HDD 2

    ಹಾಸನ ಅಂತಹ ಜಿಲ್ಲೆಯಲ್ಲಿ ದೇವೇಗೌಡರು, ರೇವಣ್ಣ ಹಾಗೂ ಕುಮಾರಸ್ವಾಮಿ ಅವರ ಶಕ್ತಿ ಮೀರಿ ಒಬ್ಬ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ಹಾಸನದಲ್ಲಿ ಸಂಘಟನೆ ಕಟ್ಟಬೇಕು ಎಂಬ ಪ್ರಯತ್ನವನ್ನು ಸಹ ಪ್ರೀತಂಗೌಡ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ದೇವೇಗೌಡರ ಭೇಟಿ ಆಗಿದ್ದು ಸಮಾಧಾನ ತಂದಿಲ್ಲ ಎನಿಸುತ್ತದೆ ಎಂದರು. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು? ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    Bommai HDD 3

    ಸಿಎಂ ಬೊಮ್ಮಾಯಿ ಅವರು ದೇವೇಗೌಡರು ಜೆಡಿಎಸ್ ನಾಯಕರು ಎಂದು ಭೇಟಿ ಆಗಿಲ್ಲ. ಮಾಜಿ ಪ್ರಧಾನಿ ಎಂದು ಭೇಟಿ ಆಗಿದ್ದಾರೆ. ದೇವೇಗೌಡರು ಅವರ ಅಧಿಕಾರದ ಅವಧಿಯಲ್ಲಿ ಒಳ್ಳೆ ಒಳ್ಳೆಯ ಕೆಲಸ ಏನು ಮಾಡಿದ್ದರು, ಅದನ್ನ ಧಾರೆ ಎರೆಯಲಿ, ಆಶೀರ್ವಾದ ಎಂಬ ಉದ್ದೇಶದಿಂದ ಬೊಮ್ಮಾಯಿ ಭೇಟಿ ಆಗಿದ್ದಾರೆ ಎಂಬ ಮನವರಿಕೆಯನ್ನ ಪ್ರೀತಂಗೌಡರಿಗೆ ಮಾಡಿಸುತ್ತೇವೆ. ಜೊತೆಗೆ ಯಾವುದೇ ಕಾರಣಕ್ಕೂ ನಮ್ಮ ರಾಜಕಾರಣಕ್ಕೆ ಬಿಜೆಪಿ ಚಟುವಟಿಕೆಗೆ ಬೊಮ್ಮಾಯಿ, ದೇವೇಗೌಡರ ಭೇಟಿ ತೊಂದರೆ ಆಗುವುದಿಲ್ಲ ಎಂಬುದನ್ನು ಸಹ ತಿಳಿಸುತ್ತೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣೇಶ್ವರಿ ಹೆಸರಿಟ್ರೇ ತಪ್ಪೇನು?- ಸುಧಾಕರ್ ಪ್ರಶ್ನೆ

  • ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

    ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

    ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬೆನ್ನಲ್ಲೆ ಮೇಕೆದಾಟು ಆರಂಭ ಮಾಡುವುದಾಗಿ ಯಡಿಯೂರಪ್ಪ ಮಾಧ್ಯಮ ಪ್ರಕಟನೆಯ ಮೂಲಕ ಘೋಷಿಸಿದ್ದಾರೆ.

    yediyurappa corona 1 1

    ಪ್ರಕಟನೆಯಲ್ಲಿ ಏನಿದೆ?
    ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ಸಲುವಾಗಿ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಹಾಗೂ ಈ ಯೋಜನೆಯ ನಿರ್ಮಾಣದಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ತಿಳಿಯಪಡಿಸಲಾಗಿತ್ತು. ಆದರೆ ತಮಿಳುನಾಡು ಸರ್ಕಾರವು ಈ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ವ್ಯಾಖ್ಯಾನಿಸಿದೆ. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

    MEKEDATU SUPREME COURT

    ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು 4,75 ಟಿಎಂಸಿ ನೀರನ್ನು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದು, ಸದರಿ Consumptive ಪ್ರಮಾಣವು ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ತಮಿಳುನಾಡು ರಾಜ್ಯಕ್ಕೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗವುದಿಲ್ಲ, ವಾಸ್ತವಿಕವಾಗಿ ನೀರಿನ ಹರಿವಿನಲ್ಲಿ ಅನುಕೂಲವಾಗುತ್ತದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಗೆ ವಿರೋಧಿಸುತ್ತದೆ. ಈ ಕುರಿತು 2018ರಲ್ಲಿ ತಮಿಳುನಾಡು ರಾಜ್ಯವು ದಾವೆಯನ್ನು (ಮಿಸಲೇನಿಯಸ್ ಅಪ್ಲಿಕೇಷನ್) ಸಲ್ಲಿಸಿದೆ. ಆದರೆ, ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಅಡೆತಡೆ ಇರುವುದಿಲ್ಲ.

    ಯೋಜನೆಯನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮಕೈಗೊಳ್ಳಲಾಗಿದ್ದು, ಶೀಘ್ರವಾಗಿ ತೀರುವಳಿಗಳನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಮೇಕೆದಾಟು ಯೋಜನೆಯನ್ನು ಪ್ರಾರಂಭಿಸಲಾಗುವುದು.

  • 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ, ತನಿಖೆ ಯಾಕಿಲ್ಲ? ಸರ್ಕಾರಕ್ಕೆ ಹೆಚ್‍ಡಿಕೆ ಪ್ರಶ್ನೆ

    2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ, ತನಿಖೆ ಯಾಕಿಲ್ಲ? ಸರ್ಕಾರಕ್ಕೆ ಹೆಚ್‍ಡಿಕೆ ಪ್ರಶ್ನೆ

    – ನಿರ್ಲಕ್ಷ್ಯ ತೋರಿಸದೇ ಮೇಕೆದಾಟು ಯೋಜನೆ ಪೂರ್ಣಗೊಳಿಸಿ

    ಬೆಂಗಳೂರು: ಸರ್ಕಾರದ ವಿರುದ್ಧವೇ ಸ್ವಪಕ್ಷೀಯರು ಮಾಡಿರುವ 2 ಸಾವಿರ ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಯಾಕಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    2006ರಲ್ಲಿ ಸಿಎಂ ಆಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ ರೂ 150 ಕೋಟಿ ಗಣಿ ಲಂಚ ಆರೋಪ ಮಾಡಿದ್ದರು. ಸರ್ಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾದುಕೊಂಡಿದ್ದೆ. ಈಗಿನ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ರೂ 2000 ಕೋಟಿ ನೀರಾವರಿ ಕಿಕ್‍ಬ್ಯಾಕ್ ಆರೋಪ ಮಾಡಿದ್ದಾರೆ. ಈಗ ತನಿಖೆ ಯಾಕಿಲ್ಲ?

    MND HDK 2 medium

    ರಾಕ್ಷಸ ಸರ್ಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರ್ಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಸಿಎಂ ಯಡಿಯೂರಪ್ಪ 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

    ಈ ಭ್ರಷ್ಟಾಚಾರದ ಆರೋಪದಲ್ಲಿ ಅನ್ಯರ ಹಸ್ತಕ್ಷೇಪದ ಆರೋಪವಿದೆ. ಆಡಳಿತದಲ್ಲಿ, ಅದೂ ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಸೇವೆಯಲ್ಲಿ ತೊಡಗಿರುವ ಸರ್ಕಾರದಲ್ಲಿ ಸಂಬಂಧವೇ ಇಲ್ಲದವರ ಹಸ್ತಕ್ಷೇಪ ಸರಿಯಲ್ಲ. ಹೀಗಾಗಿ ಅನ್ಯರ ಹಸ್ತಕ್ಷೇಪದ ವಿಚಾರದಲ್ಲಿಯೂ ಗಂಭೀರ ತನಿಖೆ ನಡೆಯಬೇಕು.

    MYS HDK

    ಮೇಕೆದಾಟು ಯೋಜನೆ ಶೀಘ್ರ ಪೂರ್ಣಗೊಳಿಸಿ:
    ಮೇಕೆದಾಟು ಯೋಜನೆ ವಿಚಾರವಾಗಿ ಎನ್‍ಜಿಟಿ ದಕ್ಷಿಣ ಪೀಠ ಆರಂಭಿಸಿದ್ದ ಸ್ವಯಂ ಪ್ರೇರಿತ ವಿಚಾರಣೆಯನ್ನು ಪ್ರಧಾನ ಪೀಠ ಇತ್ಯರ್ಥಪಡಿಸಿದೆ. ಯೋಜನೆಗಿದ್ದ ಅಡ್ಡಿಯೊಂದು ನಿವಾರಣೆಯಾಗಿದೆ. ಈಗ ಕೇಂದ್ರದಿಂದ ಶೀಘ್ರವೇ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದರತ್ತ ರಾಜ್ಯ ಸರ್ಕಾರ ಗಮನಹರಿಸಬೇಕು. ಕೇಂದ್ರವೂ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು.

    ಕೇಂದ್ರ-ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುವುದಾಗಿ ಬಿಜೆಪಿ ಹೇಳಿತ್ತು. ಸ್ವರ್ಗ ಬೇಡ, ಅನಿಶ್ಚಿತತೆಯಲ್ಲಿ ತೂಗುತ್ತಿರುವ ಮೇಕೆದಾಟು ಯೋಜನೆಗೆ ಪರಿಸರ ಅನುಮತಿಯನ್ನು ಶೀಘ್ರ ಪಡೆದುಕೊಂಡರೆ ಸಾಕು. ನಮ್ಮ ನೆಲ, ಜಲ, ಧನ ಬಳಸಿ ನಮ್ಮವರ ದಾಹ ನೀಗಿಸುವ ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಇನ್ನು ನಿರ್ಲಕ್ಷ್ಯ ತೋರಬಾರದು.

    mekedatu 1 1

    ಕೇಂದ್ರದ ಅನುಮತಿ ಸಿಕ್ಕ ಕೂಡಲೇ ಯೋಜನೆ ಆರಂಭಿಸುವ ಯಡಿಯೂರಪ್ಪ ಹೇಳಿಕೆಯನ್ನು ಸೋದರ ಎಂ.ಕೆ.ಸ್ಟಾಲಿನ್ ವಿರೋಧಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿರುವ ಪ್ರಕರಣವೊಂದರಲ್ಲಿ ಕರ್ನಾಟಕ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂಬುದು ಅವರ ಆರೋಪ. ವಿಚಾರಣೆಯಾಗುತ್ತಿರುವ ಯೋಜನೆಯೊಂದಕ್ಕೆ ತಡೆ ತರಲು ಪ್ರಧಾನಿಯನ್ನು ಭೇಟಿಯಾಗಿದ್ದೂ ತಪ್ಪಲ್ಲವೇ?

    ಹೊಗೇನಕಲ್ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ತಮಿಳುನಾಡು ಯಾವ ರೀತಿ ನಡೆದುಕೊಂಡಿತು ಎಂದು ನಾನು ಹೇಳಬೇಕಿಲ್ಲ. ಆ ಯೋಜನೆ ಆಗಿದ್ದು
    ಎಂ. ಕೆ. ಸ್ಟಾಲಿನ್ ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ. ಕುಡಿಯುವ ನೀರಿನ ನೆಪವೊಡ್ಡಿ ತಮಿಳುನಾಡು ಕರ್ನಾಟಕದ ಗಡಿ ದಾಟಿ ಬಂದಿತ್ತು. ಸಮರ್ಥನೆಯನ್ನೂ ಮಾಡಿಕೊಂಡಿತ್ತು. ಮೇಕೆದಾಟು ಕೂಡ ಕುಡಿಯುವ ನೀರಿನ ಯೋಜನೆಯೇ.

    Mekedatu project 5

    ಮೇಕೆದಾಟು ಯೋಜನೆಯನ್ನು ಯಾವ ಕೋನದಲ್ಲಿ ನೋಡಿದರೂ ಅದು ನ್ಯಾಯವಾಗೇ ಕಾಣುತ್ತದೆ. ಹೀಗಾಗಿ ವಿವಾದ ಅನಗತ್ಯ. ಕಾವೇರಿಗಾಗಿ ಕಲಹ ನಡೆದದ್ದು ಸಾಕು. ಈಗ ನಾವು ಸೋದರತೆ ಮೆರೆಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಸೋದರ ಎಂ.ಕೆ.ಸ್ಟಾಲಿನ್ ಅವರಿಗೆ ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಅನಗತ್ಯ ಕಲಹದಲ್ಲಿ, ಅದೂ ಈ ಹೊತ್ತಲ್ಲಿ ನಾವು ಒಡೆದುಹೋಗಬಾರದು.

    ಡಿಸಿಎಂ ಸ್ಪಷ್ಟನೆ ಸಮಾಧಾನ ತಂದಿದೆ:
    ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಆರಂಭವಾಗಲಿರುವ 4 ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು 1 ವರ್ಷಕ್ಕೆ ಸೀಮಿತಗೊಳಿಸುವ ಉನ್ನತ ಶಿಕ್ಷಣ ಸಮಿತಿಯ ಪ್ರಸ್ತಾವ ನಿರಾಸೆ ತಂದಿದೆ. ಕನ್ನಡ ಭಾಷಾ ಕಲಿಕೆ ಅದೊಂದು ವಿಷಯ ಮಾತ್ರವಲ್ಲ, ಯುವ ಸಮುದಾಯದಲ್ಲಿ ಸಾಕ್ಷಿಪ್ರಜ್ಞೆ ಬಿತ್ತುವ, ಅವರನ್ನು ಸೂಕ್ಷ್ಮಮತಿಗಳನ್ನಾಗಿ ಮಾಡುವ ಯಶಸ್ವಿ ಪ್ರಯತ್ನ. ಇದನ್ನೂ ಓದಿ: ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    Ashwath Narayana medium

    ರಕ್ತಕ್ಕೆ ಅಂಟಿದ ಭಾಷೆ ಕಲಿಕೆಯನ್ನು 1 ವರ್ಷಕ್ಕೆ ಮಿತಿಗೊಳಿಸುವುದು ಅವೈಜ್ಞಾನಿಕ. ಈ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಈಗಿನ ವ್ಯವಸ್ಥೆಯಂತೆ 2 ವರ್ಷದ ಕನ್ನಡ ಕಲಿಕೆಗೆ ತೊಂದರೆ ಇಲ್ಲ ಎಂದು ಹೇಳಿರುವುದು ಸ್ವಲ್ಪ ಸಮಾಧಾನ ತಂದಿದೆ. ಅದರೆ, 1 ವರ್ಷಕ್ಕೆ ಮಿತಿಗೊಳಿಸುವ ಪ್ರಯತ್ನಗಳು ನಡೆದರೆ ಪರಿಣಾಮ ಕೆಟ್ಟದಾಗುತ್ತದೆ. ಇದನ್ನೂ ಓದಿ: ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಅಶ್ವತ್ಥ ನಾರಾಯಣ

  • ಮೇಕೆದಾಟು ಯೋಜನೆಗೆ ಅಧಿಸೂಚನೆ ಹೊರಡಿಸಿ- ಶೇಖಾವತ್‍ ಬಳಿ  ಜಾರಕಿಹೊಳಿ ಮನವಿ

    ಮೇಕೆದಾಟು ಯೋಜನೆಗೆ ಅಧಿಸೂಚನೆ ಹೊರಡಿಸಿ- ಶೇಖಾವತ್‍ ಬಳಿ ಜಾರಕಿಹೊಳಿ ಮನವಿ

    ನವದೆಹಲಿ: ಮೇಕೆದಾಟು ಯೋಜನೆಗೆ ಕೂಡಲೇ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು.

    ನವದೆಹಲಿಯ ಜಲಶಕ್ತಿ ಮಂತ್ರಾಲಯದಲ್ಲಿ ಭೇಟಿ ಮಾಡಿದ ಅವರು, ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಕುರಿತು ಕೇಂದ್ರ ಸಚಿವರನ್ನು ಒತ್ತಾಯಿಸಿದರು. ಜೊತೆಗೆ ಕೃಷ್ಣ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆಯೂ ಮನವಿ ಮಾಡಿದರು.

    mekedatu 1 1

    ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಯೋಜನೆಗೆ ಅನುಮತಿ ಕೋರಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಶೇಖಾವತ್ ಅವರಿಗೆ ಒತ್ತಾಯಿಸಿದರು. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

    ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ಎಂಡಿ ಜೈಪ್ರಕಾಶ್ ಉಪಸ್ಥಿತರಿದ್ದರು.

    mekedatu medium

  • 2018ರ ಕರ್ನಾಟಕದ ಟಾಪ್ ಸುದ್ದಿಗಳು

    2018ರ ಕರ್ನಾಟಕದ ಟಾಪ್ ಸುದ್ದಿಗಳು

    ಬೆಂಗಳೂರು: ಈ ಬಾರಿ ಕರ್ನಾಟಕ ಚುನಾವಣೆ ದೇಶದ ಗಮನ ಸೆಳೆದಿತ್ತು. ಚುನಾವಣೆಯ ಇದ್ದ ಕಾರಣ ಜನವರಿಯಿಂದ ಮೇ ವರೆಗೆ ಚುನಾವಣಾ ಸುದ್ದಿಗಳು ಪ್ರಾಮುಖ್ಯತೆ ಪಡೆದಿದ್ದರೆ ನಂತರ ಸರ್ಕಾರದ ಭಿನ್ನಮತ, ಸಂಪುಟ ವಿಸ್ತರಣೆ ಕಸರತ್ತು ಸುದ್ದಿಗಳು ಹೆಚ್ಚು ಚರ್ಚೆಯಾಗುತಿತ್ತು. ಇದರ ಜೊತೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ದುರಂತ ನಡೆದು ಸಾವಿರಾರು ಮಂದಿ ಸಂತ್ರಸ್ತರಾದರು. ಹೀಗಾಗಿ ಇಲ್ಲಿ ಈ ವರ್ಷ ಕರ್ನಾಟಕದಲ್ಲಿ ನಡೆದ ಟಾಪ್ ಸುದ್ದಿಗಳ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

    ಕರ್ನಾಟಕ ಚುನಾವಣೆ:
    2018 ರಾಜ್ಯ ವಿಧಾನಸಭಾ ಚುನಾವಣೆ ಈ ಬಾರಿ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ದೇಶದ ಪ್ರಮುಖ ರಾಜ್ಯಗಳಲ್ಲಿ ಸತತವಾಗಿ ಗೆಲುವು ಪಡೆದಿದ್ದ ಬಿಜೆಪಿಗೆ ದಕ್ಷಿಣ ಭಾರತವನ್ನು ಪ್ರವೇಶ ಮಾಡಲು ಇದ್ದ ಏಕೈಕ ರಾಜ್ಯ ಕರ್ನಾಟಕವಾಗಿದ್ದ ಕಾರಣ ಪ್ರತಿಷ್ಠೆಯ ಕಣವಾಗಿದ್ದರೆ, ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‍ಗೆ ರಾಜ್ಯವನ್ನು ಉಳಿಸಿಕೊಳ್ಳುವ ಮೂಲಕ ಮತ್ತೆ ರಾಷ್ಟ್ರದಲ್ಲಿ `ಮಹಾಘಟ ಬಂಧನ್’ಗೆ ಶಕ್ತಿ ತುಂಬುವ ಕೇಂದ್ರವಾಗಿತ್ತು. ಇದರ ಪರಿಣಾಮವಾಗಿ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಮಾವೇಶಗಳನ್ನು ನಡೆಸಿ ಪಕ್ಷದ ಪರ ಪ್ರಚಾರ ಕೈಗೊಂಡಿದ್ದರು. ಚುನಾವಣೆಯ ಅಂತಿಮ ಫಲಿತಾಂಶ ಬಂದಾಗ ಆಡಳಿತ ಪಕ್ಷವಾದ ಕಾಂಗ್ರೆಸ್ ಕೇವಲ 78 ಸ್ಥಾನ ಪಡೆದಿದ್ದರೆ, ಬಿಜೆಪಿ 104 ಹಾಗೂ ಜೆಡಿಎಸ್ 37 ಸ್ಥಾನ, ಬಿಎಸ್‍ಪಿ 1 ಸ್ಥಾನ ಪಡೆಯುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು.

    elections 1 1

    ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪವರು ಸರ್ಕಾರ ರಚನೆ ಮಾಡಲು ಅವಕಾಶ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದರೆ, ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಯಿತು.

    ರಾಜ್ಯಪಾಲರು 15 ದಿನಗಳ ಕಾಲ ಬಿಜೆಪಿಗೆ ಕಾಲಾವಕಾಶ ನೀಡಿದರೆ, ಇತ್ತ ಇದನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ರಾಜ್ಯಪಾಲರ ಆದೇಶದ ಸಮಯವನ್ನು ಕಡಿಮೆ ಮಾಡಿದರು. ಇದರ ನಡುವೆಯೇ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರು ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್, ಹೋಟೆಲ್‍ಗಳಲ್ಲಿ ತಂಗುವಂತೆ ಮಾಡಿ ಆಪರೇಷನ್ ಕಮಲ ವಿಫಲ ಮಾಡಿದರು. ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸುವ ಮೂಲಕ ಸರ್ಕಾರ ರಚನೆ ಮಾಡಿತು.

    cng 1 1

    ಸುಳ್ವಾಡಿ ದುರಂತ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 14 ರ ಶುಕ್ರವಾರ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 16 ಮಂದಿ ಮೃತಪಟ್ಟಿದ್ದರು. ಘಟನೆ ನಡೆದ 6 ದಿನಗಳ ಬಳಿಕ ಪ್ರಕರಣಕ್ಕೆ ಕಾರಣರಾಗಿದ್ದ ಪ್ರಮುಖ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    MND Bus Accident

    ಕನಗನಮರಡಿ ಬಸ್ ದುರಂತ: ಜಿಲ್ಲೆಯ ಪಾಂಡವಪುರದ ಕನಗನಮರಡಿಯಲ್ಲಿ ನವೆಂಬರ್ 24 ರಂದು ನಡೆದ ಬಸ್ ದುರಂತ ಪ್ರಕರಣ 30 ಮಂದಿಯನ್ನು ಬಲಿ ಪಡೆಯಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕನಗನಮರಡಿ ವಿಸಿ ನಾಲೆಗೆ ಉರುಳಿತ್ತು. ಇದರಿಂದ ಬಸ್ಸಿನಲ್ಲಿದ್ದ 30 ಮಂದಿ ಜಲಸಮಾಧಿಯಾದರು. ಬಸ್ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಮಾತ್ರ ಜೀವ ರಕ್ಷಿಸಿಕೊಂಡಿದ್ದರು. ನಾಲೆಗೆ ತಡೆಗೋಡೆ ಇಲ್ಲದೆ ಇರುವುದು ಹಾಗೂ ಬಸ್ ಸೇವೆಗೆ ಯೋಗ್ಯವಲ್ಲದೇ ಇರುವುದು ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.

    ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆಗೆ ಜನವರಿ 16 ರಂದು ರಾಜ್ಯ ಸರ್ಕಾರ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು. ಈ ಯೋಜನೆ ಮುಂದುವರಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕ ಸಂಸದರು ಡಿಸೆಂಬರ್ ನಲ್ಲಿ ದೆಹಲಿಯ ಡಿವಿಎಸ್ ನಿವಾಸದಲ್ಲಿ ಸಭೆ ನಡೆಸಿ ಒಗ್ಗಟ್ಟಿನಿಂದ ಹೋರಾಟ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.

    mekedatu 1 1

    ಲಿಂಗಾಯತ ಧರ್ಮ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದ್ದ ಲಿಂಗಾಯತ ಧರ್ಮ ಹೋರಾಟ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಬೃಹತ್ ಮಟ್ಟದಲ್ಲಿ ನಡೆಯಿತು. ರಾಜ್ಯ ಸರ್ಕಾರವೂ ಈ ಕುರಿತು ಸಮಿತಿ ನೇಮಕ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಕಾಂಗ್ರೆಸ್ ಪಕ್ಷ ಕೆಲ ನಾಯಕರು ಪ್ರತ್ಯೇಕ ಧರ್ಮ ರಚನೆ ಮುಂದಾಳತ್ವ ವಹಿಸಿ ಚುನಾವಣೆ ಎದುರಿಸಿದ್ದರು, ಇದರದಲ್ಲಿ ಅಂದಿನ ಜಲಸಂಪ್ಮೂಲ ಸಚಿವ ಎಂ ಬಿ ಪಾಟೀಲ್ ಬಿಟ್ಟು ಉಳಿದ ಎಲ್ಲಾ ನಾಯಕರು ಸೋಲುಂಡಿದ್ದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ಧರ್ಮ ವಿಚಾರವಾಗಿ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    LINGAYATH PROTEST

    ಮಡಿಕೇರಿ ಜಲ ಪ್ರಳಯ: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದ್ದ ಕೊಡಗು ಈ ಬಾರಿ ಮಹಾ ಮಳೆಯ ಹೊಡೆತಕ್ಕೆ ತತ್ತರಿಸಿತ್ತು. ಕಾಡು ಕಡಿದು ರೆಸಾರ್ಟ್ ನಿರ್ಮಾಣ, ಭೂಮಿಯ ಬಳಕೆಯಲ್ಲಾಗಿರುವ ಬದಲಾವಣೆ, ಅವೈಜ್ಞಾನಿಕವಾಗಿ ಹೋಂ ಸ್ಟೇಗಳ ನಿರ್ಮಾಣ, ನಿರಂತರವಾಗಿ ಸುರಿದ ಭಾರೀ ಮಳೆ, ಅರಣ್ಯ ನಾಶ ಮೊದಲಾದ ಕಾರಣಗಳಿಂದ ಕೊಡಗಿನಲ್ಲಿ ಭೂಕುಸಿತ ಉಂಟಾಗಿ ಜಲ ಪ್ರಳಯ ಸೃಷ್ಟಿಯಾಗಿತ್ತು. ಕೊಡಗಿನ ನೋವಿಗೆ ಮೀಡಿದ ಕನ್ನಡ ಹೃದಯಗಳು ಸಹಾಯ ಹಸ್ತವನ್ನು ಚಾಚಿ ಜನರಿಗೆ ನೆರವು ನೀಡಿದ್ದರು. ಹಲವು ಸಂಘ ಸಂಸ್ಥೆಗಳು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೂ ಕೂಡ ಪ್ರವಾಹ ಸಂತ್ರಸ್ತರ ನೆರವು ಘೋಷಿಸಿತ್ತು. ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿತ್ತು. 1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿದ್ದರೆ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿತ್ತು ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿತ್ತು.

    KODAGU copy

    ದೀಪಕ್ ರಾವ್ ಹತ್ಯೆ: ವರ್ಷದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ, ಇದರ ಬೆನ್ನಲ್ಲೇ ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ಬಶೀರ್ ಅವರನ್ನು ಕೊಲೆ ಮಾಡಲಾಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರವನ್ನು ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಆಸ್ತ್ರವನ್ನಾಗಿ ಪ್ರಯೋಗಿಸಿ ಪ್ರಚಾರ ನಡೆಸಿತ್ತು. ಹಿಂದೂ ಕಾರ್ಯಕರ್ತರ ಹತ್ಯೆಯನ್ನು ತಡೆಯಲು ಸಿದ್ದರಾಮಯ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಸೋತಿದೆ ಎನ್ನುವ ವಿಶ್ಲೇಷಣೆ ಕೇಳಿ ಫಲಿತಾಂಶ ಬಳಿಕ ಕೇಳಿ ಬಂದಿತ್ತು.

    deepak murder 3 1 1

    ಗೌರಿ ಲಂಕೇಶ್ ಆರೋಪಿಗಳ ಬಂಧನ: ಯಾವುದೇ ಸಾಕ್ಷ್ಯಗಳು ಸಿಗದೇ ಪ್ಲಾನ್ ಮಾಡಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊನೆಗೂ ಎಸ್‍ಐಟಿ ಬಂಧಿಸಿತ್ತು. ಕೋಕಾ ಅಡಿ ಪ್ರಕರಣ ದಾಖಲಿಸಿದ್ದ ಎಸ್‍ಐಟಿ ಒಟ್ಟು 18 ಮಂದಿಗಳನ್ನು ಬಂಧಿಸಿ 9,235 ಪುಟಗಳಿರುವ ಚಾರ್ಜ್ ಶೀಟನ್ನು ಕೋಕಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಧಾನ ಸಂಚುಕೋರ ಅಮುಲ್ ಕಾಳೆ ಎ1 ಆರೋಪಿಯಾಗಿದ್ದರೆ, ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಎ2 ಆರೋಪಿಯಾಗಿದ್ದಾನೆ.

    67654 kgrcfcrbnp 1504626192

    ಮಹದಾಯಿ ಐತೀರ್ಪು: ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಆಗಸ್ಟ್ 14 ರಂದು ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಐತೀರ್ಪು ಪ್ರಕಟಿಸಿತ್ತು. ಕುಡಿಯುವ ನೀರಿಗಾಗಿ ಕೇವಲ 5.5 ಟಿಎಂಸಿ ಸೇರಿದಂತೆ ಒಟ್ಟು ಕರ್ನಾಟಕಕ್ಕೆ ಒಟ್ಟು 13.7 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

    ಮಹದಾಯಿ ನದಿಯಲ್ಲಿ ವಾರ್ಷಿಕವಾಗಿ ಲಭ್ಯವಿರುವ 188.06 ಟಿಎಂಸಿ ನೀರಿನಲ್ಲಿ 147 ಟಿಎಂಸಿ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗಲು ಬಿಟ್ಟಿರುವ ಮಹದಾಯಿ ಜಲವಿವಾದ ನ್ಯಾಯಾಧಿಕರಣ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ದೂರಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನದಿಯ ನೀರನ್ನು ನದಿಪಾತ್ರದ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ ‘ನ್ಯಾಯಸಮ್ಮತ ಹಂಚಿಕೆ’ ಸೂತ್ರವನ್ನು ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅನುಸರಿಸಿಲ್ಲ ಎನ್ನುವುದನ್ನು ಕರ್ನಾಟಕ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

    MAHADAYI copy

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಮೇಕೆದಾಟು ಯೋಜನೆ: ತಮಿಳುನಾಡು ಖ್ಯಾತೆಗೆ ರಾಜ್ಯ ಸಂಸದರಿಂದ ಪ್ರತಿಭಟನೆಯ ತಿರುಗೇಟು

    ಮೇಕೆದಾಟು ಯೋಜನೆ: ತಮಿಳುನಾಡು ಖ್ಯಾತೆಗೆ ರಾಜ್ಯ ಸಂಸದರಿಂದ ಪ್ರತಿಭಟನೆಯ ತಿರುಗೇಟು

    ನವದೆಹಲಿ: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ನಡೆ ಖಂಡಿಸಿ ರಾಜ್ಯ ಸಂಸದರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.

    ಕರ್ನಾಟಕದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿದ್ದರ ಬೆನ್ನಲ್ಲೇ ತಮಿಳುನಾಡು ಖ್ಯಾತೆ ತೆಗೆದಿತ್ತು. ಅಲ್ಲದೇ ಯೋಜನೆಗೆ ತಡೆ ಕೋರುವಂತೆ ಪ್ರಧಾನಿಗೆ ಪತ್ರ ಬರೆದಿದ್ದಲ್ಲದೆ, ಕಾನೂನು ಹೋರಾಟ ಹಾಗೂ ಸಂಸತ್ ಬಳಿ ಪ್ರತಿಭಟನೆಯನ್ನು ನಡೆಸಿತ್ತು.

    mekedatu

    ಈ ಹಿನ್ನೆಲೆಯಲ್ಲಿ ತಮಿಳುನಾಡು ನಡೆಯನ್ನು ಖಂಡಿಸಿ, ಇಂದು ಬೆಳಗ್ಗೆ 10 ಗಂಟೆಗೆ ಸಂಸತ್ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಸಂಸದರು ಭಾಗಿಯಾಗಲಿದ್ದಾರೆ. ರಾಜ್ಯದ ಎಲ್ಲ ಸಂಸದರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಚಳಿಗಾಲದ ಸಂಸತ್ ಅಧಿವೇಶನ ಆರಂಭದಿಂದಲೂ ತಮಿಳುನಾಡಿನ ಸಂಸದರು ಸಂಸತ್ ನ ಒಳಗೂ ಮತ್ತು ಹೊರಗೂ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಮೇಕೆದಾಟು ಯೋಜನೆ ತಮಿಳುನಾಡಿಗೆ ಮಾರಕವಾಗಲಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಹಾಗೂ ಜಲ ಆಯೋಗ ನೀಡಿರುವ ಆರಂಭಿಕ ಒಪ್ಪಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ತಮಿಳುನಾಡಿನ ಈ ಹೋರಾಟಕ್ಕೆ ಪ್ರತಿ ಹೋರಾಟ ರೂಪಿಸಲು ಕಳೆದ ಗುರುವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ನಿವಾಸದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಸದರ ಸಭೆ ನಡೆಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿತ್ತು.

    DKSHIVAKUMAR

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv