Tag: ವೆಂಕಯ್ಯನಾಯ್ಡು

  • ತನಿಖಾ ಇಲಾಖೆ ದುರುಪಯೋಗ ಮಾಡಿ ಶಿವಸೇನೆ ಮೇಲೆ ದಾಳಿ: ಸಂಜಯ್ ರಾವತ್

    ತನಿಖಾ ಇಲಾಖೆ ದುರುಪಯೋಗ ಮಾಡಿ ಶಿವಸೇನೆ ಮೇಲೆ ದಾಳಿ: ಸಂಜಯ್ ರಾವತ್

    ಮುಂಬೈ: ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದಾಗಿನಿಂದ ಇಡಿ ಸೇರಿದಂತೆ ಇತರೆ ತನಿಖಾ ಇಲಾಖೆಗಳು ತಮ್ಮ ಪಕ್ಷದ ನಾಯಕರ ವಿರುದ್ಧ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಶಿವಸೇನೆ ನಾಯಕ ಸಂಜಯ್ ರಾವತ್ ಪತ್ರ ಬರೆದಿದ್ದಾರೆ.

    ಶಿವಸೇನೆ ಹಾಗೂ ಬಿಜೆಪಿ ಸುಮಾರು 25 ವರ್ಷಗಳ ಕಾಲ ಮೈತ್ರಿಯನ್ನು ಹೊಂದಿತ್ತು. ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಮೈತ್ರಿಯನ್ನು ಕೊನೆಗೊಳಿಸಿತು. ಇದರಿಂದ ಬಿಜೆಪಿ ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ತನಿಖಾ ಇಲಾಖೆಯನ್ನು ಬಳಸಿಕೊಂಡು ಶಿವಸೇನೆಯ ನಾಯಕರು ಮತ್ತು ಶಾಸಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

    Vice President M Venkaiah Naidu

    ಇಡಿ ಸಿಬ್ಬಂದಿ ಶಿವಸೇನೆಯ ಶಾಸಕರು ಸಂಸದರು, ನಾಯಕರು ಅವರ ಸ್ನೇಹಿತರು, ಸಂಬಂಧಿಕರು ಹಾಗೂ ಪರಿಚಯಸ್ಥರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ದಶಕಗಳಷ್ಟು ಹಳೆಯದಾದ ಮತ್ತು ಯಾವುದೇ ಸಂಬಂಧವಿಲ್ಲದ ಕೇಸ್‌ಗಳಲ್ಲಿ ಸರ್ಕಾರ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡುತ್ತಿದೆ. ಜೊತೆಗೆ ಅವರನ್ನು ಭಯಭೀತಗೊಳಿಸುವ ಉದ್ದೇಶದಿಂದ ತನಿಖೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ನಮಗೆ ನಮ್ಮದೇ ಆದ ಸಿದ್ಧಾಂತವನ್ನು ಹೊಂದಲು ಹಕ್ಕಿದೆ. ಅದು ರಾಜಕೀಯ ಪಕ್ಷಕ್ಕೆ ಸಂಬಂಧಿಸಿಲ್ಲ. ನಮ್ಮ ಶಾಸಕರು, ಸಂಸದರು, ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ಬೆದರಿಕೆ ನೀಡುವುದರ ಜೊತೆಗೆ ತನಿಖೆ ನಡೆಸುವ ವೇಷದಲ್ಲಿ ಮನೆ ಮೇಲೆ ದಾಳಿ ನಡೆಸಿ ಕಿರುಕುಳ ನೀಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಟ್ಟದಿಂದ ಜಾರಿ ಬಂಡೆ ಮಧ್ಯೆ ಬಿದ್ದ- 2 ದಿನ ಅನ್ನ, ನೀರು ಇಲ್ಲ

  • ಪುಸ್ತಕ ನೀಡಿ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದ ಸಿಎಂ ಬೊಮ್ಮಾಯಿ

    ಪುಸ್ತಕ ನೀಡಿ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಇಂದು ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ.

    VenkaiahNaidu CM bommai 3

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರರನ್ನ ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    VenkaiahNaidu CM bommai 1

    ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ ಆಗಮಿಸಿದ್ರು. ಮತ್ತೊಂದೆಡೆ ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ಉಪರಾಷ್ಟ್ರಪತಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ

  • ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ಅನುಚಿತ ವರ್ತನೆ ಆರೋಪ- ನಾಸೀರ್ ಹುಸೇನ್ ಸೇರಿ 8 ಸಂಸದರು ಅಮಾನತು

    ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಚರ್ಚೆ ವೇಳೆ ಗದ್ದಲ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ವಿಪಕ್ಷದ ಎಂಟು ಮಂದಿ ಸಂಸದರನ್ನು ಒಂದು ವಾರಗಳ ಕಲಾಪದಿಂದ ಅಮಾನತು ಮಾಡಲಾಗಿದೆ.

    ಇಂದು ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆ ಘಟನೆಯ ಬಗ್ಗೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಆಕ್ರೋಶ ವ್ಯಕ್ತಪಡಿಸಿದರು. ಉಪಾಧ್ಯಕ್ಷರ ಕರ್ತವ್ಯ ನಿಭಾಯಿಸಲು ಅಡ್ಡಿ ಪಡಿಸಿದ ಆರೋಪದ ಮೇಲೆ ಡೆರೆಕ್ ಒ’ಬ್ರಿಯೆನ್ ಸೇರಿ ಎಂಟು ಮಂದಿ ಸಂಸದರು ಅಮಾನತು ಮಾಡಲಾಯಿತು.

    TMC MP Derek OBrien1

    ನಿನ್ನೆ ಚರ್ಚೆ ವೇಳೆ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಸದನದ ಬಾವಿಗಿಳಿದು ಬಿಲ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಡೆರೆಕ್ ಒ’ಬ್ರಿಯೆನ್ ಜೊತೆಗೆ ಕರ್ನಾಟಕದ ಕಾಂಗ್ರೆಸ್ ಸಂಸದರ ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಮಸೂದೆ ವಿರೋಧಿಸಿ ಸದನದ ಬಾವಿಗಿಳಿದಿದ್ದರು. ಇದನ್ನೂ ಓದಿ: ವಿರೋಧದ ನಡುವೆ 2 ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪಾಸ್‌

    rajaysabha

    ಸಂಸದರ ಅಮಾನತು ನಿರ್ಧಾರ ಪ್ರಕಟಿಸುವ ಮುನ್ನ ಮಾತನಾಡಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು ನಿನ್ನೆ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭೆಗೆ ನಿನ್ನೆ ಕೆಟ್ಟ ದಿನ, ಉಪ ಸಭಾಧ್ಯಕ್ಷರಿಗೆ ಸದಸ್ಯರು ದೈಹಿಕ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ್ದಾರೆ ಇದೊಂದು ದುರಾದೃಷ್ಟವಕರ ಬೆಳವಣಿಗೆ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಯಲ್ಲಿ ರೈತರ ಶೋಷಣೆಯೇ ಹೆಚ್ಚು – ರಾಜ್ಯಸಭೆಯಲ್ಲಿ ಹೆಚ್‍ಡಿಡಿ ವಿರೋಧ

  • ಉಪರಾಷ್ಟ್ರಪತಿಗಳಿಂದ ಬಿಆರ್‌ಟಿಸಿ ಲೋಕಾರ್ಪಣೆ!

    ಉಪರಾಷ್ಟ್ರಪತಿಗಳಿಂದ ಬಿಆರ್‌ಟಿಸಿ ಲೋಕಾರ್ಪಣೆ!

    -ನವನಗರದಲ್ಲಿ ಹೈಟೆಕ್ ವ್ಯವಸ್ಥೆ

    ಹುಬ್ಬಳ್ಳಿ: ಮಹಾನಗರಗಳಲ್ಲಿ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಹೆಚ್.ಡಿ.ಬಿ.ಆರ್.ಟಿ.ಎಸ್. ಹುಬ್ಬಳ್ಳಿ ಧಾರವಾಡ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್‌ಟಿಸಿ) ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.

    ಉಪರಾಷ್ಟ್ರಪತಿಯವರಾದ ಎಂ.ವೆಂಕಯ್ಯನಾಯ್ಡು ಫೆ.02 ರಂದು ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಲವು ವಿಶೇಷತೆಗಳಿಂದ ಕೂಡಿರುವ ತ್ವರಿತ ಬಸ್ ಸೇವೆ ಸಾರ್ವಜನಿಕ ವಲಯದ ಮೊದಲ ಅತ್ಯುತ್ತಮ ಪರಿಸರಸ್ನೇಹಿ ಹಾಗೂ ಜನಸ್ನೇಹಿ ವ್ಯವಸ್ಥೆ ಎಂಬ ಹೆಮ್ಮೆಯನ್ನು ತನ್ನದಾಗಿಸಿಕೊಂಡಿದೆ.

    HBL BRTS 4

    ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ತ್ವರಿತ ಬಸ್ ಸೇವೆಯನ್ನು ಅನುಷ್ಠಾನಗೊಳಿಸುತ್ತಿರುವುದು ಇದೇ ಮೊದಲು. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಸುಸ್ಥಿರ ನಗರ ಸಾರಿಗೆ ಯೋಜನೆ ಹಾಗೂ ಜಾಗತಿಕ ಪರಿಸರ ಸೌಲಭ್ಯ ಮತ್ತು ವಿಶ್ವ ಬ್ಯಾಂಕ್ ಜಂಟಿ ಯೋಜನೆಯಾಗಿ ಸುಮಾರು 970.87 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರದ 624.06 ಕೋಟಿ, ವಿಶ್ವ ಬ್ಯಾಂಕ್ ಸಾಲ 324.32 ಕೋಟಿ, 24.49ಕೋಟಿ ಜಿ.ಇ.ಎಫ್ ಅನುದಾನ ಒಳಗೊಂಡಿದೆ.

    ಯೋಜನೆಯ ದೊಡ್ಡ ಪಾಲಾಗಿ 445.59 ಕೋಟಿ ರೂಪಾಯಿಗಳನ್ನು ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಳಸಲಾಗಿದೆ. 356.82 ಕೋಟಿ ರೂಪಾಯಿಗಳನ್ನು ಭೂ ಸ್ವಾಧೀನ ಹಾಗೂ ಪುನರ್ವಸತಿ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. 147.97 ಮತ್ತು 24.49 ಕೋಟಿ ರೂಪಾಯಿಗಳನ್ನು ಕ್ರಮವಾಗಿ ಸರಕು ಮತ್ತು ಯಂತ್ರಗಳ ಖರೀದಿ ಮತ್ತು ಸಲಹಾ ಸೇವೆಗಳಿಗೆ ವೆಚ್ಚ ಮಾಡಲಾಗಿದೆ.

    HBL BRTS 2

    ಹೆಚ್.ಡಿ.ಬಿ.ಆರ್.ಟಿಎಸ್ ಕಂಪನಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (JNURM) ಅಡಿ 100 ಹವಾನಿಯಂತ್ರಿತ ಬಸ್ ಖರೀದಿಸಲಾಗಿದೆ. ಅವಳಿ ನಗರಗಳ ಮಧ್ಯ 32 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೂ 6 ಪಾದಚಾರಿ ಮೇಲು ಸೇತುವೆಗಳು, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿ ಇಂಟರ್ ಚೇಂಜ್, ಬಸ್ ಡಿಪೋ, ಕಚೇರಿ ಮತ್ತು ನಿಯಂತ್ರಣ ಕೇಂದ್ರಗಳಿವೆ. 2.5 ಎಕರೆ ಪ್ರದೇಶದಲ್ಲಿ ಉಪನಗರ ಸಾರಿಗೆ ಸೇವೆ ಒದಗಿಸಲು ಯೋಜಿಸಲಾಗಿದೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ 40 ಬಸ್ ಸಾಮರ್ಥ್ಯದ ಡಿಪೋ ಹಾಗೂ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ 113 ಬಸ್ ಸಾಮರ್ಥ್ಯದ ಡಿಪೋ ನಿರ್ಮಿಸಲಾಗಿದೆ.

    ಐಟಿಎಸ್: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಜಾರಿಗೊಳಿಸಿದೆ. ಸ್ವಯಂಚಾಲಿತ ಟಿಕೆಟ್ ಸಂಗ್ರಹ, ಪ್ರಯಾಣಿಕರಿಗೆ ಬಸ್ ಸಂಚಾರದ ಕುರಿತಾದ ಮಾಹಿತಿ ವ್ಯವಸ್ಥೆ, ಸಿಸಿಟಿವಿ ವಿಡಿಯೋ ವಾಲ್‍ಗಳ ಬೃಹತ್ ಜಾಲ ಹೊಂದಿದೆ.

    HBL BRTS 3

    ಹಸಿರು ಹೆಚ್.ಡಿ.ಬಿ.ಅರ್.ಟಿ.ಎಸ್: ಯೋಜನೆ ಅನುಷ್ಠಾನಕ್ಕೆ ಸಾವಿರಾರು ಗಿಡಗಳನ್ನು ತೆರವುಗೊಳಿಸಿರುವುದಕ್ಕೆ ಬದಲಾಗಿ ಅವಳಿ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 25 ಸಾವಿರಕ್ಕೂ ಅಧಿಕ ಗಿಡಗಳನ್ನು ಐದು ವರ್ಷದಲ್ಲಿ ಬೆಳೆಸುವ ಗುರಿ ಹೊಂದಿದೆ. ಈಗಾಗಲೇ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯ ಅನುಷ್ಠಾನಗೊಂಡಿದೆ.

    ಕಾರ್ಯಾಚರಣೆ: ಹೆಚ್.ಡಿ.ಬಿ.ಆರ್.ಟಿ.ಎಸ್ ಯೋಜನೆಯು 2018 ಅಕ್ಟೋಬರ್ 2 ರಿಂದ ಪ್ರಾಯೋಗಿಕವಾಗಿ ಜನರಿಗೆ ಸೇವೆ ಒದಗಿಸುತ್ತಿದೆ. ಹಂತ ಹಂತವಾಗಿ ನೂರು ಬಸ್‍ಗಳು ಪ್ರತಿನಿತ್ಯ 1,204 ಟ್ರಿಪ್‍ಗಳಲ್ಲಿ ಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿರುವುದರಿಂದ ನಗರದ ಸಂಚಾರ ದಟ್ಟಣೆ ತಗ್ಗಿದೆ. ಇದರಿಂದ ಪರಿಸರಕ್ಕೆ ಸಾಕಷ್ಟು ಲಾಭವಾಗುತ್ತಿದೆ. ಇಂಧನ ಬಳಕೆ ಇಳಿಮುಖವಾಗಿದೆ. ಈ ಸೇವೆಯಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಪತ್ರಿನಿತ್ಯ ಟಿಕೆಟ್ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

    hbl 4

    ಮೆಟ್ರೋಗಿಂತ ಕಡಿಮೆ ವೆಚ್ಚ: ಬಿ.ಆರ್.ಟಿ.ಎಸ್. ಹಲವು ವಿಚಾರದಲ್ಲಿ ಮೆಟ್ರೋ ಸೇವೆಗಿಂತ ಅತ್ಯಂತ ಕಡಿಮೆ ಖರ್ಚಿನದಾಗಿದೆ. ಮೆಟ್ರೋ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ರಿಂದ 400 ಕೋಟಿ ರೂ. ವೆಚ್ಚ ತಗುಲಿದರೆ, ಬಿ.ಆರ್.ಟಿ.ಎಸ್ ನಲ್ಲಿ ಈ ವೆಚ್ಚ ಪ್ರತಿ ಕಿ.ಮೀ.ಗೆ 25 ರಿಂದ 30 ಕೋಟಿ ರೂಪಾಯಿಗಳಾಗುತ್ತಿದೆ. ನಿರ್ವಹಣಾ ವೆಚ್ಚವೂ ಮೆಟ್ರೋಗಿಂತ ಶೇ.90 ರಷ್ಟು ಕಡಿಮೆ. ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಲಕ್ನೋ ನಗರದ ಬಿ.ಆರ್.ಟಿ.ಎಸ್. ಪ್ರತಿನಿತ್ಯ 60 ರಿಂದ 70 ಸಾವಿರ ಜನರಿಗೆ ಸೇವೆ ನೀಡುತ್ತಿದ್ದರೆ, ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್ 1 ಲಕ್ಷ ಜನರಿಗೆ ಸೇವೆ ಒದಗಿಸುತ್ತಿದೆ.

    ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆಯನ್ನು ಬಿ.ಆರ್.ಟಿ.ಎಸ್ ಮೂಲಕ ಜನರಿಗೆ ನೀಡಲಾಗುತ್ತಿದೆ. ಬಿ.ಎಂ.ಟಿ.ಸಿ ನಗರ ಸಾರಿಗೆಯಲ್ಲಿ ಎ.ಸಿ. ಬಸ್‍ಗಳಲ್ಲಿ ಪ್ರತಿ ಕಿ.ಮೀ.ಗೆ 3 ರೂಪಾಯಿ 72 ಪೈಸೆ ದರ ವಿಧಿಸಲಾಗುತ್ತಿದೆ. ಬಿ.ಆರ್.ಟಿ.ಎಸ್‍ನಲ್ಲಿ ಪ್ರತಿ ಕಿ.ಮೀ. 1 ರೂಪಾಯಿ 18 ಪೈಸೆ ದರ ನಿಗದಿ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ಲಭಿಸುತ್ತಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಯಾವುದೇ ನಷ್ಟ ಹಾಗೂ ಲಾಭಗಳಿಲ್ಲದೆ ನಡೆಸಲಾಗುತ್ತಿದೆ.

  • ರಾಜ್ಯಸಭೆ ಮಾರ್ಷಲ್‍ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆ: ನಿರ್ಧಾರ ಮರುಪರಿಶೀಲನೆಗೆ ಆದೇಶ

    ರಾಜ್ಯಸಭೆ ಮಾರ್ಷಲ್‍ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆ: ನಿರ್ಧಾರ ಮರುಪರಿಶೀಲನೆಗೆ ಆದೇಶ

    ನವದೆಹಲಿ: ರಾಜ್ಯಸಭೆ ಮಾರ್ಷಲ್‍ಗಳ ಹೊಸ ಸಮವಸ್ತ್ರದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ನಿರ್ಧಾರ ಮರುಪರಿಶೀಲನೆಗೆ ಸೂಚನೆ ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆದೇಶಿಸಿದ್ದಾರೆ.

    ರಾಜ್ಯಸಭೆಯ 250ನೇ ಐತಿಹಾಸಿಕ ಕಲಾಪ ಇಂದು ನಡೆಯಿತು. ಈ ಕಲಾಪದಲ್ಲಿ ಮಾರ್ಷಲ್‍ಗಳಿಗೆ ಸಾಂಪ್ರದಾಯಿಕ ಸಮವಸ್ತ್ರ ‘ಬಂದ್‍ಗಲಾ ಮತ್ತು ಪೇಟ’ವನ್ನು ಬದಲಿಸಿ, ಮಿಲಿಟರಿ ರೀತಿಯ ಸಮವಸ್ತ್ರ ನೀಡಲಾಗಿತ್ತು. ಈ ನಿರ್ಧಾರವು ಭಾರೀ ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿದೆ.

    Rajya Sabha Marshals A

    ಟೀಕೆ ಹಾಗೂ ವಿರೋಧದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ವಿವಿಧ ಸಲಹೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್‍ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಈ ಬಗ್ಗೆ ಪರಿಶೀಲಿಸಲು ಸಚಿವಾಲಯದ ಕಾರ್ಯದರ್ಶಿಯವರಿಗೆ ಸೂಚಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಈ ಕುರಿತು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವೇದ್ ಮಲಿಕ್ ಅವರು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಸೇನಾ ಸಮವಸ್ತ್ರವನ್ನು ನಕಲು ಮಾಡುವುದು ಕಾನೂನು ಬಾಹೀರ. ಈ ಬಗ್ಗೆ ಉಪ ರಾಷ್ಟ್ರಪತಿ ಕಚೇರಿ, ರಾಜ್ಯಸಭೆ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಮನ ಹಿರಿಸಿ, ಕ್ರಮಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಟ್ವೀಟ್ ಅನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಮಾರ್ಷಲ್ ಹೊಸ ಸಮವಸ್ತ್ರಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

  • ಮಾತೃ ಭೂಮಿ, ಭಾಷೆ ಮರೆಯಬೇಡಿ- ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಕರೆ

    ಮಾತೃ ಭೂಮಿ, ಭಾಷೆ ಮರೆಯಬೇಡಿ- ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಕರೆ

    – ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಉಪರಾಷ್ಟ್ರಪತಿ

    ಮೈಸೂರು/ಮಂಗಳೂರು: ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕನ್ನಡದಲ್ಲೇ ಭಾಷಣ ಆರಂಭಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಚ್ಚು ಸಂತಸ ತಂದಿದೆ ಎಂದರು. ಅಲ್ಲದೇ ಮೊದಲು ಶಿಕ್ಷಣ ಮುಗಿಸಿ ದೇಶದಲ್ಲೇ ಸೇವೆ ಸಲ್ಲಿಸಿ ಎಂದು ಹೇಳುತ್ತಿದ್ದೇವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಈಗ ನೀವು ಬೇಕಾದರೆ ಬೇರೆ ಬೇರೆ ದೇಶದಲ್ಲಿ ಕೆಲಸ ಮಾಡಿ. ಆದರೆ ಮಾತೃ ಭೂಮಿ, ಮಾತೃಭಾಷೆ ಮಾತ್ರ ಮರೆಯಬೇಡಿ. ವಿದೇಶಗಳಿಗೆ ತೆರಳಿ ಸಾಧನೆ ಮಾಡಿ ಮತ್ತೆ ದೇಶಕ್ಕೆ ಬಂದು ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.

    ಇದಕ್ಕೂ ಮುನ್ನ ಮಂಗಳೂರಿನ ಸುರತ್ಕಲ್ ಎನ್‌ಟಿಕೆ ಇಂಜಿನಿಯರಿಂಗ್ ಕಾಲೇಜಿನ 17ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದೆಲ್ಲೆಡೆ ಹಿಂದಿ ಹೇರಿಕೆ ವಿಚಾರ ರಾದ್ಧಾಂತ ಸೃಷ್ಟಿಸಿರುವಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾತೃಭಾಷೆಯ ಪರವಾಗಿ ಬ್ಯಾಟಿಂಗ್ ಮಾಡಿದರು. ನಾವು ಎಷ್ಟೇ ಎತ್ತರಕ್ಕೆ ಮುಟ್ಟಿದರೂ, ತಾಯಿಭಾಷೆ ಮರೆಯಬಾರದು. ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಮಾತೃಭಾಷೆಯಲ್ಲೇ ಮಾತಾಡಬೇಕು. ಮಾತೃಭಾಷೆ ನಮ್ಮ ಕಣ್ಣಿನ ದೃಷ್ಟಿಯಿದ್ದಂತೆ. ಪರಭಾಷೆ ಕನ್ನಡಕ ಇದ್ದಂತೆ ಎಂದು ಹೇಳಿದರು.

    ಹೈಸ್ಕೂಲ್ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು. ಯಾವುದೇ ಭಾಷೆ ಇರಲಿ, ಕೀಳರಿಮೆ ಬೇಡ. ಹಾಗೆಯೇ ಇತರ ಭಾಷೆಗಳ ಬಗ್ಗೆ ತೆಗಳಿಕೆಯನ್ನೂ ಇಟ್ಟುಕೊಳ್ಳದಿರಿ. ಜ್ಞಾನ ಎಲ್ಲೆಡೆಯಿಂದ ಬರಲಿ ಎನ್ನುವಂತೆ ವ್ಯವಹಾರಕ್ಕಷ್ಟೇ ಇತರ ಭಾಷೆಗಳಿರಲಿ ಎಂದು ಸಲಹೆ ನೀಡಿದರು. ಇನ್ನು ಯುವಕರು ದೈಹಿಕವಾಗಿಯೂ ಸದೃಢರಾಗಬೇಕು. ನನಗೆ 70 ವರ್ಷ ಆದರೂ ಈಗಲೂ ಒಂದು ಗಂಟೆ  ಬ್ಯಾಡ್ಮಿಂಟನ್ ಆಡುತ್ತೇನೆ ಎಂದು ತಮ್ಮ ಫಿಟ್ನೆಸ್ ಗುಟ್ಟನ್ನು ಬಿಚ್ಚಿಟ್ಟರು.

  • ರಾಜ್ಯಸಭಾ ಕಾರ್ಯಾಲಯಕ್ಕೆ ದಿಢೀರ್ ಭೇಟಿ – ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ವೆಂಕಯ್ಯನಾಯ್ಡು

    ರಾಜ್ಯಸಭಾ ಕಾರ್ಯಾಲಯಕ್ಕೆ ದಿಢೀರ್ ಭೇಟಿ – ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ವೆಂಕಯ್ಯನಾಯ್ಡು

    ನವದೆಹಲಿ: ರಾಜ್ಯಸಭಾ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯನಾಯ್ಡು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸುವಂತೆ ಆದೇಶಿಸಿದ್ದಾರೆ.

    ಪಾರ್ಲಿಮೆಂಟ್ ನಲ್ಲಿ ಇರುವ ರಾಜ್ಯಸಭಾ ಕಾರ್ಯಾಲಯದ ವಿವಿಧ ಕಚೇರಿಗಳಿಗೆ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉದ್ಯೋಗಿಗಳು ಸಮಯ ಪಾಲನೆ ನಿಯಮವನ್ನು ಉಲ್ಲಂಘಿಸಿದ ವಿಚಾರ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೇ ಹಲವು ಮಂದಿ ಗೈರು ಹಾಜರಿ ಹಾಕಿದ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ನೋಡಿದ ವೆಂಕಯ್ಯನಾಯ್ಡು ಕೂಡಲೇ ಕಾರ್ಯಾಲಯದ ಅಧಿಕಾರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಹಾಕುವಂತೆ ಆದೇಶಿಸಿದ್ದಾರೆ.

    ರಾಜ್ಯಸಭಾ ಕಾರ್ಯಾಲಯದಲ್ಲಿ ಕೆಲವೊಮ್ಮೆ ಹೆಚ್ಚು ಕೆಲಸ ಇರುತ್ತದೆ. ಅದರಲ್ಲೂ ಅಧಿವೇಶನದ ಸಮಯದಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ ಎನ್ನುವುದನ್ನು ಅರಿತಿದ್ದೇನೆ. ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿಂದ ಜವಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ. ಕೆಲಸದ ಜವಾಬ್ದಾರಿ ಅರಿತು ನೌಕರರು ತಾವಾಗಿಯೇ ಕೆಲಸದಲ್ಲಿ ತೊಡಗಿಕೊಳ್ಳುವ ವಾತಾವರಣವನ್ನು ಸೃಷ್ಟಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ವೆಂಕಯ್ಯನಾಯ್ಡು ತಿಳಿಸಿದ್ದಾರೆ.

    ಕಾರ್ಯಾಲಯದ ಸ್ವಚ್ಛತೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುಬೇಕು. ಸಂಬಂಧಪಟ್ಟ ಏಜನ್ಸಿಗಳ ಜೊತೆ ಸಹಕಾರದಿಂದ ಇದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಿಬ್ಬಂದಿ ವರ್ಗಕ್ಕೆ ವೆಂಕಯ್ಯನಾಯ್ಡು ಆದೇಶಿಸಿದ್ದಾರೆ.

  • ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ಗದಗ: ರೈತ ಬಂಡಾಯಕ್ಕೆ ಹೆಸರಾದ ನರಗುಂದಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯೋ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎನ್ನುವ ಹೆಗ್ಗಳಿಕೆ ನರಗುಂದಕ್ಕೆ ಲಭಿಸಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಶೌಚಾಲಯ ನಿರ್ಮಾಣದ ಕ್ರಾಂತಿ ಕಹಳೆಯನ್ನು ಮೊಳಗಿಸಿದರು.

    ಕೊಣ್ಣೂರ ಗ್ರಾಮದಲ್ಲಿ ತಿಪ್ಪೆ ಸಂಸ್ಕರಣ ಘಟಕ ಹಾಗೂ ಜನತಾ ಕಾಲೋನಿಯಲ್ಲಿರೋ ಶುದ್ಧ ಕುಡಿಯೋ ನೀರಿನ ಘಟಕ ಉದ್ಘಾಟಿಸಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡೋ ಮೂಲಕ ಎಲ್ಲರ ಗಮನ ಸೆಳೆದರು.

    ನರಗುಂದ ತಾಲೂಕಿನ ಶೌಚಾಲಯ ನಿರ್ಮಾಣದ ಜನಾಂದೋಲನ, ರಾಜ್ಯಕ್ಕೆ ಮಾದರಿಯಾಗಿದೆ. ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರುವ ಜನರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗೃತಿ ಮೂಡಿಸುವ ಮೂಲಕ ಇಡೀ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

    ರಾಜ್ಯ ಸರ್ಕಾರದ ಶೌಚಾಲಯಕ್ಕಾಗಿ ಸಮರ ಹಾಗೂ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಮೂಲಕ ಇಡೀ ತಾಲೂಕಿನಲ್ಲಿ ಇದೀಗ ಶೇ.75 ರಷ್ಟು ವೈಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿಕಾರಕ ಕೆಲಸ ಮಾಡಲಾಗಿದೆ. ಹೀಗಾಗಿ ಇಂದು ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರ ಮಾನ ಕಾಪಾಡುವಲ್ಲಿ ಈ ಯೋಜನೆ ಪೂರಕವಾಗಿದೆ ಎಂದರು.

    ಈ ಮಹತ್ವಪೂರ್ಣ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. ಇಡೀ ದೇಶ ಬಯಲು ಬಹಿರ್ದೆಸೆ ಮುಕ್ತವಾಗಬೇಕು. ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆಯಂತ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ವೆಂಕಯ್ಯ ನಾಯ್ಡು ಹಾಸ್ಯ ಚಟಾಕೆ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.

    ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್‍ಕೆ ಪಾಟೀಲ್ ಮಾತನಾಡಿ, ಶೌಚಾಲಯ ನಿರ್ಮಾಣದಲ್ಲಿ ನಮ್ಮ ಪ್ರಗತಿ ಗಣನೀಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಆರಂಭದಲ್ಲಿ ಶೌಚಾಲಯ ನಿರ್ಮಾಣ ಶೇ.34 ರಷ್ಟಿತ್ತು. ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ರಾಜ್ಯದಲ್ಲಿ ಶೇ.75 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 2018 ಮಾರ್ಚ್ ಒಳಗಾಗಿ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ಹೊಂದಿದೆ. ರಾಜ್ಯ ಸರ್ಕಾರದ ತಿಪ್ಪೆ ಸಂಸ್ಕರಣಾ ಯೋಜನೆ ರಾಷ್ಟ್ರಮಟ್ಟದಲ್ಲಾದರೆ ಸ್ವಚ್ಛ ಭಾರತದ ಕನಸಿಗೆ ಹೆಚ್ಚು ಬಲಬರಲು ಸಾಧ್ಯ. ಶೌಚಾಲಯದ ಜೊತೆಗೆ ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲು ಉಪರಾಷ್ಟ್ರಪತಿಗೆ ಒತ್ತಾಯಿಸಿದರು.

    ಕೊಣ್ಣೂರು ಗ್ರಾಮದ ಅಭಿವೃದ್ಧಿಗಾಗಿ ಯುಜಿಡಿ ಕಾಮಗಾರಿಗೆ ಸರ್ಕಾರ 5 ಕೋಟಿ ರೂ. ಮಂಜೂರು ಮಾಡುವ ಭರವಸೆ ನೀಡಿದರು. ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಸರ್ಕಾರದ ಸಾಧನೆ ಕುರಿತು ಕೊಂಡಾಡಿದರು.

    ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ರಮೇಶ್ ಜಿಗಜಣಗಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ನರಗುಂದ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಮಾಡಲು ವಿಶೇಷ ಆಸಕ್ತಿಯೊಂದಿಗೆ ಶುಚಿ ಗ್ರಾಮದ ಕನಸು ಸಕಾರಗೊಳಿಸಲು ಶ್ರಮಿಸಿದ ನರಗುಂದ ಶಾಸಕ ಬಿಆರ್ ಯಾವಗಲ್ ಅವರನ್ನು ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.