Connect with us

Districts

ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

Published

on

Share this

ಗದಗ: ರೈತ ಬಂಡಾಯಕ್ಕೆ ಹೆಸರಾದ ನರಗುಂದಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯೋ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎನ್ನುವ ಹೆಗ್ಗಳಿಕೆ ನರಗುಂದಕ್ಕೆ ಲಭಿಸಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಶೌಚಾಲಯ ನಿರ್ಮಾಣದ ಕ್ರಾಂತಿ ಕಹಳೆಯನ್ನು ಮೊಳಗಿಸಿದರು.

ಕೊಣ್ಣೂರ ಗ್ರಾಮದಲ್ಲಿ ತಿಪ್ಪೆ ಸಂಸ್ಕರಣ ಘಟಕ ಹಾಗೂ ಜನತಾ ಕಾಲೋನಿಯಲ್ಲಿರೋ ಶುದ್ಧ ಕುಡಿಯೋ ನೀರಿನ ಘಟಕ ಉದ್ಘಾಟಿಸಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡೋ ಮೂಲಕ ಎಲ್ಲರ ಗಮನ ಸೆಳೆದರು.

ನರಗುಂದ ತಾಲೂಕಿನ ಶೌಚಾಲಯ ನಿರ್ಮಾಣದ ಜನಾಂದೋಲನ, ರಾಜ್ಯಕ್ಕೆ ಮಾದರಿಯಾಗಿದೆ. ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರುವ ಜನರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗೃತಿ ಮೂಡಿಸುವ ಮೂಲಕ ಇಡೀ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ರಾಜ್ಯ ಸರ್ಕಾರದ ಶೌಚಾಲಯಕ್ಕಾಗಿ ಸಮರ ಹಾಗೂ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಮೂಲಕ ಇಡೀ ತಾಲೂಕಿನಲ್ಲಿ ಇದೀಗ ಶೇ.75 ರಷ್ಟು ವೈಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿಕಾರಕ ಕೆಲಸ ಮಾಡಲಾಗಿದೆ. ಹೀಗಾಗಿ ಇಂದು ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರ ಮಾನ ಕಾಪಾಡುವಲ್ಲಿ ಈ ಯೋಜನೆ ಪೂರಕವಾಗಿದೆ ಎಂದರು.

ಈ ಮಹತ್ವಪೂರ್ಣ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. ಇಡೀ ದೇಶ ಬಯಲು ಬಹಿರ್ದೆಸೆ ಮುಕ್ತವಾಗಬೇಕು. ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆಯಂತ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ವೆಂಕಯ್ಯ ನಾಯ್ಡು ಹಾಸ್ಯ ಚಟಾಕೆ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್‍ಕೆ ಪಾಟೀಲ್ ಮಾತನಾಡಿ, ಶೌಚಾಲಯ ನಿರ್ಮಾಣದಲ್ಲಿ ನಮ್ಮ ಪ್ರಗತಿ ಗಣನೀಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಆರಂಭದಲ್ಲಿ ಶೌಚಾಲಯ ನಿರ್ಮಾಣ ಶೇ.34 ರಷ್ಟಿತ್ತು. ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ರಾಜ್ಯದಲ್ಲಿ ಶೇ.75 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 2018 ಮಾರ್ಚ್ ಒಳಗಾಗಿ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ಹೊಂದಿದೆ. ರಾಜ್ಯ ಸರ್ಕಾರದ ತಿಪ್ಪೆ ಸಂಸ್ಕರಣಾ ಯೋಜನೆ ರಾಷ್ಟ್ರಮಟ್ಟದಲ್ಲಾದರೆ ಸ್ವಚ್ಛ ಭಾರತದ ಕನಸಿಗೆ ಹೆಚ್ಚು ಬಲಬರಲು ಸಾಧ್ಯ. ಶೌಚಾಲಯದ ಜೊತೆಗೆ ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲು ಉಪರಾಷ್ಟ್ರಪತಿಗೆ ಒತ್ತಾಯಿಸಿದರು.

ಕೊಣ್ಣೂರು ಗ್ರಾಮದ ಅಭಿವೃದ್ಧಿಗಾಗಿ ಯುಜಿಡಿ ಕಾಮಗಾರಿಗೆ ಸರ್ಕಾರ 5 ಕೋಟಿ ರೂ. ಮಂಜೂರು ಮಾಡುವ ಭರವಸೆ ನೀಡಿದರು. ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಸರ್ಕಾರದ ಸಾಧನೆ ಕುರಿತು ಕೊಂಡಾಡಿದರು.

ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ರಮೇಶ್ ಜಿಗಜಣಗಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ನರಗುಂದ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಮಾಡಲು ವಿಶೇಷ ಆಸಕ್ತಿಯೊಂದಿಗೆ ಶುಚಿ ಗ್ರಾಮದ ಕನಸು ಸಕಾರಗೊಳಿಸಲು ಶ್ರಮಿಸಿದ ನರಗುಂದ ಶಾಸಕ ಬಿಆರ್ ಯಾವಗಲ್ ಅವರನ್ನು ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.

 

Click to comment

Leave a Reply

Your email address will not be published. Required fields are marked *

Advertisement