Tag: ಮಂಸೋರೆ

  • ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಬೆಂಗಳೂರು: ಕೊರೊನಾ ದೇಶಕ್ಕೆ ಬಂದಾಗಿನಿಂದಲೂ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಲಾಕ್‍ಡೌನ್ ಆದಾಗಿನಿಂದ ಜನ ಮನೆಯಲ್ಲೇ ಲಾಕ್ ಆಗಿದ್ದರು. ಮನರಂಜನೆಯ ಬಾಗಿಲನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಅನ್‍ಲಾಕ್ ಪ್ರಕ್ರಿಯೆಲ್ಲಿ ಕಡೆಗೂ ಥಿಯೇಟರ್ ಗಳ ಬಾಗಿಲನ್ನು ತೆರೆಯಲಾಗಿದೆ. ಆದರೂ ಪ್ರೇಕ್ಷಕರು ಥಿಯೇಟರ್ ಬಾಗಿಲಿಗೆ ಬರುತ್ತಿಲ್ಲ.

    Act 1978 10

    ಥಿಯೇಟರ್ ಒಪನ್ ಆದರೂ ಜನ ಬರೋದು ಡೌಟೇ ಎಂಬುದನ್ನು ಅರಿತಿದ್ದ ನಿರ್ಮಾಪಕರು, ನಿರ್ದೇಶಕರು ಹೊಸ ಸಿನಿಮಾಗಳನ್ನ ಥಿಯೇಟರ್ ಗೆ ಬಿಟ್ಟು ಆಳ ನೋಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಹೀಗಾಗಿಯೇ ಸದ್ಯ ಥಿಯೇಟರ್ ಗಳಲ್ಲಿ ಮರು ಬಿಡುಗಡೆಯ ಪರ್ವ ಮುಂದುವರಿದಿದೆ.

    Act 1978 3 1

    ಕೊರೊನಾ ವೈರಸ್ ಭಯ ಜನರನ್ನು ಇನ್ನು ಬಿಟ್ಟು ಹೋಗಿಲ್ಲ. ಹೀಗಾಗಿಯೇ ಜನ ಮನೆಯಿಂದ ಹೊರಗೆ ಬರಲು ಇನ್ನು ಹೆದರುತ್ತಿದ್ದಾರೆ. ವ್ಯಾಕ್ಸಿನ್ ಯಾವಾಗ ಸಿಗುತ್ತೋ? ಜನ ಧೈರ್ಯವಾಗಿ ಬಂದು ಸಿನಿಮಾ ನೋಡುವುದು ಯಾವಾಗಲೋ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹಾಗಾದ್ರೆ ಸಿನಿಮಾವನ್ನು ಸಿದ್ಧವಿಟ್ಟುಕೊಂಡು ವ್ಯಾಕ್ಸಿನ್ ಗಾಗಿ ಕಾಯುವುದರಲ್ಲಿ ಅರ್ಥವೇನಿದೆ ಅನ್ನೋದು ಇನ್ನೊಂದು ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳ ನಡುವೆ ಮಂಸೋರೆ ಒಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

    Act 1978 9

    ಹೌದು ಅವರ ನಿರ್ದೇಶನದ ಆ್ಯಕ್ಟ್ 1978 ಚಿತ್ರವನ್ನು ಥಿಯೇಟರ್ ನಲ್ಲೇ ರಿಲೀಸ್ ಮಾಡಲು ನಿರ್ಧರಿಸಿ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ. ಈ ಲಾಕ್‍ಡೌನ್ ಮುಗಿದ ಬಳಿಕ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರವ ಮೊದಲ ಹೊಸ ಸಿನಿಮಾವಿದು. ಎಲ್ಲರು ಹಿಂದೆ ಸರಿಯುತ್ತಿರುವಾಗ ಹೊಸ ಸಿನಿಮಾವನ್ನೇ ರಿಲೀಸ್ ಮಾಡಿ ಜನರನ್ನು ಥಿಯೇಟರ್ ನತ್ತ ಸೆಳೆಯಲು ಮಂಸೋರೆ ಟೀಂ ರೆಡಿಯಾಗಿದೆ. ಇದೇ ನವೆಂಬರ್ 20 ರಂದು ಆ್ಯಕ್ 1978 ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡುತ್ತಿದೆ.

    Act 1978 7

    ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ಟಾಕ್ ಕ್ರಿಯೇಟ್ ಆಗಿದೆ. ಮನುಷ್ಯನಿಗೆ, ಸಮಾಜಕ್ಕೆ ತೀರಾ ಹತ್ತಿರವಾದಂತ ಕಾನೂನಿನ ಬಗೆಗಿನ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ ಜನ ಥಿಯೇಟರ್ ನತ್ತ ಬಂದೆ ಬರುತ್ತಾರೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಒಟ್ಟಾರೆ ಥಿಯೇಟರ್ ಗೆ ಜನ ಕರೆಸಿ ಹೊಸ ನಾಂದಿ ಹಾಡಲು ಹೊರಟಿದ್ದಾರೆ ಮಂಸೋರೆ ಟೀಂ.

    Act 1978 8

    ಆ್ಯಕ್ಟ್ 1978 ಚಿತ್ರವನ್ನ ಮಂಸೋರೆ ನಿರ್ದೇಶನ ಮಾಡಿದ್ದು, ದೇವರಾಜ್ ಆರ್ ಬಂಡವಾಳ ಹೂಡಿದ್ದಾರೆ. ಯಜ್ಞ ಶೆಟ್ಟಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಯಾನಂದ್ ಟಿ ಕೆ, ವೀರು ಮಲ್ಲಣ್ಣ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ACT 1978 1

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ACT 1978 5 Mansore

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ACT 1978 2

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ACT 1978 3

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ACT 1978 4

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

    ಬೆಂಗಳೂರು: ಹರಿವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಸಾಧ್ಯತೆಗಳ ಹರಿವೊಂದನ್ನು ಹಾಯಿಸಿ ಬಿಟ್ಟು, ನಾತಿಚರಾಮಿ ಚಿತ್ರದೊಂದಿಗೆ ನಿರ್ದೇಶಕರಾಗಿ ಮತ್ತಷ್ಟು ಗಟ್ಟಿಯಾಗಿ ನೆಲೆ ಕಂಡುಕೊಂಡಿರುವವರು ಮಂಸೋರೆ. ನಾತಿಚರಾಮಿ ಪ್ರೇಕ್ಷಕರ ಮನ ಗೆದ್ದ ನಂತರದಲ್ಲಿ ಈ ಬಾರಿ ಭಿನ್ನ ಜಾಡಿನ ಚಿತ್ರವೊಂದನ್ನು ನಿರ್ದೇಶನ ಮಾಡೋ ಸುಳಿವು ಮಂಸೋರೆ ಕಡೆಯಿಂದ ಜಾಹೀರಾಗಿತ್ತು. ಕಥೆಯನ್ನು ಗಟ್ಟಿಗೊಳಿಸೋದಕ್ಕಾಗಿ ಸುತ್ತಾಟದಲ್ಲಿದ್ದ ಅವರು ಹೊಸಾ ಪ್ರಾಜೆಕ್ಟಿನ ಬಗ್ಗೆ ಒಂದಷ್ಟು ಚರ್ಚೆಗಳಾಗುವಂತೆ ಮಾಡಿದ್ದರು. ಆದರೆ ತಿಂಗಳು ಕಳೆದರೂ ಆ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡದಿದ್ದ ಮಂಸೋರೆ ಇದೀಗ ಸಂಪೂರ್ಣವಾಗಿಯೇ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೋಷನ್ ಪೋಸ್ಟರ್‌ನೊಂದಿಗೆ ಸದ್ದು ಮಾಡಿದ್ದಾರೆ.

    yajan shetty

    ಈ ಬಾರಿ ಮಂಸೋರೆ ಶಶಕ್ತವಾದ ಕ್ರಿಯಾಶೀಲರ ಸಾಥ್‌ನೊಂದಿಗೆ ಸಾಮಾಜಿಕ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಈ ಚಿತ್ರಕ್ಕೆ ಆಕ್ಟ್ 1978 ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್‌ನಲ್ಲಿ ರೋಚಕ ಕಥೆಯ ಸುಳಿವಿನೊಂದಿಗೆ, ಥ್ರಿಲ್ಲರ್ ಜಾನರಿನ ಚಹರೆಯನ್ನೂ ಹೊಮ್ಮಿಸಿದ್ದಾರೆ. ಯಾರೇ ನೋಡಿದರೂ ಅವರೊಳಗೆ ಕಥೆಯೇನಿರಬಹುದೆಂಬ ಪ್ರಶ್ನೆಗಳ ತಾಕಲಾಟ ಶುರು ಮಾಡುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

    yajna shetty

    ಈ ಚಿತ್ರದಲ್ಲಿ ಮೊನ್ನೆಯಷ್ಟೇ ದಾಂಪತ್ಯ ಜೀವನ ಆರಂಭಿಸಿರುವ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೈಲಿ ಗನ್ನು ಹಿಡಿದು, ಬಾಂಬು ಕಟ್ಟಿಕೊಂಡು ಕೂತ ಗರ್ಭಿಣಿಯ ಅವತಾರವೇ ಯಜ್ಞಾರ ಪಾತ್ರ ವಿಶೇಷವಾಗಿದೆ ಎಂಬುದರ ಸುಳಿವು ಕೊಡುವಂತಿದೆ. ಈ ಬಾರಿ ನಿರ್ದೇಶಕ ಮಂಸೋರೆ ಕಮರ್ಶಿಯಲ್ ಜಾಡಿನತ್ತ ಹೊರಳಿಕೊಂಡಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಬೆಲ್‌ಬಾಟಂ ಖ್ಯಾತಿಯ ಕಥೆಗಾರ ಟಿ.ಕೆ ದಯಾನಂದ್ ಮತ್ತು ಯುವ ನಿರ್ದೇಶಕ ವೀರು ಮಲ್ಲಣ್ಣ ಸಾಥ್ ಕೊಟ್ಟಿದ್ದಾರೆ. ಯಾವ ಜಾನರಿನ ಚಿತ್ರವನ್ನೇ ಆದರೂ ಹೊಸತನದೊಂದಿಗೆ ಕಟ್ಟಿ ನಿಲ್ಲಿಸುವ ಕಸುವು ಹೊಂದಿರೋ ಮಂಸೋರೆ ಈ ಬಾರಿ ಮ್ಯಾಜಿಕ್ ಮಾಡೋ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.

  • ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಮಂಸೋರೆಯವರ ಎರಡನೇ ಮ್ಯಾಜಿಕ್ ನಾತಿಚರಾಮಿ!

    ಬೆಂಗಳೂರು: ಮೊದಲ ಚಿತ್ರ ‘ಹರಿವು’ ಮೂಲಕವೇ ಪ್ರತಿಭಾವಂತ ನಿರ್ದೇಶಕರಾಗಿ ಹೊರಹೊಮ್ಮಿದ್ದವರು ಮಂಸೋರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಕಲಾತ್ಮಕ ಚಿತ್ರವಾದರೂ ಎಂಥಾ ಕಲ್ಲೆದೆಯನ್ನೂ ಕರಗಿಸಬಲ್ಲ ಸೂಕ್ಷ್ಮ ಗುಣದಿಂದ ಈ ಚಿತ್ರ ಜನಸಾಮಾನ್ಯರನ್ನೂ ತಲುಪಿಕೊಂಡಿತ್ತು. ಇಂಥಾ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿ ಇದೇ ತಿಂಗಳ 28ರಂದು ತೆರಕಾಣಲು ಅಣಿಗೊಂಡಿದೆ.

    ಮೊದಲ ಚಿತ್ರ ಹರಿವು ಕಲಾತ್ಮಕ ಜಾಡಿನದ್ದಾಗಿತ್ತು. ಹಾಗಿದ್ದರೆ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿಯೂ ಅದೇ ಬಗೆಯದ್ದಾ ಎಂಬ ಪ್ರಶ್ನೆ ಸಹಜವೇ. ಆದರೆ ಈ ಚಿತ್ರದ ಮೂಲಕ ಮಂಸೋರೆ ಹೊಸಾ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಅದೇನೆಂಬುದು ಈ ತಿಂಗಳ ಇಪ್ಪತ್ತೆಂಟರಂದೇ ಜಾಹೀರಾಗಬೇಕಾದರೂ ಇದೊಂದು ಕಲಾತ್ಮಕ ಕಮರ್ಶಿಯಲ್ ಚಿತ್ರ ಎನ್ನಲಡ್ಡಿಯಿಲ್ಲ.

    Naticharami q

    ಕಮರ್ಶಿಯಲ್ ಅಂದಾಕ್ಷಣ ಸೊಂಟ ಬಳುಕಿಸೋ ಐಟಂ ಸಾಂಗು, ಮಸಾಲೆ ಐಟಮ್ಮುಗಳು ಅಂದುಕೊಂಡರೆ ನಾತಿಚರಾಮಿ ಆ ಥರದ್ದಲ್ಲ. ಆದರೆ ಭಿನ್ನ ಕಥಾ ಹಂದರ ಹೊಂದಿರೋ ಈ ಚಿತ್ರ ಹೊಸಾ ಅಲೆಯದ್ದು ಎನ್ನಲಡ್ಡಿಯಿಲ್ಲ. ಕಥೆಯ ಸೃಷ್ಟಿ ಮತ್ತು ಅದನ್ನು ಮನಸಿಗೆ ನಾಟುವಂತೆ ನಿರೂಪಣೆ ಮಾಡೋ ಚಾಕಚಕ್ಯತೆ ಮಂಸೋರೆ ಅವರಿಗಿದೆ ಎಂಬುದಕ್ಕೆ ಹರಿವು ಚಿತ್ರವೇ ಉದಾಹರಣೆ. ನಾತಿಚರಾಮಿಯಲ್ಲಿ ಬೇರೆಯದ್ದೇ ಥರದ ಕಥೆಯೊಂದಕ್ಕೆ ದೃಶ್ಯದ ಚೌಕಟ್ಟು ತೊಡಿಸಲಾಗಿದೆಯಂತೆ.

    ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವವರು ಎನ್. ಸಂಧ್ಯಾರಾಣಿ. ಈಗಾಗಲೇ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರ್ತಿಯಾಗಿ, ಅಂಕಣಗಾರ್ತಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರೋ ಸಂಧ್ಯಾರಾಣಿ ಈ ಚಿತ್ರಕ್ಕಾಗಿ ವಿಭಿನ್ನವಾದ ಕಥೆ ಬರೆದಿದ್ದಾರಂತೆ. ಮೊದಲ ಸಲ ಅವರು ಸಂಭಾಷಣೆಯನ್ನೂ ಬರೆದಿರೋದು ವಿಶೇಷ.

    Du2Q8oDUwAAWB2t

    ಹೇಳಿ ಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಗಾಳಿ ಬೀಸುತ್ತಿದೆ. ಈ ಅಲೆಯಲ್ಲಿ ಬಂದು ಕಸುವು ಹೊಂದಿದ ಕಥೆಯನ್ನೆಲ್ಲ ಪ್ರೇಕ್ಷಕರು ಗೆಲ್ಲಿಸಿದ್ದಾರೆ. ನಾತಿಚರಾಮಿ ಕೂಡಾ ಪ್ರೇಕ್ಷಕರ ಮನಮುಟ್ಟುವ, ಕಾಡುವ ಚಿತ್ರವಾಗಿ ಮೂಡಿ ಬಂದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಮಂಸೋರೆಯವರ ಎರಡನೇ ಮ್ಯಾಜಿಕ್ ಎಂಥಾದ್ದೆಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv