CinemaLatestMain PostNationalSandalwood

ಆಕ್ಟ್ 1978: ಮಂಸೋರೆಯ ಮ್ಯಾಜಿಕಲ್ ಮೋಷನ್ ಪೋಸ್ಟರ್!

ಬೆಂಗಳೂರು: ಹರಿವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಸಾಧ್ಯತೆಗಳ ಹರಿವೊಂದನ್ನು ಹಾಯಿಸಿ ಬಿಟ್ಟು, ನಾತಿಚರಾಮಿ ಚಿತ್ರದೊಂದಿಗೆ ನಿರ್ದೇಶಕರಾಗಿ ಮತ್ತಷ್ಟು ಗಟ್ಟಿಯಾಗಿ ನೆಲೆ ಕಂಡುಕೊಂಡಿರುವವರು ಮಂಸೋರೆ. ನಾತಿಚರಾಮಿ ಪ್ರೇಕ್ಷಕರ ಮನ ಗೆದ್ದ ನಂತರದಲ್ಲಿ ಈ ಬಾರಿ ಭಿನ್ನ ಜಾಡಿನ ಚಿತ್ರವೊಂದನ್ನು ನಿರ್ದೇಶನ ಮಾಡೋ ಸುಳಿವು ಮಂಸೋರೆ ಕಡೆಯಿಂದ ಜಾಹೀರಾಗಿತ್ತು. ಕಥೆಯನ್ನು ಗಟ್ಟಿಗೊಳಿಸೋದಕ್ಕಾಗಿ ಸುತ್ತಾಟದಲ್ಲಿದ್ದ ಅವರು ಹೊಸಾ ಪ್ರಾಜೆಕ್ಟಿನ ಬಗ್ಗೆ ಒಂದಷ್ಟು ಚರ್ಚೆಗಳಾಗುವಂತೆ ಮಾಡಿದ್ದರು. ಆದರೆ ತಿಂಗಳು ಕಳೆದರೂ ಆ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡದಿದ್ದ ಮಂಸೋರೆ ಇದೀಗ ಸಂಪೂರ್ಣವಾಗಿಯೇ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಈ ಚಿತ್ರದ ಮೋಷನ್ ಪೋಸ್ಟರ್‌ನೊಂದಿಗೆ ಸದ್ದು ಮಾಡಿದ್ದಾರೆ.

ಈ ಬಾರಿ ಮಂಸೋರೆ ಶಶಕ್ತವಾದ ಕ್ರಿಯಾಶೀಲರ ಸಾಥ್‌ನೊಂದಿಗೆ ಸಾಮಾಜಿಕ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಈ ಚಿತ್ರಕ್ಕೆ ಆಕ್ಟ್ 1978 ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರೋ ಮೋಷನ್ ಪೋಸ್ಟರ್‌ನಲ್ಲಿ ರೋಚಕ ಕಥೆಯ ಸುಳಿವಿನೊಂದಿಗೆ, ಥ್ರಿಲ್ಲರ್ ಜಾನರಿನ ಚಹರೆಯನ್ನೂ ಹೊಮ್ಮಿಸಿದ್ದಾರೆ. ಯಾರೇ ನೋಡಿದರೂ ಅವರೊಳಗೆ ಕಥೆಯೇನಿರಬಹುದೆಂಬ ಪ್ರಶ್ನೆಗಳ ತಾಕಲಾಟ ಶುರು ಮಾಡುವಂತಿರೋ ಈ ಮೋಷನ್ ಪೋಸ್ಟರ್ ನಿಜಕ್ಕೂ ಪ್ರಾಮಿಸಿಂಗ್ ಆಗಿದೆ.

ಈ ಚಿತ್ರದಲ್ಲಿ ಮೊನ್ನೆಯಷ್ಟೇ ದಾಂಪತ್ಯ ಜೀವನ ಆರಂಭಿಸಿರುವ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೈಲಿ ಗನ್ನು ಹಿಡಿದು, ಬಾಂಬು ಕಟ್ಟಿಕೊಂಡು ಕೂತ ಗರ್ಭಿಣಿಯ ಅವತಾರವೇ ಯಜ್ಞಾರ ಪಾತ್ರ ವಿಶೇಷವಾಗಿದೆ ಎಂಬುದರ ಸುಳಿವು ಕೊಡುವಂತಿದೆ. ಈ ಬಾರಿ ನಿರ್ದೇಶಕ ಮಂಸೋರೆ ಕಮರ್ಶಿಯಲ್ ಜಾಡಿನತ್ತ ಹೊರಳಿಕೊಂಡಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಬೆಲ್‌ಬಾಟಂ ಖ್ಯಾತಿಯ ಕಥೆಗಾರ ಟಿ.ಕೆ ದಯಾನಂದ್ ಮತ್ತು ಯುವ ನಿರ್ದೇಶಕ ವೀರು ಮಲ್ಲಣ್ಣ ಸಾಥ್ ಕೊಟ್ಟಿದ್ದಾರೆ. ಯಾವ ಜಾನರಿನ ಚಿತ್ರವನ್ನೇ ಆದರೂ ಹೊಸತನದೊಂದಿಗೆ ಕಟ್ಟಿ ನಿಲ್ಲಿಸುವ ಕಸುವು ಹೊಂದಿರೋ ಮಂಸೋರೆ ಈ ಬಾರಿ ಮ್ಯಾಜಿಕ್ ಮಾಡೋ ಎಲ್ಲ ಸೂಚನೆಗಳೂ ಕಾಣಿಸುತ್ತಿವೆ.

Leave a Reply

Your email address will not be published.

Back to top button