Tag: ಎಚ್ ಡಿ ರೇವಣ್ಣ

  • ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    – ರೇಸ್ ನಡೆಸೋಕೆ ನಮ್ಮ ಬಳಿ ಕುದುರೆಗಳೇ ಇಲ್ಲ
    – ಬಿಜೆಪಿ ಅವ್ರಿಗೆ ಲೆಕ್ಕ ಹಾಕೋಕೆ ಬರೊಲ್ಲ

    ಬೆಂಗಳೂರು: ನಾನು ಸಿಎಂ ಅಥವಾ ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ. ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಲೋಕೋಪಲೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೇಸ್ ನಡೆಸಲು ನಮ್ಮ ಬಳಿ ಕುದುರೆಗಳೇ ಇಲ್ಲ. ಇನ್ನು ಎಲ್ಲಿಂದ ರೇಸ್‍ನಲ್ಲಿ ನಿಲ್ಲುವುದು. ನನಗೆ ನೀಡಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ನಗೆ ಬೀರಿದರು.

    CMK CM HDK

    ಕಾಂಗ್ರೆಸ್-ಜೆಡಿಎಸ್ ಮೈತ್ರಿಯು 18ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಜೆಡಿಎಸ್ 5ರಿಂದ 6 ಸೀಟು ಗೆಲ್ಲುತ್ತದೆ. 7 ಸೀಟು ಗೆದ್ದರೂ ಆಶ್ಚರ್ಯ ಪಡಬೇಡಿ. ಆದರೆ ಬಿಜೆಪಿಯವರಿಗೆ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಮೇ 23ರ ನಂತರ ಸಮಾಧಾನ ಆಗುತ್ತಾರೆ. ನಾನು ಹೇಳಿದ್ದು ಯಾವತ್ತು ಸುಳ್ಳು ಆಗಿಲ್ಲ. ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಅವರಿಗೂ ಪಂಡರಾಪುರಕ್ಕೆ ಹೋಗುವುದಕ್ಕೆ ಹೇಳಿ. ಬಿಜೆಪಿಯವರು ಎಷ್ಟೇ ಡೇಟ್ ಕೊಟ್ಟರು ಸರ್ಕಾರಕ್ಕೆ ಬೀಳಲ್ಲ ಎಂದು ಭವಿಷ್ಯ ನುಡಿದರು.

    ramesh

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜೀವ್ ಗಾಂಧಿಯವರು ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡ ಅವರಿಗೆ ಗೊತ್ತಿದೆ. ಕಾಲ ಬಂದಾಗ ಅವರ ಕೆಲಸದ ಬಗ್ಗೆ ಹೇಳುತ್ತೇನೆ. ರಾಜೀವ್ ಗಾಂಧಿ ಅವರು ಪ್ರಾಮಾಣಿಕ ರಾಜಕಾರಣಿ ಎಂದರು.

  • ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

    – ಬಿಎಸ್‍ವೈಗೆ ತಿರುಗೇಟು ನೀಡಿದ ಸಚಿವರು
    – ಸುಮ್ಮನೆ ಪ್ರಚಾರ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ?

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದೇವೇಗೌಡರಿಗೆ ಇಬ್ಬರು ತಾಯಂದಿರು. ಅವರು ಪ್ಲೇಗ್‍ನಿಂದ ಮೃತಪಟ್ಟಿದ್ದರು. 60-70 ವರ್ಷವಾದರೂ ಪೂಜೆ ಮಾಡಿಸಿರಲಿಲ್ಲವಂತೆ. ಹೀಗಾಗಿ ತಾಯಂದಿರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿಕ್ಕಮಗಳೂರಿನ ಕಾಪು ಬಳಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು.

    dvg bsy

    ರೇವಣ್ಣ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅಳಿಯನನ್ನೆ ಹಾಕಿಕೊಟ್ಟಿದ್ದೇನೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕೇಳಿದವರನ್ನು ಕೇಳಿದ ಜಾಗಕ್ಕೆ ಹಾಕಿಕೊಟ್ಟಿದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಬಿ.ಎಸ್.ಯಡಿಯೂರಪ್ಪನವರಿಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

    HDD Revanna A

    ನಾನು ಯಾವುದೇ ಕಳ್ಳ ವೋಟ್ ಹಾಕಿಸಿಲ್ಲ. ದೇವರಾಜ್ ಎಂತಹ ವ್ಯಕ್ತಿ ಅಂತ ತಿಳಿದುಕೊಂಡು ಮಾತನಾಡಿ. ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿವೆ. ಮತದಾನ ದಿನ ನಾನು ಮಾಧ್ಯಮಗಳ ಜೊತೆಗಿದ್ದೆ. ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವುದೇ ತನಿಖೆ ಮಾಡಿಕೊಳ್ಳಲಿ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.

    ನಾನು ಕಳ್ಳ ವೋಟ್ ಹಾಕಿಸಿದ ವಿಡಿಯೋ ಇದ್ದರೆ ಕೊಡಲಿ. ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ. ಬೂತ್‍ನಲ್ಲಿ ಕೇಂದ್ರ ಮೀಸಲು ಪಡೆಯಿತ್ತು. ಕಳ್ಳ ವೋಟ್ ಹಾಕಿಸುತ್ತಿದ್ದರೆ ಅವರ ಮೂಲಕ ನಮ್ಮನ್ನ ತಡೆಯಬಹುದಿತ್ತು. ಯಾಕೆ ತಡೆಯಲಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

    HDD

    ಹೆಚ್‍ಎಂಟಿ (ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತಾಡದೆ ಕೆಲವರಿಗೆ ಸಮಾಧಾನ ಆಗುವುದಿಲ್ಲ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಎನ್ನುವುದಕ್ಕೆ ಆಗುತ್ತಾ? ಈ ವಿಷಯದಲ್ಲಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್‍ಎಂಟಿ ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

  • ಡಿಕೆಶಿ ಕೆಡಿ ಶಿವಕುಮಾರ್, ರೇವಣ್ಣ ಕೊಳೆತ ನಿಂಬೆಹಣ್ಣು : ಈಶ್ವರಪ್ಪ

    ಡಿಕೆಶಿ ಕೆಡಿ ಶಿವಕುಮಾರ್, ರೇವಣ್ಣ ಕೊಳೆತ ನಿಂಬೆಹಣ್ಣು : ಈಶ್ವರಪ್ಪ

    – ಸಿದ್ದರಾಮಯ್ಯ ಯಾವ ಕುರುಬರನ್ನು ಉದ್ಧಾರ ಮಾಡಿದ್ದಾರೆ ಹೇಳಲಿ
    – ಡಿಕೆಶಿ ಕೆಡಿ ಶಿವಕುಮಾರ್ ಅಂತ ಹೆಸರು ಇಟ್ಕೊಳ್ಳಬೇಕಿತ್ತು

    ದಾವಣಗೆರೆ: ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಡಿ ಶಿವಕುಮಾರ್ ಅಂತ ಹೆಸರು ಇಟ್ಟುಕೊಳ್ಳಬೇಕಿತ್ತು. ಕಳ್ಳ ಶಿವಕುಮಾರ್ ಮನೆಗೆ ಕೋಟ್ಯಾಂತರ ರೂಪಾಯಿ ಬೇನಾಮಿ ಆಸ್ತಿ ಸಿಕ್ಕಿದೆ. ಅವನು ಡಿ.ಕೆ.ಶಿವಕುಮಾರ್ ಅಲ್ಲ ಕಳ್ಳ ಶಿವಕುಮಾರ್ ಎಂದು ಏಕವಚನದಲ್ಲಿಯೇ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೊಕ್ಕಿನ ಮಾತಿನಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 37 ಸಾವಿರ ಮತಗಳ ಅಂತರದಿಂದ ಸೋತರು. ಅದೇ ಸೊಕ್ಕಿನ ಮಾತಿನಿಂದ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಎಂದು ಹೇಳಿದರು.

    K S ESHWARAPPA

    ಈಶ್ವರಪ್ಪ ಅವರಿಗೆ ಉದ್ದ ನಾಲಿಗೆಯಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ನಾಲಿಗೆ ತೋರಿಸಿದರು. ನನ್ನ ನಾಲಿಗೆ ಉದ್ದ ಇದೇಯಾ ಎಂದು ವರದಿಗಾರರನ್ನು ಪ್ರಶ್ನಿಸಿದರು. ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದ ವರ್ಗದ ನಾಯಕರಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದು ಆ ವರ್ಗಕ್ಕೆ ಮೋಸ ಮಾಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ಜಾತಿವಾದಿಗಳನ್ನು ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ. ಅಹಿಂದ ಹೆಸರಿನಲ್ಲಿ ಇಷ್ಟು ವರ್ಷ ರಾಜಕೀಯ ಮಾಡಿರೋದು ಸಾಕು. ರಾಜ್ಯದಲ್ಲಿ ಕಾಂಗ್ರೆಸ್ ತೆಗೆದು ಹಾಕಿದ್ದೆ ಸಿದ್ದರಾಮಯ್ಯ ಎಂದು ದೂರಿದರು.

    ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ಒಕ್ಕಲಿಗರಲ್ಲ, ನಾಯ್ಡು. ಒಕ್ಕಲಿಗರು ಯಾವುದೇ ಕಾರಣಕ್ಕೂ ಜೆಡಿಎಸ್ ಕೈ ಬಿಡಬೇಡಿ ಅಂತ ಕೇಳಿಕೊಂಡರು. ಪ್ರಧಾನಿ ಮೋದಿ ಅವರು ರಾಷ್ಟ್ರೀಯತೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆಯೇ ಹೊರತು ಜಾತಿ ಹೆಸರಿನಲ್ಲ ಎಂದು ಹೇಳಿದರು.

    hdk1 1

    ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲೋಕಸಭಾ ಟಿಕೆಟ್ ಬೇಡ ಅಂತ ಹೇಳಿದರು. ಹೀಗಾಗಿ ದಾವಣಗೆರೆ ಟಿಕೆಟ್ ಅನ್ನು ಕುರುಬ ಸಮುದಾಯದ ಮಂಜಪ್ಪ ಅವರಿಗೆ ಕೊಟ್ಟಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬಿಜೆಪಿಯಲ್ಲಿ ಇದ್ದರು. ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಹೋಗಿ ಹಾಳು ಮಾಡಿದರು. ಅವರನ್ನು ಸೋಲಿಸಲು ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕುರುಬರನ್ನು ಉದ್ಧಾರ ಮಾಡಿದ್ದಾರೆ ಅಂತ ಹೇಳಲಿ ಎಂದು ಸವಾಲು ಹಾಕಿದರು.

    ಕೊಳೆತ ನಿಂಬೆಹಣ್ಣಿನ ರೇವಣ್ಣ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಗ್ಗೆ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋಲಿಗೆ ಈಶ್ವರಪ್ಪ ಶ್ರಮಿಸುತ್ತಿದ್ದಾರೆ ಎಂಬ ಎಚ್.ಡಿ.ರೇವಣ್ಣ ಹೇಳಿಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಬಿಜೆಪಿ ಪಕ್ಷ ನನಗೆ ತಾಯಿ ಸಮಾನ, ತಾಯಿಗೆ ಎಂದೂ ಮೋಸ ಮಾಡುವುದಿಲ್ಲ ಎಂದು ತಿಳಿಸಿದರು.

    revanna it 2

  • ಜೈಲಿಗೆ ಹೋಗಿ ಬಂದವ್ರ ಮಗನಾ ರಾಘವೇಂದ್ರ ಎಂಬ ಆಡಿಯೋ ವೈರಲ್ ಆಗಿದೆ: ಎಚ್‍ಡಿಕೆ

    ಜೈಲಿಗೆ ಹೋಗಿ ಬಂದವ್ರ ಮಗನಾ ರಾಘವೇಂದ್ರ ಎಂಬ ಆಡಿಯೋ ವೈರಲ್ ಆಗಿದೆ: ಎಚ್‍ಡಿಕೆ

    – ಸಮ್ಮಿಶ್ರ ಸರ್ಕಾರಕ್ಕೆ ಬಿಎಸ್‍ವೈ ಮತ್ತೆ ಗಡುವು ನೀಡಿದ್ದಾರೆ
    – ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ
    – ಮತ್ತೆ ರಾಜಕೀಯ ನಿವೃತ್ತಿ ಮಾತನಾಡಿದ ಸಚಿವ ರೇವಣ್ಣ

    ಶಿವಮೊಗ್ಗ: ಅಭಿವೃದ್ಧಿಯ ಹರಿಕಾರ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೆಣ್ಮಕ್ಕಳ ಧ್ವನಿಯ ಕರೆ ಮೊಬೈಲ್‍ಗೆ ಬರುತ್ತದೆ. ಜೈಲಿಗೆ ಹೋಗಿ ಬಂದವರ ಮಗನಾ ರಾಘವೇಂದ್ರ ಅಂದ್ರೆ ಎಂದು ಯಾರೋ ಕೇಳಿದ್ರಂತೆ. ಆ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಸಾಗರದ ನೆಹರು ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೋಗಿದ್ದು, ಡೈರಿ ವಿಚಾರ ದೊಡ್ಡದು ಮಾಡಬೇಡಿ ಎಂದು ಮನವಿ ಮಾಡೋದಕ್ಕೆ. ನೀರಾವರಿ ಯೋಜನೆ ಮಾತುಕತೆ ಅಲ್ಲ ಎಂದು ದೂರಿದರು.

    SMG Samavesha HDK

    ಸಮ್ಮಿಶ್ರ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರು ಮತ್ತೆ ಗಡುವು ನೀಡಿದ್ದಾರೆ. ಅವರು ಮೇ 23ಕ್ಕೆ ಮುಖ್ಯಮಂತ್ರಿ ಆಗುತ್ತಾರಂತೆ. ಈ ಮೂಲಕ ಆಡಳಿತ ಪಕ್ಷಗಳ ಒಬ್ಬೊಬ್ಬ ಶಾಸಕರಿಗೆ 20ರಿಂದ 30 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಅವರಿಗೆ ಅಷ್ಟು ಹಣ ಎಲ್ಲಿಂದ ಬಂತು? ಗುರುಮಿಠ್ಕಲ್‍ನಲ್ಲಿ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದರು ಎಂದು ವಾಗ್ದಾಳಿ ನಡೆಸಿದರು.

    ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ದುಡಿಮೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸಿ. ಪ್ರಧಾನಿ ಮೋದಿ ಅವರು ದೇಶಕ್ಕೆ ಏನು ಕೊಡುಗೆ ನೀಡಿದ್ದಾರೆ? ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿ, ಈಡೇರಿಸಲಿಲ್ಲ. ಜನಧನ್ ಖಾತೆಗೆ ನರೇಗಾ ಯೋಜನೆಯ ಎರಡು ಸಾವಿರ ರೂ. ಜಮೆ ಆಗುತ್ತಿದೆ. ಆ ಹಣವನ್ನು ಕೂಡ ಈಗ ಕಡಿತಗೊಳಿಸುತ್ತಿದ್ದು, ಯಾವ ಉದ್ಯಮಿದಾರರಿಗೆ ನೀಡುತ್ತಿದ್ದಾರೋ ಏನೋ? ಎಂದು ವ್ಯಂಗ್ಯವಾಡಿದರು.

    ckd modi

    ಸಾಗರದಲ್ಲಿ ಕೆಲವು ಯುವಕರು ಮೋದಿ ಮೋದಿ ಅಂತ ಘೋಷಣೆ ಕೂಗುತ್ತಿದ್ದಾರೆ. ಆ ಯುವಕರಿಗೆ ಏನು ಹುಚ್ಚು ಹಿಡಿದಿದೆಯಾ ಅಂದ್ಕೊಂಡೆ. ರಾಮನ ಜಪ ಹೋಗಿದೆ, ಮೋದಿ ಜಪ ಶುರುವಾಗಿದೆ. ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನ ಕಣ್ಣೀರನ್ನು ಪ್ರಶ್ನೆ ಮಾಡಿದ್ದಾರೆ. ನಮ್ಮ ಸರ್ಕಾರ ಮಜಬೂರ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಜಬುತ್ ಸರ್ಕಾರ ಎನ್ನುತ್ತಾರೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಿಮ್ಮದೊಂದೇ ಫೋಟೊ ಹಾಕಿಕೊಂಡಿದ್ದೀರಿ. ಈ ಯೋಜನೆಗೆ ರಾಜ್ಯ ಸರ್ಕಾರ 900 ಕೋಟಿ ನೀಡುತ್ತದೆ. ಕೇಂದ್ರ ನೀಡುವುದು ಕೇವಲ 300 ಕೋಟಿ ರೂ. ಮಾತ್ರ. ಆದರೂ ನೀವು ರಾಜ್ಯ ಸರ್ಕಾರ ಮಜಬುರ್ ಸರ್ಕಾರ ಅಂತೀರಾ ಮೋದಿ ಅವರೇ ಎಂದು ಪ್ರಶ್ನಿಸಿದರು.

    ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಚರ್ಚೆ ಮಾಡಲ್ಲ. ಹಸಿರು ಶಾಲು ಹೊದ್ದು ನಿಮಗೆ ಟೋಪಿ ಹಾಕಿದ್ದು ಗೊತ್ತಿದೆ. ಹೀಗಾಗಿ ನಾನು ಅವರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

    SMG Samavesha Revanna

    ಸಮಾವೇಶದ ಮಧ್ಯೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆಗಮಿಸಿದರು. ಈ ವೇಳೆ ಸಮಾವೇಶದಲ್ಲಿ ಸೇರಿದ್ದ ಜನರು ಘೋಷಣೆ ಕೂಗಿದರು. ಎಚ್.ಡಿ.ರೇವಣ್ಣ ಮುಹೂರ್ತ ನೋಡಿ ಮೊದಲ ಬಾರಿಗೆ ಸಾಗರಕ್ಕೆ ಬಂದಿದ್ದಾರೆ ಎಂದ ಮಧು ಬಂಗಾರಪ್ಪ ಸಮಾವೇಶದಲ್ಲಿ ನಗೆ ಅಲೆ ಎಬ್ಬಿಸಿದರು. ತಕ್ಷಣವೇ ಕಾಗೋಡು ತಿಮ್ಮಪ್ಪ ಅವರು ಸಚಿವರನ್ನು ಕರೆದುಕೊಂಡು ಬಂದು ಮೈಕ್ ಮುಂದೆ ನಿಲ್ಲಿಸಿದರು.

    ಸಚಿವ ಎಚ್.ಡಿ.ರೇವಣ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರ ಕಾಲ ಮುಗಿದಿದೆ. ಮುಖ್ಯಮಂತ್ರಿ ಆಗಲ್ಲ. ಸಿಎಂ ಕನಸು ಇದ್ದರೆ ಮರೆತು ಬಿಡಲಿ. ಹಾಸನ, ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿಯೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಜಯಗಳಿಸುತ್ತಾರೆ. ಪ್ರಧಾನಿ ಮೋದಿ ಅವರು ಎಲ್ಲಾ ರೈತರ ಖಾತೆಗೆ ಹಣ ಹಾಕಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.

    SMG Samavesha

    ಮಾಜಿ ಶಾಸಕ ಗೋಪಾಲಕೃಷ್ಣ ಅವರು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಏನು ಮಾಡಿಲ್ಲ. ಹೀಗಾಗಿ ಪ್ರಧಾನಿ ಮೋದಿ ಎಂದು ಹೇಳುತ್ತಾರೆ. ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದರೆ ನಿಮಗೆ ಬಸ್ ಸ್ಟಾಂಡ್ ಗತಿಯಾಗುತ್ತದೆ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ತಿಳಿಸಿದರು.

    ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಷ್ಟು ಆಸ್ತಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ರಾಘವೇಂದ್ರ ಅವರ ಆಸ್ತಿ ಹೆಚ್ಚಾಗಿದ್ದು ಹೇಗೆ? ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿಯವರೇ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂದರು.

     

    SMG Samavesha A

  • ಎಚ್.ಡಿ ರೇವಣ್ಣರ ನಿಂಬೆಕಾಯಿ ಜ್ಯೋತಿಷ್ಯವನ್ನು ಡಿಕೆಶಿ ಕಲಿತಿದ್ದಾರೆ: ಆರ್.ಅಶೋಕ್

    ಎಚ್.ಡಿ ರೇವಣ್ಣರ ನಿಂಬೆಕಾಯಿ ಜ್ಯೋತಿಷ್ಯವನ್ನು ಡಿಕೆಶಿ ಕಲಿತಿದ್ದಾರೆ: ಆರ್.ಅಶೋಕ್

    – ಸರ್ಕಾರ ಉರುಳಿಸಲು ಯಾವುದೇ ಪ್ರಯತ್ನ ಮಾಡಲ್ಲ

    ಚಿಕ್ಕಬಳ್ಳಾಪುರ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಕಾಯಿ ಜ್ಯೋತಿಷ್ಯವನ್ನು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಲಿತಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಪ್ರಚಾರ ವೇಳೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತದೆ. ಆದರೆ ನಾವು ಯಾವುದೇ ಪ್ರಯತ್ನ ಮಾಡಲ್ಲ. ಚುನಾವಣಾ ಬಳಿಕ ಮೈತ್ರಿ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಕಾಂಗ್ರೆಸ್‍ನವರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಿದ್ದು ಹೋದರೆ ನಮಗೆ ಸಂಬಂಧವಿಲ್ಲ ಎಂದು ಹೇಳಿದರು.

    CKB R Ashok

    ಸಂಸದ, ಚಿಕ್ಕಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಎಂದರೆ ಸುಳ್ಳು, ಸುಳ್ಳು ಎಂದರೆ ವೀರಪ್ಪ ಮೊಯ್ಲಿ. ಅವರು ಎಲ್ಲೆಲ್ಲಿ ಕಲ್ಲು ಹಾಕಿದ್ದಾರೋ ಅಲ್ಲಿ ಕೆಟ್ಟದ್ದಾಗಿದೆ ಎಂದು ಲೇವಡಿ ಮಾಡಿದರು.

    ನಾನು ರಾಜ್ಯದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದೇನೆ. ಈ ಬಾರಿ ರಾಜ್ಯದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೈಕಮಾಂಡ್ ಗುರಿ ನೀಡಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಹೀಗಾಗಿ 22 ಸ್ಥಾನ ಗೆಲ್ಲಲು ಸಮಸ್ಯೆಯಿಲ್ಲ. ಸಮ್ಮಿಶ್ರ ಸರ್ಕಾರ ಜಗಳದ ಸರ್ಕಾರವಾಗಿದೆ. ಮಂಡ್ಯ, ತುಮಕೂರು, ಮೈಸೂರಿನಲ್ಲಿ ಎರಡೂ ಪಕ್ಷದವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು.

  • ಮೋದಿ ಬಂದಾಗ ಬರಗಾಲ ಬಂತು, ಮೋದಿ ಹೋದ್ಮೇಲೆ ಬರಗಾಲ ಹೋಗುತ್ತೆ: ಸಚಿವ ರೇವಣ್ಣ

    ಮೋದಿ ಬಂದಾಗ ಬರಗಾಲ ಬಂತು, ಮೋದಿ ಹೋದ್ಮೇಲೆ ಬರಗಾಲ ಹೋಗುತ್ತೆ: ಸಚಿವ ರೇವಣ್ಣ

    ಹಾಸನ: ಟಿವಿ ಮಾಧ್ಯಮಗಳು ಕೊನೆ ಶೋ ಎಂದು ಮೋದಿ ನೋಡಿ ಅಂತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ನೋಡಿಯೇ ಬರಗಾಲ ಬಂತು. ಅವರು ಹೋದ ಮೇಲೆಯೇ ಬರಗಾಲ ಹೋಗುತ್ತೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಪುತ್ರ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಡೆಸಿದ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಈ ಹಿಂದೆ ಮಾಧ್ಯಮಗಳು ಬೆಳಗ್ಗೆ ಮೈಸೂರು ಮಹಾರಾಜರನ್ನು ನೋಡಿ, ಅರಮನೆ ನೋಡಿ ಎಂದು ತೋರಿಸುತ್ತಿದ್ದರು. ಆದರೆ ಈಗ ಬೆಳಗ್ಗೆ ಎದ್ದರೆ ಮಂಡ್ಯ, ಹಾಸನ, ರಾಮನಗರ ಹಾಗೂ ಪ್ರಜ್ವಲ್ ಅವರನ್ನು ನೋಡಿ ಎಂದು ತೋರಿಸುತ್ತಿದ್ದಾರೆ. ಹಣ ಇಲ್ಲದೆ ನಮಗೆ ಪ್ರಚಾರ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    hsn revanna 3

    ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಆರು ಸಾವಿರ ಕೊಡುತ್ತೇವೆ ಎಂದು ಹೇಳಿದರು. ಆದರೆ ಆ ಹಣ ಇನ್ನೂ ದೆಹಲಿಯನ್ನೇ ಬಿಟ್ಟಿಲ್ಲ. ಬೇರೆ ಯಾವ ಪ್ರಧಾನಿಯೂ ದೇಶವನ್ನು ಉಳಿಸಿಲ್ವಾ? ಮೋದಿ ಒಬ್ಬರೇ ಉಳಿಸಿದ್ರಾ? ಅವರು ಗಂಟೆಗೊಂದು ಬಟ್ಟೆ ಬದಲಾಯಿಸುತ್ತಾರೆ. ಪ್ರಧಾನಿ ಮೋದಿ ಅವರ ಬಟ್ಟೆಯ ರೇಟ್ ಎಷ್ಟು ಗೊತ್ತಾ? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಟ್ಟೆ ರೇಟು ಗೊತ್ತಾ? ಲಂಡನ್‍ನಲ್ಲಿ ಬಟ್ಟೆ ಹೊಲಿಸುವವರು ಬೇಕಾ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಮಿಳುನಾಡಿನವರು ನೀರು ಬೇಡ ಅಂತ ಹೇಳಿದರು ಎಂದ ಸಚಿವರು, ಇದು ಪ್ರಜ್ವಲ್ ಚುನಾವಣೆಯಲ್ಲ. ಈ ದೇಶ ಉಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

    PM modi

  • ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ – ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ

    ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ – ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ

    ಮೈಸೂರು: ನಾನು ಯಾಕೆ ನಿಂಬೆಹಣ್ಣನ್ನು ಹಿಡಿದುಕೊಂಡಿರುತ್ತೇನೆ ಎನ್ನುವ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಉತ್ತರ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮ ಕುಲದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. ಸಮಾವೇಶದಲ್ಲಿ ಯಾರೋ ಕೊಟ್ಟರೂ ಅಂತಾ 5-6 ನಿಂಬೆಹಣ್ಣು ಇಟ್ಟುಕೊಂಡಿದ್ದೆ ಅಷ್ಟೇ ಎಂದರು.

    ಬಳಿಕ ನಿಮ್ಮ ಹೆಸರಲ್ಲಿ ನಿಂಬೆಹಣ್ಣು ಫೇಮಸ್ ಆಗಿದೆ ಎಂದು ಪ್ರಶ್ನಿಸಿದ್ದಕ್ಕೆ ರೇವಣ್ಣ ನಕ್ಕಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರಿಗೂ ಒಂದು ನಿಂಬೆಹಣ್ಣು ಕೊಡುತ್ತೇನೆ. ಆರ್. ಅಶೋಕ್‍ಗೂ ನಿಂಬೆಹಣ್ಣು ಕೊಡುತ್ತೇನೆ ಬೇಕಿದ್ರೆ ಕೇಳಲಿ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ

    PM modi

    ಈಶ್ವರಪ್ಪ ಅವರಿಗೆ ನಿಂಬೆಹಣ್ಣು ಕೊಡಲ್ವಾ ಎಂದು ಪ್ರಶ್ನಿಸಿದ್ದಕ್ಕೆ, ಈಶ್ವರಪ್ಪನನ್ನು ಯಾಕ್ರಪ್ಪ ಇಷ್ಟೋತ್ತಲ್ಲಿ ನೆನಪಿಸಿಕೊಳ್ತೀರಾ? ಯಾರಾದರೂ ಒಳ್ಳೆಯವರನ್ನು ನೆನಪಿಸಿಕೊಳ್ಳಿ. ಆ ಈಶ್ವರಪ್ಪನನ್ನು ಯಾಕ್ ನೆನಪಿಸಿಕೊಳ್ತೀರಾ. ಈಶ್ವರಪ್ಪನ ಬಗ್ಗೆ ಮಾತನಾಡಿದ್ರೆ ನಾನು ಪೊಳ್ಳೆದ್ದು ಹೋಗ್ತಿನಿ. 2018ರಲ್ಲಿ ಈಶ್ವರಪ್ಪ ಪರಿಸ್ಥಿತಿ ಏನಾಗಿತ್ತು ಗೊತ್ತು ತಾನೇ? ಅವರೇ ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಾಗಿದ್ದರು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು. ಇದನ್ನೂ ಓದಿ: ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!

    ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ. ರೈತರ ಸಹಾಯ ಧನದ ಪಟ್ಟಿ ಕೇಂದ್ರಕ್ಕೆ ತಲುಪಿಲ್ಲ ಅಂದರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ರಾಜ್ಯದಿಂದ ಕೇಂದ್ರಕ್ಕೆ 15 ಲಕ್ಷ ರೈತರ ಪಟ್ಟಿ ಹೋಗಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು.

  • ಮಂಡ್ಯದ ಸಂತೆಯಲ್ಲಿ ಫೇಮಸ್ ಆಯ್ತು ರೇವಣ್ಣ ನಿಂಬೆಹಣ್ಣು!

    ಮಂಡ್ಯದ ಸಂತೆಯಲ್ಲಿ ಫೇಮಸ್ ಆಯ್ತು ರೇವಣ್ಣ ನಿಂಬೆಹಣ್ಣು!

    ಮಂಡ್ಯ: ಮಂಡ್ಯದ ಸಂತೆಯಲ್ಲಿ ವ್ಯಾಪಾರಸ್ಥರೊಬ್ಬರು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರ ಹೆಸರಿನಲ್ಲಿ ನಿಂಬೆಹಣ್ಣು ಮಾರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶುಕ್ರವಾರ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ಯುಗಾದಿ ಹಬ್ಬದ ಸಂತೆಯಲ್ಲಿ ನಿಂಬೆಹಣ್ಣು ವ್ಯಾಪಾರಿಯೊಬ್ಬರು ರೇವಣ್ಣ ನಿಂಬೆಹಣ್ಣು ಎನ್ನುತ್ತ ಮಾರಾಟ ಮಾಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಗ್ರಾಹಕರನ್ನು ಸೆಳೆಯಲು ವ್ಯಾಪಾರಿ ನಿಂಬೆಹಣ್ಣಿಗೆ ರೇವಣ್ಣ ಅವರ ಹೆಸರಿಟ್ಟು ಮಾರಾಟ ಮಾಡಿದ್ದಾರೆ.

    revanna lemon 1

    ವ್ಯಾಪಾರಿ “ಬನ್ನಿ ತಗೋಳಿ ನಾಟಿ ನಿಂಬೆಣ್ಣು, ರೇವಣ್ಣನ್ ನಿಂಬೆಹಣ್ಣು. ಹತ್ತು ರೂಪಾಯಿಗೆ ಮೂರು” ಎಂದು ಸಂತೆಯಲ್ಲಿ ಕೂಗಿ ಕರೆಯುತ್ತ ಹಾಸ್ಯಾಸ್ಪದವಾಗಿ ವ್ಯಾಪಾರ ಮಾಡುತ್ತಿದ್ದನ್ನು ಕಂಡು ಜನರು ಇನ್ನುಂದೆ ರೇವಣ್ಣ ಬರಿ ಜೋತಿಷ್ಯಕಷ್ಟೆ ಅಲ್ಲ ನಿಂಬೆಹಣ್ಣಿಗೂ ಫೇಮಸ್ ಆಗಿಬಿಟ್ಟರು ಎಂದು ವ್ಯಂಗ್ಯವಾಡಿದರು.

    hsn revanna devegowda

    ವ್ಯಾಪಾರಸ್ಥ ವ್ಯಂಗ್ಯವಾಗಿ ಗ್ರಾಹಕರನ್ನು ಕರೆಯುವುದು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋಗೆ ನೆಟ್ಟಿಗರು ಸಖತ್ ಲೈಕ್ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸದ್ಯ ಸದ್ದು ಮಾಡುತ್ತಿದೆ.

  • ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಹಾಸನ: ಇಂದು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ತಂದೆ ಎಚ್‍ಡಿ ರೇವಣ್ಣ ಇಟ್ಟಿರುವ ಮುಹೂರ್ತ ಪ್ರಕಾರವೇ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

    ಬೆಳಗ್ಗೆಯೇ 5.30ಕ್ಕೆ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ, ಹರದನಹಳ್ಳಿಯ ದೇವೇಶ್ವರ ದೇವಸ್ಥಾನ, ಆಂಜನೇಯ ದೇಗುಲದಲ್ಲೂ ಪೂಜೆ ಸಲ್ಲಿಸಿದ್ರು.

    hsn

    ಬೆಳಗ್ಗೆ 9.30ರ ವೇಳೆಗೆ ಪೂಜೆ ಕಾರ್ಯಗಳು ಮುಗಿಯಲಿವೆ. ಬಳಿಕ ಹಾಸನಕ್ಕೆ ಬಂದು ನಗರದ ಎನ್‍ಆರ್ ಸರ್ಕಲ್‍ನಲ್ಲಿರುವ ಹೇಮಾವತಿ ಪ್ರತಿಮೆಯಿಂದ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮಧ್ಯಾಹ್ನ 12.05ರಿಂದ 12.45ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

    HSN 1 2
    ಪುತ್ರನ ನಾಮಪತ್ರಕ್ಕೆ `ವಾಸ್ತು’ ಮಂತ್ರ..!
    ಪ್ರಜ್ವಲ್ ನಾಮಿನೇಷನ್‍ಗೆ ಇದೇ ದಿನ ಯಾಕೆ ಆಯ್ಕೆ ಮಾಡ್ಕೊಂಡ್ರು ಎಂದು ಚರ್ಚೆ ಶುರುವಾಗಿದೆ. ರೇವಣ್ಣ ವಾಸ್ತು ಪ್ರೀತಿ ಎಲ್ಲರಿಗೂ ಗೊತ್ತಿರೋದೇ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಹಿಂದೆ ಕಟ್ಟಡವೊಂದರ ಶಂಕುಸ್ಥಾಪನೆ ವೇಳೆ ಪೂಜಾರಿಗೆಯೇ ಪಾಠ ಮಾಡಿದ್ದರು. ಆ ಬಳಿಕ ಬಜೆಟ್ ಇರಲಿ, ಕಾಮಗಾರಿ ಉದ್ಘಾಟನೆ ಇರಲಿ, ಖಾಸಗಿ ಕೆಲಸಗಳೇ ಇರಲಿ. ರೇವಣ್ಣ ವಾಸ್ತು, ಮುಹೂರ್ತ ಎಲ್ಲವೂ ನೋಡೇ ನೋಡ್ತಾರೆ. ಹಾಗೆಯೇ ಇದೀಗ ಪುತ್ರ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಕೂಡ ಇವರೇ ಮುಹೂರ್ತ ಇಟ್ಟಿದ್ದಾರೆ. ಎಲ್ಲಾ ಶುಭಕಾರ್ಯಗಳನ್ನು ಶುಕ್ರವಾರವೇ ಮಾಡೋ ರೇವಣ್ಣ, ಮಗನ ನಾಮಪತ್ರ ಸಲ್ಲಿಕೆಗೂ ಶುಕ್ರವಾರವನ್ನೇ ಆಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    HSN 2 1

  • ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಹಾಸನ: ಚುನಾವಣಾ ಪ್ರಚಾರದ ಭಾಷಣದ ವೇಳೆ ಶಾಸಕ ಬಾಲಕೃಷ್ಣ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

    ಹೊಳೆನರಸೀಪುರದ ಮೂಡಲ ಹಿಪ್ಪೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದದಲ್ಲಿ ಬಾಲಕೃಷ್ಣ ಮಾತನಾಡಿ, ದೇವೇಗೌಡರು ಸಂಸತ್ ನಲ್ಲಿ ಕೊನೆ ಭಾಷಣ ಎಂದು ಹೇಳುತ್ತಾ ಕಣ್ಣೀರು ಹಾಕಿದ್ರು. ತವರು ಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ನಮ್ಮ ತಂದೆಯವರ ತ್ಯಾಗ ದೊಡ್ಡದು, ಮೊಮ್ಮಗನ ಭವಿಷ್ಯದ ದೃಷ್ಟಿಯಿಂದ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ ಹೇಳಿ ಕಣ್ಣೀರು ಹಾಕಿದರು.

    HSN 1

    ಬಾಲಕೃಷ್ಣ ಅವರು ಭಾಷಣದಲ್ಲಿ ತಂದೆಯ ತ್ಯಾಗದ ಬಗ್ಗೆ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ರೇವಣ್ಣ ಸಹ ಭಾವುಕರಾಗಿ ಕಣ್ಣೀರು ಹಾಕಿದರು.

    ಮೊಮ್ಮಗನನ್ನು ರಾಜಕೀಯದಲ್ಲಿ ಮುಂದಕ್ಕೆ ತರಬೇಕು ಅನ್ನೋ ಭಾವನೆ ವರ ಮನದಾಳದಲ್ಲಿ ಇದೆ. ಅದನ್ನು ನಾವು ಸ್ವಾಗತ ಮಾಡೋಣ. ಇಂತಹ ರಾಜಕಾರಣಿ ನಮಗೆ ಮತ್ತೆ ಸಿಗುತ್ತಾರೇನ್ರೀ ಎಂದು ಪ್ರಶ್ನಿಸಿ ಬೇಸರಗೊಂಡರು. ಬಾಲಕೃಷ್ಣ ಕಣ್ಣೀರು ಹಾಕುತ್ತಿದ್ದಂತೆ ವೇದಿಕೆಯಲ್ಲೆ ರೇವಣ್ಣ ಕೂಡ ಭಾವುಕರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv