ಚೆನ್ನೈನಲ್ಲಿ ನಡೆದ ಟಿ20 ವಿಶ್ವಕಪ್‌ನ 4ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕಿವೀಸ್ 17.5 ಓವರ್‌ಗಳಲ್ಲಿ 183 ರನ್‌ಗಳನ್ನು ಗಳಿಸಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ, ನ್ಯೂಜಿಲೆಂಡ್ ಕಳೆದ ವಿಶ್ವಕಪ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್ ತಂಡ ಕಳಪೆ ಆರಂಭ ಮಾಡಿತು. 6ನೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಬ್ರಾಹಿಂ ಝದ್ರಾನ್ 10 ರನ್‌ಗಳಿಸಿ ಔಟಾದರೇ, ಆ ಓವರ್‌ನ ಕೊನೆಯ ಎಸೆತದಲ್ಲಿ ಗುರ್ಬಾಜ್ ಕೂಡ ಔಟಾದರು. ಲಾಕಿ ಫರ್ಗುಸನ್ ಎರಡೂ ವಿಕೆಟ್‌ಗಳನ್ನು ಪಡೆದರು. ನಂತರ ಗುಲ್ಬಾದಿನ್ ಮತ್ತು ಸೆಡಿಕುಲ್ಲಾ 79 ರನ್‌ಗಳ ಜೊತೆಯಾಟ ಆಡಿ ಅಫ್ಘಾನಿಸ್ತಾನವನ್ನು 17 ಓವರ್‌ಗಳಲ್ಲಿ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಗುಲ್ಬಾದಿನ್ ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿದರು. ನಂತರ ನ್ಯೂಜಿಲೆಂಡ್ ಪುನರಾಗಮನ ಮಾಡಿ ಅಫ್ಘಾನಿಸ್ತಾನವನ್ನು 20 ಓವರ್‌ಗಳಲ್ಲಿ 182/6ಕ್ಕೆ ಆಟ ಕೊನೆಗೊಳಿಸಿತು. ಲಾಕಿ ಫರ್ಗುಸನ್ 2 ವಿಕೆಟ್‌ಗಳನ್ನು ಪಡೆದರು. ಇದನ್ನೂ ಓದಿ: ಸ್ಪೇನ್ ಟಿಕೆಟ್ ಬುಕ್ ಮಾಡಿದ್ದ ಸಿರಾಜ್ ಮುಂಬೈನಲ್ಲಿ ಲ್ಯಾಂಡ್! – ಕೊನೆ ಕ್ಷಣದಲ್ಲಿ ಭಾರತವನ್ನು ಸೇರಿದ್ದು ಹೇಗೆ?
ಅಫ್ಘಾನಿಸ್ತಾನ ನೀಡಿದ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಕೇವಲ ಎರಡು ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಫಿನ್ ಅಲೆನ್ ಮತ್ತು ರಾಚಿನ್ ರವೀಂದ್ರ ಅಫ್ಘಾನ್ ಸ್ಪಿನ್ನರ್ ಮುಜೀಬ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಟಿಮ್ ಸೀಫರ್ಟ್ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧಶತಕದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ಸೀಫರ್ಟ್ 65 ರನ್‌ಗಳಿಸಿದ್ದ ವೇಳೆ ಔಟಾದರು. ನ್ಯೂಜಿಲೆಂಡ್ 16 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 155 ರನ್ ಗಳಿಸಿತು. ನಂತರ ಮಿಚೆಲ್ ಸ್ಯಾಂಟ್ನರ್ (17) ಮತ್ತು ಡ್ಯಾರಿಲ್ ಮಿಚೆಲ್ (25) ಒಟ್ಟಾಗಿ ತಂಡವನ್ನು 17.5 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.
175 ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಅಫ್ಘಾನಿಸ್ತಾನ ಟಿ 20 ಅಂತರರಾಷ್ಟ್ರೀಯ ಪಂದ್ಯವನ್ನು ಸೋತಿರುವುದು ಇದೇ ಮೊದಲು. ಅಂದರೆ, 183 ರನ್‌ಗಳ ಗುರಿಯು ಇದುವರೆಗಿನ ಅಫ್ಘಾನಿಸ್ತಾನ ವಿರುದ್ಧದ ಅತ್ಯಧಿಕ ರನ್ ಚೇಸ್ ಆಗಿದೆ. ಇದನ್ನೂ ಓದಿ: ಸೂರ್ಯ, ಸಿರಾಜ್ ಮಿಂಚು; ಯುಎಸ್‌ಎ ವಿರುದ್ಧ ಭಾರತಕ್ಕೆ 29 ರನ್‌ಗಳ ಗೆಲುವು


