ಪಲ್ಲೆಕೆಲೆ: ಟಿ20 ವಿಶ್ವಕಪ್ (T20 World Cup) ಟೂರ್ನಿಯಿಂದ ಆಸ್ಟ್ರೇಲಿಯಾ(Australia) ಹೊರಬಿದ್ದಿದ್ದು ಸೂಪರ್-8 ಹಂತವನ್ನು ಜಿಂಬಾಬ್ವೆ(Zimbabwe) ಪ್ರವೇಶಿಸಿದೆ.
ಇಂದು ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ನಿಗದಿಯಾಗಿತ್ತು. ಆದರೆ ಭಾರೀ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಇತ್ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಿಕೆ ಮಾಡಿದ್ದರಿಂದ 5 ಅಂಕ ಸಂಪಾದಿಸಿದ ಜಿಂಬಾಬ್ವೆ ಸೂಪರ್-8ಕ್ಕೆ ಅರ್ಹತೆ ಪಡೆಯಿತು.
ಸೋಮವಾರ ಶ್ರೀಲಂಕಾ (Sri Lanka) ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ಸೂಪರ್-8 ಅರ್ಹತೆ ಪಡೆಯಬೇಕಾದರೆ ಇಂದಿನ ಪಂದ್ಯದಲ್ಲಿ ಜಿಂಬಾಬ್ವೆ ಸೋಲಬೇಕಿತ್ತು.
ಬಿ ಗುಂಪಿನಲ್ಲಿ 3 ಪಂದ್ಯಗಳನ್ನು ಗೆದ್ದ ಶ್ರೀಲಂಕಾ ಈಗಾಗಲೇ ಸೂಪರ್ 8 ಪ್ರವೇಶಿಸಿದೆ. ಜಿಂಬಾಬ್ವೆ 3 ಪಂದ್ಯಗಳಿಂದ 5 ಅಂಕ ಪಡೆದರೆ ಐರ್ಲೆಂಡ್ 4 ಪಂದ್ಯವಾಡಿ 3 ಅಂಕ ಗಳಿಸಿದೆ. ಆಸ್ಟ್ರೇಲಿಯಾಗೆ ಓಮನ್ ಜೊತೆ ಪಂದ್ಯ ಬಾಕಿಯಿದೆ. ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದರೂ ತಂಡದ 4 ಅಂಕ ಮಾತ್ರ ಗಳಿಸಲಿದೆ.
ಫೆ.13 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ಗಳ ಜಯ ಸಾಧಿಸಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಸತತ 2 ಸೋಲು ಕಂಡಿರುವ ಆಸ್ಟ್ರೇಲಿಯಾ ಈಗ ಟೂರ್ನಿಯಿಂದಲೇ ನಿರ್ಗಮಿಸಿದೆ.

