ಹಾಸನ: ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ನಡೆಯುತ್ತಿರುವ ಬೆನ್ನಲ್ಲೇ ಎಲ್ಲರಿಗೂ ಭಾವೈಕ್ಯತೆ ಸಂದೇಶ ಸಾರುವ ಅಪರೂಪದ ಸನ್ನಿವೇಶ ಬೇಲೂರಿನ ಚನ್ನಕೇಶವ ಸ್ವಾಮಿ ಸನ್ನಿಧಿಯಲ್ಲಿ ನಡೆದಿದೆ.
ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿಯ ಗಳಿಗೆ ತೇರು ಬುಧವಾರ ನಡೆದಿದೆ. ಗಳಿಗೆ ತೇರು ಎಳೆಯುವ ಮುನ್ನ ಕುರಾನ್ ಪಠಣ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಖಾಜ ಸಾಹೇಬರು ತೇರಿನ ಹಗ್ಗ ಹಿಡಿದು ಕುರಾನ್ ಪಠಣ ಮಾಡಿದ ನಂತರ ಭಕ್ತರು ತೇರು ಎಳೆದು ಭಕ್ತಿ ಸಮರ್ಪಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ
ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರು ಖುರಾನ್ ಪಠಣ ಮಾಡಿದವರು. ಈ ಬಗ್ಗೆ ಮಾತನಾಡಿದ ಅವರು, ಬಹಳ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನಾನು ಐವತ್ತು ವರ್ಷದಿಂದ ಕುರಾನ್ ಪಠಣ ಮಾಡುತ್ತಿದ್ದೇನೆ. ನನ್ನ ನಂತರ ನನ್ನ ಮಗ, ಅವನ ನಂತರ ಮೊಮ್ಮಗ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಾರೆ. ಎಲ್ಲ ಧರ್ಮದವರಿಗೂ ಒಳ್ಳೆಯದಾಗಲಿ ಎಂದು ಕುರಾನ್ ಪಠಣ ಮಾಡುತ್ತೇವೆ ಎಂದು ತಿಳಿಸಿದರು.
ಕುರಾನ್ ಪಠಣದ ನಂತರ ಹಗ್ಗವನ್ನು ಅರ್ಚಕರಿಗೆ ಕೊಡುತ್ತೇವೆ. ನಂತರ ಭಕ್ತರು ತೇರನ್ನು ಎಳೆಯುತ್ತಾರೆ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿವಾದಗಳನ್ನು ನಾವು ಹುಟ್ಟು ಹಾಕಿರುವುದು. ನಮ್ಮ ಸ್ವಾರ್ಥಕ್ಕಾಗಿ ನಾವು ಮಾಡಿಕೊಳ್ಳುತ್ತಿರುವುದು. ಹಿಂದೂಗಳ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ, ನಮ್ಮ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಬಾಳಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು. ಇದನ್ನೂ ಓದಿ: ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ