ಶತಕ ಸಿಡಿಸಿ ವಿವಿಎಸ್ ಲಕ್ಷ್ಮಣ್, ವೆಂಗ್‍ಸರ್ಕಾರ್ ಹಿಂದಿಕ್ಕಿದ ಪೂಜಾರ

Public TV
2 Min Read
pujaraa

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೊದಲ ದಿನದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದ್ದು, ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅಜೇಯ ಶತಕ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕದಿಂದಾಗಿ ದಿನದಾಟದಂತ್ಯಕ್ಕೆ 90 ಓವರ್ ಗಳಲ್ಲಿ 4 ವಿಕೆಟ್ ವಿಕೆಟ್ ನಷ್ಟಕ್ಕೆ 303 ರನ್ ಪೇರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಕನ್ನಡಿಗರು, ಆಪ್ತ ಗೆಳೆಯರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿರುವ ಅವಕಾಶ ಪಡೆದಿಕೊಂಡರು. ಆದರೆ ಕೆಎಲ್ ರಾಹುಲ್ ತಮ್ಮ ಕಳಪೆ ಫಾರ್ಮ್ ಮುಂದುವರಿಸಿ 9 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಬಳಿಕ ಒಂದಾದ ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಜೋಡಿ 2ನೇ ವಿಕೆಟ್‍ಗೆ 116 ರನ್‍ಗಳ ಮಹತ್ವದ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ನೀಡಿತು. ತಾಳ್ಮೆಯ ಆಟವಾಡಿದ ಅಗರ್ವಾಲ್ ಎರಡನೇ ಪಂದ್ಯದಲ್ಲೂ ಅರ್ಧ ಶತಕ ಪೂರೈಸಿದ ಸಾಧನೆ ಮಾಡಿದರು. 112 ಎಸೆತಗಳನ್ನು ಎದುರಿಸಿ 7 ಬೌಂಡರಿ, 2 ಸಿಕ್ಸರ್ ಗಳ ನೆರವಿನಿಂದ 77 ರನ್ ಸಿಡಿಸಿ ಔಟಾದರು.

ಈ ಹಂತದಲ್ಲಿ ಕಣಕ್ಕೆ ಇಳಿದ ನಾಯಕ ಕೊಹ್ಲಿ 23 ರನ್, ಬಳಿಕ ಬಂದ ರಹಾನೆ 18 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮತ್ತೊಂದು ಬದಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರಿಸಿದ ಚೇತೇಶ್ವರ ಪೂಜಾರ 250 ಎಸೆತಗಳಲ್ಲಿ 130 ರನ್ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಪೂಜಾರ ಅವರಿಗೆ ಸಾಥ್ ನೀಡಿರುವ ಯುವ ಆಟಗಾರ ಹನುಮ ವಿಹಾರಿ 39 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 303 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

mayank

114 ಇನ್ನಿಂಗ್ಸ್ ಗಳಲ್ಲಿ ವೃತ್ತಿ ಜೀವನದ 18ನೇ ಶತಕ ಪೂರೈಸಿದ ಪೂಜಾರ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗ್‍ಸರ್ಕಾರ್ ದಾಖಲೆಯನ್ನು ಮುರಿದರು. ಅಲ್ಲದೇ ಟೀಂ ಇಂಡಿಯಾ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದರು. ವಿವಿಎಸ್ ಲಕ್ಷ್ಮಣ್, ದಿಲೀಪ್ ವೆಂಗ್‍ಸರ್ಕಾರ್ ತಲಾ 17 ಶತಕ ಸಿಡಿಸಿದ್ದಾರೆ. ಆಸೀಸ್ ಟೂರ್ನಿಯಲ್ಲಿ ಪೂಜಾರ ಅವರ 3ನೇ ಶತಕ ಇದಾಗಿದೆ.

ಸಚಿನ್ ತೆಂಡೂಲ್ಕರ್ ಅವರ ಗುರು, ಕೋಚ್ ರಮಾಕಾಂತ್ ಅಚ್ರೇಕರ್ ವಿಧಿವಶರಾದ ಹಿನ್ನಲೆಯಲ್ಲಿ ಅವರ ಗೌರವಾರ್ಥವಾಗಿ ಟೀಂ ಇಂಡಿಯಾ ಆಟಗಾರರು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕೆ ಇಳಿದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *