ಬಾಗಲಕೋಟೆ: ಸ್ವಾಮೀಜಿಯೊಬ್ಬರು ಎರಡು ದಿನಗಳಿಂದ ನೀರಿನಲ್ಲಿಯೇ ಮುಳ್ಳಿನ ಮೇಲೆ ಕುಳಿತು ಧ್ಯಾನ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಮಹಾ ಸಿದ್ದೇಶ್ವರ ಮಠದ ಪೀಠಾಧಿಪತಿ ಸುರೇಶ ಸ್ವಾಮೀಜಿ ಎರಡು ದಿನಗಳ ಹಿಂದೆ ಏಕಾಏಕಿ ಕಾರಣ ಹೇಳದೆ ತುಂಗಳ ಗ್ರಾಮದ ಹೊಸಕೆರೆಯಲ್ಲಿ ಮುಳ್ಳಿನೊಂದಿಗೆ ನೀರಿನಲ್ಲಿ ತೇಲುತ್ತ ಜಪಕ್ಕೆ ಮುಂದಾಗಿದ್ದರು.
ಈ ಬಗ್ಗೆ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಸ್ವಾಮೀಜಿಯನ್ನ ನೋಡೋಕೆ ಆಗಮಿಸುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು. ನಿರಂತರ ನೀರಿನಲ್ಲಿ ಇರುವುದು ಆರೋಗ್ಯಕ್ಕೆ ಸರಿಯಲ್ಲ ಎಂಬ ಉದ್ದೇಶದಿಂದ ಇತ್ತ ತಹಶಿಲ್ದಾರರು ಮತ್ತು ಪೊಲೀಸ್ ಸಿಬ್ಬಂದಿ ಸ್ವಾಮೀಜಿಯನ್ನ ಹೊರಕರೆಯುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಆದರೆ ಅಂದುಕೊಂಡಂತೆ ಸ್ವಾಮೀಜಿ ಸೋಮವಾರದಂದು ಭಕ್ತರ ಸಮ್ಮುಖದಲ್ಲಿ ಹೊರಬಂದಿದ್ದು, ಭಕ್ತರು ಹರ್ಷಗೊಂಡರು. ಇತ್ತ ಸುರೇಶ ಸ್ವಾಮೀಜಿ ಲೋಕ ಕಲ್ಯಾಣಾರ್ಥ ಕೆರೆಯಲ್ಲಿ ಜಪ ಮಾಡಿದ್ದೇನೆ ಎಂದು ಹೇಳಿದರು.