ಬೆಂಗಳೂರು: ಪುಲಿಕೇಶಿನಗರ ಪೊಲೀಸ್ ಠಾಣಾ(Pulikeshinagar Police Station) ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ(Building) ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಅಬ್ದುಲ್ ರಹೇಮಾನ್ ಎಂಬುವರಿಗೆ ಸೇರಿದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಬ್ಯಾಗ್ನಲ್ಲಿ ಇರಿಸಲಾಗಿದ್ದ ಬ್ಯಾಟರಿ ಮಾದರಿಯ ವಸ್ತುವೊಂದು ಏಕಾಏಕಿ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಘಟನೆಯಲ್ಲಿ ಕಟ್ಟಡದಲ್ಲಿದ್ದ ಸೂರಜ್ ಹಾಗೂ ಅಲ್ಲಾವುದ್ದೀನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ತಕ್ಷಣ ಪುಲಿಕೇಶಿನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ತೀವ್ರತೆ ಹಾಗೂ ಶಂಕಿತ ವಸ್ತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಭಯೋತ್ಪಾದನಾ ನಿಗ್ರಹ ದಳ (ಎಟಿಸಿ) ಹಾಗೂ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ತಪಾಸಣೆ ಕೈಗೊಂಡಿದ್ದಾರೆ.
ಸ್ಫೋಟದ ಭೀಕರತೆಯನ್ನು ವಿವರಿಸಿದ ಮನ್ಸೂರ್, ಮಧ್ಯಾಹ್ನ ಸುಮಾರು ಎರಡು ಗಂಟೆಯ ಸುಮಾರಿಗೆ ಏಕಾಏಕಿ ಅತ್ಯಂತ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಬಂತು. ಧಾವಿಸಿ ನೋಡಿದಾಗ ಕಟ್ಟಡದಲ್ಲಿದ್ದ ಇಬ್ಬರು ತೀವ್ರವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಫೋಟದ ರಭಸಕ್ಕೆ ಒಬ್ಬರ ಕಣ್ಣುಗುಡ್ಡೆ ಹೊರಬಂದಿದ್ದರೆ, ಮತ್ತೊಬ್ಬರ ಕೈ ತುಂಡಾಗಿದೆ,” ಎಂದು ಕಣ್ಣಾರೆ ಕಂಡ ಭೀಕರ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ತಕ್ಷಣವೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಹೆಚ್ಚಿನ ಹೇಳಿಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಬ್ಯಾಗ್ನಲ್ಲಿ ಬ್ಯಾಟರಿ ಮಾದರಿಯ ವಸ್ತು ಏಕೆ ಇತ್ತು? ಅದು ಹೇಗೆ ಸ್ಫೋಟಗೊಂಡಿತು? ಇದರ ಹಿಂದೆ ಯಾವುದೇ ದುರುದ್ದೇಶವಿದೆಯೇ ಎಂಬ ಕೋನಗಳಲ್ಲಿ ತನಿಖೆ ಚುರುಕುಗೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
