ಚಿಕ್ಕಬಳ್ಳಾಪುರ: ಆಗಸ್ಟ್ 14 ರಂದು 22 ವರ್ಷದ ಪದವಿ ವಿದ್ಯಾರ್ಥಿನಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ದೂರು ನೀಡಿದ್ದಾನೆ. ಆದರೆ ಸಂಬಂಧಿಕರು, ಇಲ್ಲ ಇದು ಕೊಲೆ. ನಮ್ಮ ಮನೆ ಮಗಳಿಗೆ ನ್ಯಾಯ ನೀಡಿ, ಆತ್ಮಕ್ಕೆ ಶಾಂತಿ ಕೊಡಿಸಿ ಎಂದು ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಮಗಳನ್ನೇ ತಂದೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿರೋದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಮಂಚೇನಹಳ್ಳಿ ಬಳಿಯ ವರವಣಿ ಗ್ರಾಮದಲ್ಲಿ. ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ ಶೀಲಾ (22) ವರವಣಿ ಗ್ರಾಮದ ನಿವಾಸಿ. ಗ್ರಾಮದ ರವಿಶಂಕರ್ ಹಾಗೂ ಜಯಂತಮ್ಮ ದಂಪತಿಯ ಒಬ್ಬಳೇ ಮಗಳು. ಆದರೆ ಶೀಲಾ ಕಳೆದ ಆಗಸ್ಟ್ 14 ರಂದು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತಳ ತಂದೆ ರವಿಶಂಕರ್, ತನ್ನ ಮಗಳು ಹುಷಾರಿಲ್ಲದ ಕಾರಣ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದು ಅನಾರೋಗ್ಯದ ಹಿನ್ನೆಲೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾನೆ.
Advertisement
Advertisement
ಈ ಸಂಬಂಧ ಐಪಿಸಿ ಸೆಕ್ಷನ್ 174 ಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಂಚೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈ ಮಧ್ಯೆ ಶೀಲಾ ಸಾವಿನ ಬಗ್ಗೆ ಸಂಬಂಧಿಕರಿಗೆ ಸಾಕಷ್ಟು ಅನುಮಾನಗಳು ಮೂಡಿವೆ. ಹೀಗಾಗಿ ಮೃತ ಶೀಲಾಳ ತಾಯಿ ಜಯಂತಮ್ಮನವರ ಸಹೋದರಿಯರು ಶೀಲಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಆಕೆಯನ್ನು ತಂದೆಯೇ ಹಲ್ಲೆ ಮಾಡಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
ಮೃತ ಶೀಲಾ ತಾಯಿ ಜಯಂತಮ್ಮಳ ಸಹೋದರಿಯರು ಹೇಳೋ ಹಾಗೆ ಶೀಲಾಳ ತಂದೆ ರವಿಶಂಕರ್ ತಾಯಿ ಹಾಗೂ ಮಗಳಿಗೆ ವಿನಾಕಾರಣ ಕಿರುಕುಳ ಕೊಟ್ಟು ದೂರ ಮಾಡುತ್ತಿದ್ದರು. ಇನ್ನೂ ರವಿಶಂಕರ್ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಸಹ ಹೊಂದಿದ್ದು ಇದಕ್ಕೆ ಮಗಳು ಸದಾ ವಿರೋಧ ಮಾಡುತ್ತಿದ್ದಳು. ಇದರಿಂದ ಮಗಳನ್ನು ಕಂಡರೆ ತಂದೆಗೆ ಆಗುತ್ತಿರಲಿಲ್ಲ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್
Advertisement
ಇನ್ನೂ ಶೀಲಾ ಯಾರನ್ನೋ ಲವ್ ಮಾಡುತ್ತಿದ್ದಳು ಎನ್ನುವ ಅನುಮಾನದ ಮೇರೆಗೆ ಪದೇ ಪದೆ ಮಗಳಿಗೆ ಹೊಡೆಯೋದು ಬಡಿಯೋದು ಮಾಡಿ ಕಿರುಕುಳ ಸಹ ಕೊಡುತ್ತಿದ್ದ. ಇದೇ ವಿಚಾರದಲ್ಲಿ ಮಗಳು ಕದ್ದು ಮುಚ್ಚಿ ಫೋನ್ ಬಳಸುತ್ತಿದ್ದುದನ್ನು ಕಂಡು ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತಳ ಸಂಬಂಧಿಕರು ಈಗ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್‌ಪಿ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಗೂ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಶೀಲಾಳ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹೀಗಾಗಿ ವರದಿಯ ನಂತರ ಇದು ತಂದೆ ಹೇಳುವ ಹಾಗೆ ಆತ್ಮಹತ್ಯೆಯೋ ಇಲ್ಲ ಕೊಲೆಯೋ ಎಂಬುದು ಬಯಲಾಗಬೇಕಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ
Web Stories