– ತುಳುವಿನಲ್ಲಿ ಮಾತನಾಡುತ್ತಿದ್ದ ಶಂಕಿತ
– ಪೊಲೀಸರ ಮುಂದೆ ಹಾಜರಾದ ರಿಕ್ಷಾ ಚಾಲಕ
– ಸೆಲೂನ್ ಅಂಗಡಿಯಲ್ಲಿ ಇಟ್ಟ ಬ್ಯಾಗ್‍ನಲ್ಲಿ ಏನಿತ್ತು?
ಮಂಗಳೂರು: ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಕ್ಷಣಕ್ಕೊಂದು ಸ್ಫೋಟಕ ಟ್ವಿಸ್ಟ್ ಸಿಗುತ್ತಿದೆ. ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಬಾಂಬ್ ಇಟ್ಟು ವಾಪಸ್ ಹೋದವ ಸ್ಫೋಟಕ ಮಾಹಿತಿಗಳನ್ನು ಬಿಟ್ಟು ಹೋಗಿದ್ದಾನೆ.
ಶಂಕಿತನ ಫೋಟೋ ಮತ್ತು ರಿಕ್ಷಾದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳಲು ಆರಂಭವಾಯಿತೋ ರಿಕ್ಷಾ ಚಾಲಕ ಶಾಕ್ ಆಗಿದ್ದಾನೆ. ಕೂಡಲೇ ಪೊಲೀಸರ ಮುಂದೆ ಆತ ಹಾಜರಾಗಿ ಇರುವ ವಿಷಯವನ್ನು ತಿಳಿಸಿದ್ದಾನೆ. ರಾತ್ರಿ ಪೊಲೀಸರು ಆತನನ್ನು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದಾರೆ.
Advertisement
Advertisement
ಎರಡು ಬ್ಯಾಗ್: ಖಾಸಗಿ ಬಸ್ಸಿನಲ್ಲಿ ಬಂದ ಮಧ್ಯ ವಯಸ್ಕ ಶಂಕಿತ ವ್ಯಕ್ತಿ ಬಳಿಯಲ್ಲಿ ಎರಡು ಬ್ಯಾಗ್ ಇತ್ತು. ಕೆಂಜಾರಿನಲ್ಲಿ ಇಳಿದ ಆತ ಒಂದು ಬ್ಯಾಗನ್ನು ಸೆಲೂನ್ ಅಂಗಡಿ ಬಳಿ ಇರಿಸಿದ್ದ. ಈ ವೇಳೆ ಮಾಲೀಕರು ಆ ಬ್ಯಾಗನ್ನು ಹೊರಗಡೆ ಇಡು ಎಂದು ಹೇಳಿದ್ದರು. ಹೀಗಾಗಿ ಬ್ಯಾಗನ್ನು ಹೊರಗಡೆ ಇಟ್ಟು ಆತ ರಿಕ್ಷಾ ಏರಿ ವಿಮಾನ ನಿಲ್ದಾಣದ ಕಡೆ ಪ್ರಯಾಣಿಸಿದ್ದ.
Advertisement
ಬೆಳಗ್ಗೆ 8:50ಕ್ಕೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಹೊರ ಭಾಗದಲ್ಲಿ ಬ್ಯಾಗ್ ಇರಿಸಿ ರಿಕ್ಷಾ ಏರಿದ್ದಾನೆ. ಬಜ್ಪೆ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದವ ಆಟೋದಲ್ಲಿ ಚಾಲಕನೊಂದಿಗೆ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾನೆ. ಬಳಿಕ ಕೆಂಜಾರಿಗೆ ತೆರಳಿ ಅಂಗಡಿಯಲ್ಲಿ ಇಟ್ಟಿದ್ದ ಬ್ಯಾಗನ್ನು ಎತ್ತುಕೊಂಡಿದ್ದಾನೆ. ಪ್ರಯಾಣದ ಅವಧಿಯಲ್ಲಿ ಯಾವುದೇ ಆತಂಕ ತೋರಿಸಿಕೊಂಡಿಲ್ಲ. ಆರಾಮಾಗಿ ಮಾತನಾಡುತ್ತಾ ಪಂಪ್‍ವೆಲ್ ತಲುಪಿ 400 ರೂ. ನೀಡಿದ್ದಾನೆ.
Advertisement
ಆಟೋ ಚಾಲಕ ಕೊಟ್ಟ ಮಾಹಿತಿ ಅಧರಿಸಿ ಒಂದು ಹಂತಕ್ಕೆ ಶಂಕಿತ ಯಾರು ಎನ್ನುವುದನ್ನು ಅಂದಾಜಿಸಿರುವ ಪೊಲೀಸರು ಇದೀಗ ಮೂರು ವಿಶೇಷ ತಂಡಗಳಲ್ಲಿ ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕೆಂಜಾರಿಗೆ ಖಾಸಗಿ ಬಸ್ಸಿನಲ್ಲಿ ಆಗಮಿಸಿದ ಆತ ಅಲ್ಲಿಂದ ರಿಕ್ಷಾ ಮಾಡಿಕೊಂಡು ಬಜ್ಪೆಗೆ ತೆರಳಿ ಬಳಿಕ ಅಲ್ಲಿಂದ ಮಂಗಳೂರಿನ ಪಂಪ್‍ವೆಲ್ ಸರ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದೇ ಈಗ ಅನುಮಾನಕ್ಕೆ ಕಾರಣವಾಗಿದೆ. ಬಜ್ಪೆಯಿಂದ ಮಂಗಳೂರಿಗೆ ಬಸ್ ಸೇವೆ ಇದೆ. ಆದರೆ ಆತ ಹತ್ತಿರ ಹತ್ತಿರ 19 ಕಿ.ಮೀ ರಿಕ್ಷಾದಲ್ಲೇ ಹೋಗಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಇದರ ಜೊತೆಯಲ್ಲಿ ಇನ್ನೊಂದು ಬ್ಯಾಗ್‍ನಲ್ಲಿ ಏನಿತ್ತು? ಆತ ಅದನ್ನು ಅಂಗಡಿಯಲ್ಲಿ ಬಿಟ್ಟು ಹೋಗಿದ್ದು ಯಾಕೆ ಎನ್ನುವ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದೆ.
ಟೊಪ್ಪಿ ಧರಿಸಿದ ಶಂಕಿತ ಎಷ್ಟೊತ್ತಿಗೆ ಪಂಪ್‍ವೆಲ್‍ನಲ್ಲಿ ಇಳಿದ? ನಂತರ ಹೋಟೆಲ್‍ಗೆ ಹೋಗಿದ್ದಾನಾ? ಆ ಸಮಯದಲ್ಲಿ ಬಂದ ಬಸ್ಸುಗಳನ್ನು ಸೀದಾ ಏರಿದ್ದಾನೋ? ಅಥವಾ ಎಲ್ಲರ ದಾರಿ ತಪ್ಪಿಸಲು ಬಸ್‍ಸ್ಟಾಂಡ್‍ಗೆ ಬಂದು ಬೇರೆ ಕಡೆ ಹೋಗಿದ್ದಾನಾ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ತನಿಖೆ ಆರಂಭಿಸಿದ್ದಾರೆ.
ಎನ್‍ಐಎ ಭೇಟಿ: ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ) ತಂಡದ 4 ಮಂದಿ ಅಧಿಕಾರಿಗಳು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ವಿಮಾನ ನಿಲ್ದಾಣ, ಕೆಂಜಾರು ಪ್ರದೇಶವನ್ನು ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆಯಿದೆ.