ಪಾಟ್ನಾ: ಕುಡಿದ ಮತ್ತಿನಲ್ಲಿ ಎಸ್‍ಯುವಿ ಕಾರ್ ಹರಿಸಿ 9 ಶಾಲಾಮಕ್ಕಳ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ, ಅಮಾನತುಗೊಂಡಿರುವ ಬಿಹಾರದ ಬಿಜೆಪಿ ನಾಯಕ ಬುಧವಾರದಂದು ಇಲ್ಲಿನ ಮುಜಾಫರ್‍ಪುರ್‍ನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
Advertisement
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕ ಮನೋಜ್ ಬೈತಾ ಶನಿವಾರದಿಂದ ಕಾಣೆಯಾಗಿದ್ದರು. ಬುಧವಾರದಂದು ಬೈತಾ ಪೊಲೀಸರಿಗೆ ಶರಣಾಗಿದ್ದಾರೆ. ಅಪಘಾತದಲ್ಲಿ ಗಾಯಗಳಾದ ಹಿನ್ನೆಲೆಯಲ್ಲಿ ಬಂಧನದ ಬಳಿಕ ಬೈತಾ ಅವರನ್ನ ಚಿಕಿತ್ಸೆಗಾಗಿ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
Advertisement
ವರದಿಗಳ ಪ್ರಕಾರ ಬೈತಾ ಅವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರವಿದ್ದು, ಈ ಪ್ರಕರಣದ ಬಗ್ಗೆ ವಿರೋಧ ಪಕ್ಷದವರು ವಾಗ್ದಾಳಿ ನಡೆಸುತ್ತಿರೋದ್ರಿಂದ ಬಿಜೆಪಿಗೆ ಮುಜುಗರ ತಂದಿದೆ. ರಾಜ್ಯ ಬಿಜೆಪಿ ನಾಯಕರ ನಿರ್ದೇಶನದಂತೆ ಬೈತಾ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಘಟನೆ ಬಳಿಕ ಬೈತಾ ಅವರನ್ನ ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ.
Advertisement
ಶನಿವಾರದಂದು ಮುಜಾಫರ್‍ಪುರ್ ಹೊರವಲಯದ ಸರ್ಕಾರಿ ಶಾಲಾ ಕಟ್ಟಡವೊಂದರ ಬಳಿ ಮನೋಜ್ ಬೈತಾ ಚಲಿಸುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಮಕ್ಕಳ ಮೇಲೆ ಹರಿದಿತ್ತು. ಪರಿಣಾಮ 9 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 20 ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಘಟನೆ ಬಳಿಕ ಬೈತಾ ಕಾರಿನಿಂದ ಇಳಿದು ಪರಾರಿಯಾಗಿದ್ದರು. ಅಪಘಾತದಲ್ಲಿ ಐವರು ಮೊಮ್ಮಕ್ಕಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗಿದ್ದು, ಬೈತಾ ಅವರೇ ಕಾರು ಚಲಾಯಿಸುತ್ತಿದ್ದುದು ಗೊತ್ತಾಗಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧವಿದ್ದರೂ ಈ ಘಟನೆ ನಡೆದಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.