ರೆಡಿಯಾಗ್ತಿದೆ ರನ್ 2

Public TV
2 Min Read
Run 2 a

ಬೆಂಗಳೂರು: ಹಲವಾರು ಸಸ್ಪೆನ್ಸ್ ಕಥಾನಕ ಹೊಂದಿದ ಚಿತ್ರಗಳು ಬಂದು ಹೋಗಿವೆ. ಅಂಥಾ ಚಿತ್ರಗಳ ಲೆಕ್ಕಕ್ಕೆ ಸಂಜಯ್ ಅವರ ನಿರ್ದೇಶನದ ರನ್ 2 ಚಿತ್ರವೂ ಹೊಸ ಸೇರ್ಪಡೆಯಾಗಿದೆ. ಈ ಹಿಂದೆ ಸಾಗರಿ ಎಂಬ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನ ಕೆಲಸ ಆರಂಭಿಸಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಬ್ಯಾಡಗಿ ಮಿರ್ಚಿ ಎಂಬ ಚಿತ್ರದವರೆಗೆ ಹನ್ನೊಂದು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಹಾಗೂ ನಿರ್ಮಾಪಕ ಬಿ.ಎಸ್. ಸಂಜಯ್ ಅವರಿಗೆ ಮೊದಲಿಂದಲೂ ಸಾಹಸ ಪ್ರಧಾನ ಚಿತ್ರವೊಂದನ್ನು ನಿರ್ಮಾಣ ಮಾಡುವ ಬಯಕೆ ಇತ್ತಂತೆ. ಅದನ್ನು ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ.

ಮೊನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಅವರೇ ಈ ಮಾತನ್ನು ಹೇಳಿಕೊಂಡರು. `ರನ್ 2′ ಚಿತ್ರದ ನಿರ್ಮಾಪಕ, ನಿರ್ದೇಶಕ ಆಗಿರುವ ಬಿ.ಎಸ್. ಸಂಜಯ್ ಅವರು ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿ ಚಿತ್ರವನ್ನು ಸೆನ್ಸಾರ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಆಗಲೇ ಸೆನ್ಸಾರ್ ಮಂಡಳಿಗೆ ಅರ್ಜಿ ಸಹ ಸಲ್ಲಿಸಿದ್ದಾರೆ. ಪವನ್ ಶೆಟ್ಟಿ ಹಾಗೂ ತಾರಾ ಶುಕ್ಲ ಈ ಚಿತ್ರದ ನಾಯಕ, ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ತನ್ನ ಕಾಲೇಜು ದಿನಗಳನ್ನು ನೆನಪಿಸಿಕೊಂಡು ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಆತನಲ್ಲಿ ಸಹಾಯ ಕೋರುತ್ತಾಳೆ. ಆಕೆಯ ಇಚ್ಛೆಯಂತೆ ಕರೆದುಕೊಂಡು ಹೋಗುವಾಗ ನಾಯಕನಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ಎದುರಿಸಿ ನಾಯಕ ಹೇಗೆ ಹೊರ ಬರುತ್ತಾನೆ ಎಂಬುದನ್ನು ರನ್ 2 ಚಿತ್ರದ ಮೂಲಕ ನಿರ್ದೇಶಕ ಸಂಜಯ್ ಹೇಳಹೊರಟಿದ್ದಾರೆ. ಈ ಚಿತ್ರಕ್ಕೆ ಕರಾವಳಿ ತೀರದ ಕುಮಟಾ, ಹೊನ್ನಾವರ ಹಾಗೂ ಯಾಣದಂಥ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಆ ಹಾಡುಗಳಿಗೆ ಎಂ. ಸಂಜೀವರಾವ್ ಸಂಗೀತ ಸಂಯೋಜಿಸಿದ್ದಾರೆ.

2015ರ ಮಿಸ್ಟರ್ ವಲ್ರ್ಡ್ ಮತ್ತು ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಮಂಗಳೂರಿನ ಪವನ್ ಶೆಟ್ಟಿ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪಂಟ ಚಿತ್ರದಲ್ಲಿ ಕುಲುಕು ಕುಲುಕು ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ತಾರಾ ಶುಕ್ಲ ಈ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಕುರಿ ರಂಗ, ಜನಾರ್ಧನ್, ಮತ್ತು ಖಳ ನಟನಾಗಿ ಮಹೇಶ್ ಕುಮಾರ್ ಕುಮಟಾ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರಮೇಶ್ ಕೋಯಿರಾ ಅವರ ಛಾಯಾಗ್ರಹಣ, ಅಕುಲ್ ನೃತ್ಯ, ಜಗ್ಗು ಅವರ ಸಾಹಸ ನಿರ್ದೇಶನವಿದೆ. ಎಸ್.ಪಿ.ಬಿ. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡವು ಯೋಜನೆ ಹಾಕಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *