ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಟೋಲ್ ಗೇಟ್ (Surathkal Tollgate) ಮುತ್ತಿಗೆ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದೆ. ಟೋಲ್ ವಿರೋಧಿ ಹೋರಾಟಗಾರರು ಈ ಮೊದಲೇ ಹೇಳಿದಂತೆ ನೇರ ಕಾರ್ಯಾಚರಣೆಗೆ ಯತ್ನಿಸಿದ್ದಾರೆ. ಆದರೆ ಪೊಲೀಸರು ಈ ಕಾರ್ಯಾಚರಣೆಯನ್ನು ತಡೆದಿದ್ದು, ನೂರಾರು ಹೋರಾಟಗಾರರನ್ನು ಬಂಧಿಸಿದ್ದಾರೆ.
Advertisement
ಇಂದು ಮುಂಜಾನೆಯೇ ಮಂಗಳೂರಿನ ಸುರತ್ಕಲ್ ಎನ್ ಐಟಿಕೆ (NITK) ಟೋಲ್ ಗೇಟ್ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಕ್ರಮ ಟೋಲ್ ಗೇಟ್ ನ್ನು ಕಿತ್ತು ಬಿಸಾಡೋದಾಗಿ ಇಂದು ಹೋರಾಟ ಆರಂಭವಾಗಿತ್ತು. 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದೇ ಟೋಲ್ ಗೇಟ್ ಇರಬೇಕೆಂಬ ನಿಯಮ ಇದ್ದರೂ ಇಲ್ಲಿ ಒಟ್ಟು ಮೂರು ಟೋಲ್ ಗೇಟ್ ಗಳಿವೆ. ಹೆಜಮಾಡಿ ಟೋಲ್ ಗೇಟ್ (Hejamadi Tollgate) ಆರಂಭವಾದ ಬಳಿಕ ಈ ಟೋಲ್ ಗೇಟ್ ನ್ನು ತೆಗೆಯುತ್ತೇವೆ ಎಂದು ಹೇಳಿ 6 ವರ್ಷವಾದ್ರೂ ಇನ್ನೂ ಕಾರ್ಯಾಚರಿಸುತ್ತಿದೆ. ಹೀಗಾಗಿ ಈ ಟೋಲ್ ಗೇಟ್ ಅಕ್ರಮವಾಗಿದೆ.
Advertisement
Advertisement
ಇದನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಹೋರಾಟ ಸಮಿತಿ ಇಂದು ಬೃಹತ್ ಪ್ರತಿಭಟನೆಗೆ ತಯಾರಿ ನಡೆಸಿತ್ತು. ನೇರ ಕಾರ್ಯಾಚರಣೆಯನ್ನು ಮಾಡಿ ಟೋಲ್ ಗೇಟನ್ನು ಕಿತ್ತು ಬಿಸಾಡೋದಾಗಿ ಹೋರಾಟಗಾರರು ತಯಾರಿ ನಡೆಸಿದ್ರು. ಅದರಂತೆ ಇಂದು ಸುಮಾರು ಒಂದು ಗಂಟೆಗಳ ಕಾಲ ಘೋಷಣೆ ಕೂಗಿ ಬಳಿಕ ಏಕಾಏಕಿ ಪೊಲೀಸರ ಬ್ಯಾರಿಕೇಡ್ ನ್ನು ತಳ್ಳಿ ಟೋಲ್ ಗೇಟ್ ನತ್ತ ನೂರಾರು ಹೋರಾಟಗಾರರು ನುಗ್ಗಿ ಟೋಲ್ ಗೇಟ್ ಧ್ವಂಸಕ್ಕೆ ಮುಂದಾದರು. ಆದರೆ ಪೊಲೀಸರು ತಕ್ಷಣವೇ ಎಲ್ಲರನ್ನು ಬಂಧಿಸಿದ್ರು.
Advertisement
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಸುಮಾರು 500ಕ್ಕೂ ಹೆಚ್ಚು ಪೊಲೀಸರು ಇದ್ದರೂ ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದ ಹೋರಾಟಗಾರರನ್ನು ತಡೆಯಲು ಸಾಧ್ಯವಾಗಿಲ್ಲ. ಟೋಲ್ ಗೇಟ್ ನ ಮುಂಭಾಗದಲ್ಲಿ ಎರಡು ತಡೆಬೇಲಿಗಳನ್ನು ಪೊಲೀಸರು ಹಾಕಿದ್ದರೂ ಹೋರಾಟಗಾರರು ಅದನ್ನೂ ಮುರಿದು ಒಳ ನುಗ್ಗಿದ್ದರು. ಆದರೆ ಟೋಲ್ ಗೇಟ್ ಧ್ವಂಸಕ್ಕೆ ಮುಂದಾಗಿದ್ದ ಕೆಲವನ್ನು ಮುಖಂಡರುಗಳು ತಡೆದಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಅಕ್ರಮ ಟೋಲ್‍ಗೇಟ್ ವಿವಾದ – ಟೋಲ್ ಪ್ಲಾಜಾ ಮೇಲೇರಿ ಮಿಥುನ್ ರೈ ಆಕ್ರೋಶ
ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಕಾಂಗ್ರೆಸ್ (Congress), ಸಿಪಿಐಎಂ (CPIM), ಜೆಡಿಎಸ್ (JDS), ಆಪ್ (AAP) ಸೇರಿದಂತೆ ವಿವಿಧ ಪಕ್ಷ ಹಾಗೂ ಸಂಘಟನೆಗಳು ಭಾಗಿಯಾಗಿದ್ದವು. ಕಳೆದ ಹಲವು ವರ್ಷಗಳಿಂದ ಈ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಆಗದ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನಿಂದಲೇ ಟೋಲ್ ನಲ್ಲಿ ಹಣ ಸಂಗ್ರಹ ಮಾಡೋದನ್ನು ನಿಲ್ಲಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ರೂ ಪ್ರತಿಭಟನೆಯ ಬಳಿಕ ಎಂದಿನಂತೆ ಹಣ ಸಂಗ್ರಹ ಆರಂಭವಾಗಿತ್ತು. ಜಿಲ್ಲಾಡಳಿತ ಈ ತಿಂಗಳ ಅಂತ್ಯಕ್ಕೆ ಈ ಟೋಲ್ ನ್ನು ತೆರವುಗೊಳಿಸೋದಾಗಿ ಹೇಳಿದ್ದು, ಅದು ಆಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.