ಹಾಸನ: ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರುತ್ತಾರೆ. ಆದರೆ ಎಲ್ಲಾ ರಾಜಕೀಯ ವ್ಯಕ್ತಿಗಳ ಮನೆಯಲ್ಲಿ ನಾಲ್ಕೈದು ಜನ ರಾಜಕೀಯದಲ್ಲಿ ಇದ್ದಾರೆ ಎಂದು ಸೂರಜ್ ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಇಂದು ಎರಡನೇ ಬಾರಿಗೆ ಎಂಎಲ್‍ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ತಮ್ಮ ಸ್ಪರ್ಧೆ ಬಗ್ಗೆ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಿಂದ ಕನಕಪುರದವರೆಗೂ ಒಂದೊಂದು ಕುಟುಂಬದಲ್ಲಿ ಎಷ್ಟೆಷ್ಟು ಜನ ರಾಜಕಾರಣದಲ್ಲಿದ್ದಾರೆ ಎಂದು ಲೆಕ್ಕ ಹಾಕಿ. ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕುಟುಂಬ ರಾಜಕಾರಣ ಇದ್ದಿದ್ದೇ. ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ನಮ್ಮ ತಾತ ಅವರು ಧೃಡವಾದ ನಿರ್ಧಾರ ತಗೊಂಡು ನನ್ನ ಅಭ್ಯರ್ಥಿ ಮಾಡಿದ್ದಾರೆ. ಸುಮಾರು ಐವತ್ತು ವರ್ಷಗಳಿಂದ ನಮ್ಮ ಕುಟುಂಬ ರಾಜ್ಯ, ಜಿಲ್ಲೆಯಲ್ಲಿ ಕಳಕಳಿಯಿಂದ ಕೆಲಸ ಮಾಡಿಕೊಂಡು ಬರುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಲು ನನಗೂ ಅವಕಾಶ ಕೊಡಿ. ನಾನು ಅನಿರೀಕ್ಷಿತವಾಗಿ ಅಭ್ಯರ್ಥಿಯಾಗಿದ್ದೇನೆ. ನಾನು ಅಭ್ಯರ್ಥಿಯಾಗುವ ಅಪೇಕ್ಷೆ ಇರಲಿಲ್ಲ. ಐದಾರು ವರ್ಷದಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಎಲ್ಲೆಡೆ ಮಳೆಯಾಗಿ ಅಪಾರ ನಷ್ಟವಾಗಿದೆ. ಅದರ ಬಗ್ಗೆ ಮಾತನಾಡಲು ಒಬ್ಬರು ಬೇಕು. ಅದು ಮೇಲ್ಮನೆಯಾಗಲಿ, ಕೆಳಮನೆಯಾಗಲಿ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ.