ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(PMLA) ಅಡಿ ಆರೋಪಿಗಳ ಬಂಧನ, ಶೋಧ ನಡೆಸುವುದು, ಆಸ್ತಿ ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಇತ್ಯಾದಿ ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(ಇಡಿ) ವಿರುದ್ಧ ಎತ್ತಿದ್ದ ಎಲ್ಲ ಆಕ್ಷೇಪಣೆಗಳನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ಪಿಎಂಎಲ್‌ಎ ಕಾಯ್ದೆಯ ಹಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ. ಎ.ಎಂ ಖಾನ್ವಿಲ್ಕರ್, ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಸಿ.ಟಿ. ರವಿಕುಮಾರ್ ಅವರಿದ್ಧ ತ್ರಿಸದಸ್ಯ ಪೀಠ ಇಂದು ಆಕ್ಷೇಪ ವ್ಯಕ್ತವಾದ ಇಡಿಯ ಎಲ್ಲಾ ನಿಬಂಧನೆಗಳನ್ನು ಎತ್ತಿ ಹಿಡಿದಿದೆ. ಈ ಮಹತ್ವದ ತೀರ್ಪಿನಿಂದ ಇಡಿಗೆ ಮತ್ತಷ್ಟು ಬಲ ಬಂದಿದೆ.
Advertisement
Advertisement
ಇಡಿ ಅಧಿಕಾರಿಕಾರಿಗಳು ಪೊಲೀಸ್ ಅಧಿಕಾರಿಗಳು ಅಲ್ಲ. ಹೀಗಾಗಿ ಸೆಕ್ಷನ್ 50ರ ಅಡಿ ಹೇಳಿಕೆ ನೀಡುವುದು ಸಂವಿಧಾನದ ಪರಿಚ್ಚೇದ 20(3) ಅಡಿ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ. ಸಂವಿಧಾನದ ಪರಿಚ್ಚೇದ 20(3) ಅಡಿ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಅಪರಾಧಿಗೆ ತನ್ನ ವಿರುದ್ಧ ತಾನೇ ಸಾಕ್ಷಿ ಹೇಳುವಂತೆ ಒತ್ತಾಯ ಮಾಡುವಂತಿಲ್ಲ.
Advertisement
ಇಸಿಐಆರ್(ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ರ್ಫಾಮೆಷನ್ ರಿಪೋರ್ಟ್) ಅನ್ನು ಎಫ್‌ಐಆರ್(ಫಸ್ಟ್ ಇನ್‌ರ್ಫಾಮೆಷನ್ ರಿಪೋರ್ಟ್) ಜೊತೆ ಸಮೀಕರಿಸಲು ಸಾಧ್ಯವಿಲ್ಲ. ಇದೊಂದು ಇಡಿಯ ಆಂತರಿಕ ದಾಖಲೆಯಾಗಿದೆ. ಎಫ್‌ಐಆರ್‌ಗೆ ಇರುವ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ನಿಯಮಗಳು ಇಸಿಐಆರ್ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
Advertisement
ಅರೆಸ್ಟ್ ಮಾಡುವ ವೇಳೆ ಇಸಿಐಆರ್ ತೋರಿಸುವುದು ಕಡ್ಡಾಯವಲ್ಲ ಎಂದಿರುವ ಕೋರ್ಟ್ ಸರ್ಕಾರ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಪಿಎಂಎಲ್‌ಎ ತಿದ್ದುಪಡಿಗೆ ಸಂಬಂಧಿಸಿದಂತೆ 2019ರಲ್ಲಿ ಹಣಕಾಸು ಕಾಯ್ದೆಯ ಅಡಿ ತಿದ್ದುಪಡಿ ತರಬಹುದೇ ಎಂಬುದರ ಬಗ್ಗೆ ಎದ್ದ ಪ್ರಶ್ನೆಗಳನ್ನು 7 ಮಂದಿ ಜಡ್ಜ್‌ಗಳ ಪೀಠದಲ್ಲಿ ವಿಚಾರಣೆ ನಡೆಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ
ಅರ್ಜಿದಾರರ ವಾದ ಏನಿತ್ತು?
ದಾಖಲೆಗಳು ಇಲ್ಲದೇ ಊಹೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವ ಅಧಿಕಾರ ಅಸಾಂವಿಧಾನಿಕ. ವಿಚಾರಣೆಯ ಸಮಯದಲ್ಲಿ ಆರೋಪಿಯಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದು, ಜಾಮೀನು ನೀಡುವುದು, ಆಸ್ತಿ ವಶಪಡಿಸಿಕೊಳ್ಳುವುದು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ವ್ಯಾಪ್ತಿಯಿಂದ ಹೊರಗಿದೆ. ಆದರೆ ಇಡಿ ಪೊಲೀಸ್ ವಿಚಾರಣೆ ರೀತಿ ತನಿಖೆ ನಡೆಸುತ್ತಿದೆ.
ತನಿಖೆ ಪ್ರಾರಂಭಿಸುವುದು, ಸಾಕ್ಷಿಗಳು ಅಥವಾ ಆರೋಪಿಗಳನ್ನು ವಿಚಾರಣೆಗೆ ಕರೆಸುವುದು, ಹೇಳಿಕೆಗಳನ್ನು ದಾಖಲಿಸುವುದು, ಆಸ್ತಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಮನವಿ ಮಾಡಿದ್ದರು.