ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಹೆಸರಾಗಿದ್ದ ಜಂತರ್-ಮಂತರ್ ನಲ್ಲಿ ಯಾವುದೇ ಪ್ರತಿಭಟನೆಯನ್ನು ನಡೆಸದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ) ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ಆದೇಶ ಪ್ರಕಟಿಸಿದೆ.
ಜಂತರ್-ಮಂತರ್ ನಲ್ಲಿ ಪ್ರತಿಭಟನೆಗೆ ತಡೆ ಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರಿದ್ದ ದ್ವಿಸದಸ್ಯ ಪೀಠ, ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು ಆಗಿದ್ದು, ಶಾಂತಿಯುತ ಪ್ರತಿಭಟನೆಗೆ ಸಾರ್ವಜನಿಕರಿಗೆ ಅವಕಾಶವಿದೆ. ಜಂತರ್-ಮಂತರ್ ಹಾಗೂ ಬೋಟ್ ಕ್ಲಬ್ ಬಳಿ ನಡೆಯುವ ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲವೆಂದು ಪೀಠ ತಿಳಿಸಿದೆ.
Advertisement
ಯಾವುದೇ ಕಾರಣಕ್ಕೂ ಪ್ರತಿಭಟನೆಗಳನ್ನು ನಿರ್ಬಂಧಿಸುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಅಭಿಪ್ರಾಯಟ್ಟಿರುವ ಕೋರ್ಟ್ ಈ ಪ್ರದೇಶಗಳಲ್ಲಿ ಧರಣಿ ನಡೆಸುವ ಸಂಬಂಧ ಮಾರ್ಗಸೂಚಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
Advertisement
ಏನಿದು ಪ್ರಕರಣ?
ಶಾಂತಿ ಮತ್ತು ಆರೋಗ್ಯ ಪೂರ್ಣ ವಾತಾವರಣದಲ್ಲಿ ಜೀವಿಸಬೇಕು. ಆದರೆ ಜಂತರ್-ಮಂತರ್ ಗಳಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಬಳಸುವ ಧ್ವನಿವರ್ಧಕಗಳಿಂದ ನಿದ್ದೆ ಮಾಡುವ ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಈ ಸ್ಥಳದಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಭಟನೆಗಳನ್ನು ನಿಷೇಧಿಸಬೇಕು ಎಂದು ವರುಣ್ ಸೇಠ್ ಎಂಬವರು ಎನ್‍ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಎನ್‍ಜಿಟಿ 2017ರ ಅಕ್ಟೋಬರ್ ನಲ್ಲಿ ಶಬ್ದ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿತ್ತು.
Advertisement
ಪ್ರತಿಭಟನೆಗಳಿಗೆ ರಾಮಲೀಲಾ ಮೈದಾನ ಅಥಾನ ಅಜ್ಮೀರಿ ಗೇಟ್ ಪರ್ಯಾಯ ಜಾಗ ಕಲ್ಪಿಸುವಂತೆ ದೆಹಲಿ ಸರ್ಕಾರ ಮತ್ತು ಪಾಲಿಕೆಗೆ ಸೂಚಿಸಿತ್ತು. ಈ ಆದೇಶ ಪ್ರಕಟವಾದ ಕ್ಷಣದಿಂದಲೇ ಈ ಸ್ಥಳದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಯಾವುದೇ ಪ್ರತಿಭಟನೆ, ಧರಣಿ, ಜನರನ್ನು ಉದ್ದೇಶಿಸಿ ಯಾರು ಮಾತನಾಡಕೂಡದು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.