ನವದೆಹಲಿ: ಪತ್ನಿಗೆ ವಿಚ್ಛೇದನ ನೀಡುವ ಪತಿ ತನ್ನ ಸಂಬಳದಲ್ಲಿ ಶೇಕಡಾ 25ರಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ನೀಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಚ್ಛೇದಿತ ಮಹಿಳೆ ಘನತೆಯಿಂದ ಬದುಕಲು ಸಾಕಾಗುಷ್ಟು ಹಣವನ್ನು ಆಕೆಯ ಜೀವನ ನಿರ್ವಹಣೆಗೆ ಅಥವಾ ಶಾಶ್ವತ ಜೀವನಾಂಶವಾಗಿ ನೀಡಬೇಕೆಂದು ಕೋರ್ಟ್ ಹೇಳಿದೆ. ಪತಿಯ ಸಂಬಂಳದ ಶೇ. 25ರಷ್ಟು ಹಣವನ್ನು ಜೀವನಾಂಶವಾಗಿ ನೀಡುವುದು ಉತ್ತಮ ಎಂದಿದೆ.
Advertisement
2003ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದ ಪಶ್ಚಿಮ ಬಂಗಾಳದ ಹೂಗ್ಲಿಯ ಕಲ್ಯಾಣ್ ದೇ ಚೌಧರಿ ಅವರ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಪರಮೋಚ್ಛ ನ್ಯಾಯಾಲಯ ಈ ಆದೇಶ ನೀಡಿದೆ. ಸದ್ಯ 95 ಸಾವಿರ ರೂಪಾಯಿ ಸಂಬಳ ಪಡೆಯೋ ಕಲ್ಯಾಣ್, ವಿಚ್ಛೇದಿತ ಪತ್ನಿ ರೀಟಾ ಹಾಗೂ ಮಗನಿಗೆ 23 ಸಾವಿರ ರೂಪಾಯಿ ಜೀವನಾಂಶ ಕೊಡಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಆದೇಶ ಮಾಡಿತ್ತು. ಇದರ ವಿರುದ್ಧ ಅವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆ ಕಲ್ಯಾಣ್ ಅವರು ಮತ್ತೊಂದು ಮದುವೆಯಾಗಿದ್ದು, ಹೊಸ ಕುಟುಂಬದ ನಿರ್ವಹಣೆ ಮಾಡಬೇಕಿರುವ ಕಾರಣ 3 ಸಾವಿರ ರೂ. ಕಡಿತಗೊಳಿಸಿ 20 ಸಾವಿರ ರೂ. ಜೀವನಾಂಶ ನೀಡಲು ಆದೇಶಿಸಿದೆ.
Advertisement
ಮೊದಲಿಗೆ ರೀಟಾ ಅವರಿಗೆ 16 ಸಾವಿರ ರೂ. ಜೀವನಾಂಶ ನೀಡಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಹೇಳಿತ್ತು. ಆದ್ರೆ ನಂತರ ಕಲ್ಯಾಣ್ ಅವರ ಸಂಬಳ 60 ಸಾವಿರದಿಂದ 90 ಸಾವಿರಕ್ಕೆ ಏರಿಕೆಯಾಗಿದ್ದ ಕಾರಣ ಜೀವನಾಂಶದ ಮೊತ್ತವನ್ನು 16 ಸಾವಿರ ರೂ. ನಿಂದ 23 ಸಾವಿರ ರೂ.ಗೆ ಏರಿಸಿತ್ತು. ಆದ್ರೆ ಮೊದಲಿದ್ದ 16 ಸಾವಿರ ರೂ. ವನ್ನೇ ನೀಡುವುದಾಗಿ ಕಲ್ಯಾಣ್ ಮನವಿ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.