ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ವಿಧಾನಸಭಾ ಕ್ಷೇತ್ರದಿಂದ 2023ರಲ್ಲಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಸಿದ್ದರಾಮಯ್ಯ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ವರುಣಾ ಕ್ಷೇತ್ರದ ಮತದಾರ ಕೆ. ಶಂಕರ ಅವರು ಸಲ್ಲಿಸಿದ್ದ ಇದೇ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ವಜಾಗೊಳಿಸಿತ್ತು. 2023ರ ರಾಜ್ಯ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ ಐದು ಚುನಾವಣಾ ಭರವಸೆಗಳು ಪ್ರಜಾ ಪ್ರಾತಿನಿಧ್ಯ ಕಾಯಿದೆ ಪ್ರಕಾರ ಲಂಚ ಮತ್ತು ಭ್ರಷ್ಟಾಚಾರ ಎನಿಸಿಕೊಳ್ಳುತ್ತವೆ ಎಂದು ಶಂಕರ್ ದೂರಿದ್ದರು. ಇದನ್ನೂ ಓದಿ: ಉ.ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡಬೇಕಿರೋದು ಕೇಂದ್ರ ಸರ್ಕಾರ: ಡಿಕೆಶಿ
ಸಿದ್ದರಾಮಯ್ಯ ಅವರ ಒಪ್ಪಿಗೆಯೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದರಿಂದ, ಅವರು ಕೂಡ ಭ್ರಷ್ಟಾಚಾರ ನಡೆಸಿದ್ದಾರೆ. ಆದ್ದರಿಂದ ಅರ್ಜಿದಾರರು ಸಿದ್ದರಾಮಯ್ಯ ಅವರ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಮತ್ತು ಆರು ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ವಿಧಿಸಬೇಕು ಎಂದು ಕೋರಿದ್ದರು.
ವಾದವನ್ನು ಏಪ್ರಿಲ್‌ನಲ್ಲಿ ತಿರಸ್ಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ಚುನಾವಣಾ ಭರವಸೆಗಳನ್ನು ಭ್ರಷ್ಟಾಚಾರ ಎನ್ನಲಾಗದು. ಅಲ್ಲದೇ, ಉದಾಸೀನತೆಯಿಂದ ಚುನಾವಣಾ ಅರ್ಜಿ ಸಲ್ಲಿಸಿದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಅರ್ಜಿಯಲ್ಲಿನ ಪ್ಯಾರಾಗಳ ಸಂಖ್ಯೆ ಮತ್ತು ಪರಿಶೀಲನಾ ಅಫಿಡವಿಟ್ ನಡುವೆ ವ್ಯತ್ಯಾಸಗಳಿವೆ. ಜೊತೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಪೀಠ ಹೇಳಿತ್ತು. ಈ ನಿದರ್ಶನಗಳು ಕೇವಲ ವಿವರಣಾತ್ಮಕವಾಗಿವೆ. ಸಮಗ್ರವಾಗಿಲ್ಲ ಮತ್ತು ಚುನಾವಣಾ ಅರ್ಜಿ ಸಲ್ಲಿಸುವಲ್ಲಿ ಉದಾಸೀನತೆ ತೋರಿರುವಂತಿದೆ ಎಂದು ಹೈಕೋರ್ಟ್ ಏಪ್ರಿಲ್ ತಿಂಗಳಿನಲ್ಲಿ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ʻಏನ್ ಸಣ್ಣ ಅಗಿದ್ಯಾ? – ನಾನು ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲʼ

