ನವದೆಹಲಿ: ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಕೈಗೊಂಡಿದ್ದ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅಲ್ಲದೇ ಎಲ್ಲ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳಲ್ಲಿ ಉತ್ತರಿಸುವಂತೆ ಅದು ಹೇಳಿದೆ.
ದೆಹಲಿಯ ಜಹಾಂಗೀರ್‌ಪುರಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಇಂದು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಜಮೀಯತ್ ಉಲೇಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಲ್.ನಾಗೇಶರಾವ್ ನೇತೃತ್ವದ ದ್ವಿ ಸದಸ್ಯ ಪೀಠ NDMC ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಇದನ್ನೂ ಓದಿ: ದೆಹಲಿ ಕಾರ್ಯಾಚರಣೆ ಅಪರಾಧ ಕೃತ್ಯ: ಶಶಿ ತರೂರ್
Advertisement
Advertisement
ಆರಂಭದಲ್ಲಿ ಜಹಾಂಗೀರ್ ಪುರಿ ಪ್ರಕರಣ ಸಂತ್ರಸ್ತರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಪ್ರಕರಣ ಸಾಂವಿಧಾನಿಕ ಮತ್ತು ರಾಷ್ಟ್ರೀಯ ದೂರಗಾಮಿ ಪ್ರಶ್ನೆಗಳನ್ನು ಎತ್ತಿದೆ, ರಾಜ್ಯ ನೀತಿಯ ಸಾಧನವಾಗಿ ಬುಲ್ಡೊಜರ್ಸ್ ಬಳಕೆ ಮಾಡಲಾಗುತ್ತಿದೆ, ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದರು.
Advertisement
ನಿನ್ನೆ ನಾವು 10:30ಕ್ಕೆ ಕೋರ್ಟ್‌ನಲ್ಲಿ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಲಿದ್ದೇವೆ ಎನ್ನುವ ಮಾಹಿತಿ ತಿಳಿದ NDMC, 9 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿತು. ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದ ಬಳಿಕವೂ ಕಾರ್ಯಾಚರಣೆ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು.
Advertisement
ಪೊಲೀಸರು ಮತ್ತು ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡಬೇಕು. ಆದರೆ ಬಿಜೆಪಿ ನಾಯಕರ ಪತ್ರ ಆಧರಿಸಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಕಟ್ಟಡಗಳನ್ನು ಧ್ವಂಸ ಮಾಡುವಂತೆ ಹೇಗೆ ಪತ್ರ ಬರೆಯುತ್ತಾರೆ. ಪತ್ರದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಗೊಂಡಿದೆ. ತೆರವು ಕಾರ್ಯಚರಣೆಗೂ ಮುನ್ನ ನೋಟಿಸ್ ನೀಡಬೇಕು. ಅದರ ಮೇಲೆ ಮೇಲ್ಮನವಿಗಳನ್ನು ಸ್ವೀಕರಿಸಬೇಕು. ಆದರೆ ಇಲ್ಲಿ ಯಾವುದೇ ನಿಯಮಗಳ ಪಾಲನೆಯಾಗಿಲ್ಲ ಎಂದರು. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ
50 ಲಕ್ಷ ಜನರನ್ನು ಹೊಂದಿರುವ 731 ಅನಧಿಕೃತ ಕಾಲೋನಿಗಳು ದೆಹಲಿಯಲ್ಲಿವೆ. ಎಲ್ಲವನ್ನು ಬಿಟ್ಟು ಒಂದು ಪ್ರದೇಶದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದು ಎಷ್ಟು ಸರಿ? ಅಲ್ಲಿರುವ ಜನರು ಕಳೆದ 50 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲ ನಡೆಯಲು ಬಿಡುವುದು ಹೇಗೆ? ಮೊದಲು ದಾಖಲೆಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಬೇಕು. ನಂತರ ಸಂಬಂಧಿಸಿದ ವ್ಯಕ್ತಿಗೆ ಅವಕಾಶ ನೀಡಬೇಕು. ಬಳಿಕ ತೆರವು ಕಾರ್ಯಾಚರಣೆ ನಡೆಯಬೇಕು. ಆದರೆ ಜಹಾಂಗೀರ್‌ಪುರಿಯಲ್ಲಿ ಬಡವರ ಮೇಲೆ ಯಾಕೆ ಪ್ರಹಾರ ನಡೆಯುತ್ತಿದೆ ಎಂದು ಆರೋಪಿಸಿದರು.
NDMC ಅತಿಕ್ರಮಣ ತೆರವು ಮಾಡುವುದಾದರೆ ಸೈನಿಕ ಫಾರ್ಮ್, ಗಾಲ್ಪ್ ಲಿಂಕ್‌ಗಳು ಒಂದಲ್ಲ ಒಂದು ಪ್ರದೇಶದಲ್ಲಿ ಅತಿಕ್ರಮಣ ಮಾಡಿಕೊಂಡಿವೆ. ಆದರೆ ಅದನ್ನು ಅಧಿಕಾರಿಗಳು ಮುಟ್ಟುವುದಿಲ್ಲ, ಬಿಜೆಪಿ ನಾಯಕರ ಪತ್ರಕ್ಕೆ ಬದ್ಧವಾಗಿ ಅಧಿಕಾರಿಗಳು ಕೆಲಸ ಮಾಡುವುದು ಖೇದಕರ ಸಂಗತಿ ಎಂದು ವಾದಿಸಿದರು.
ಬಳಿಕ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಪ್ರಸ್ತಾಪಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಅತಿಕ್ರಮಣ ಎನ್ನುವುದು ಇಡೀ ದೇಶದಲ್ಲಿರುವ ಸಮಸ್ಯೆ. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಂದೇ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕೋಮು ಘರ್ಷಣೆಗಳು ನಡೆದಾಗ ಒಂದೇ ಸಮುದಾಯದ ಆಸ್ತಿ ಮೇಲೆ ಬುಲ್ಡೋಜರ್‌ಗಳ ದಾಳಿ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ಮುಸ್ಲಿಮರು ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಚಿವರೊಬ್ಬರು ಹೇಳುತ್ತಾರೆ. ಅವರಿಗೆ ಆ ಶಕ್ತಿಯನ್ನು ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಮಿತ್ ಶಾ ಮನೆ ಕೆಡವಲು ಬುಲ್ಡೋಜರ್ ಬಳಸಿ: ರಾಘವ್ ಛಡ್ಡಾ
ಇದೇ ವೇಳೆ ದೇಶಾದ್ಯಾಂತ ನಡೆಯುತ್ತಿರುವ ತೆರವು ಕಾರ್ಯಾಚರಣೆಗೆ ತಡೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಇಡೀ ದೇಶದಲ್ಲಿ ತೆರವು ಕಾರ್ಯಾಚರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದಿತು. ಬಳಿಕ ಸ್ಪಷ್ಟನೆ ನೀಡಿದ ಸಿಬಲ್, ಸಮುದಾಯವನ್ನು ಟಾರ್ಗೆಟ್ ಮಾಡುವ ಸೀಮಿತ ಕಾರ್ಯಾಚರಣೆಗಳು ನಿಲ್ಲಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸುಪ್ರೀಂ ಕೋರ್ಟ್ ಪರಿಶೀಲಿಸುವುದಾಗಿ ಹೇಳಿತು.
ಈ ನಡುವೆ ಜ್ಯೂಸ್ ಅಂಗಡಿ ಮಾಲೀಕರೊಬ್ಬರನ್ನು ಪ್ರತಿನಿಧಿಸಿದ ವಕೀಲ ಸಂಜಯ್ ಹೆಗಡೆ, ನನ್ನ ಜ್ಯೂಸ್ ಅಂಗಡಿಯನ್ನು ತೆರವು ಮಾಡಲಾಗಿದೆ. ಅಂಗಡಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಆಸ್ತಿ ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದರು.
ಬಳಿಕ NDMC ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒತ್ತುವರಿ ಕಾರ್ಯಾಚರಣೆ ನಿನ್ನೆಯಿಂದ ಆರಂಭವಾಗಿಲ್ಲ. ಜನವರಿ 19 ರಿಂದ ಆರಂಭವಾಗಿ ಫೆಬ್ರವರಿ, ಮಾರ್ಚ್‌ನಲ್ಲೂ ನಡೆದಿದೆ. ಅಕ್ರಮ ಕಟ್ಟಡಗಳಿಗೆ ಹಿಂದೆಯೇ ನೋಟಿಸ್ ನೀಡಿದೆ. ನೋಟಿಸ್ ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದು ಹೈಕೋರ್ಟ್ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ
ದಾಖಲೆಗಳು ಇರುವುದಾದರೆ ನಾವು ನೋಟಿಸ್ ನೀಡಿದಾಗ ಯಾಕೆ ತೋರಿಸಲಿಲ್ಲ? ಖಾರ್ಗೋನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 88 ಹಿಂದೂಗಳು ಮತ್ತು 26 ಮುಸ್ಲಿಮರ ಕಟ್ಟಡಗಳಿದ್ದವು. ಕೋರ್ಟ್ ಇದನ್ನು ಪರಿಗಣಿಸಬೇಕು. ಅಲ್ಲದೇ ಟೇಬಲ್ ಕುರ್ಚಿ ತೆರವು ಮಾಡಲು ನೋಟಿಸ್ ಅಗತ್ಯ ಇಲ್ಲ ಎಂದು ವಾದಿಸಿದರು.
ಇದಕ್ಕೆ ಮರು ಪ್ರಶ್ನೆ ಹಾಕಿದ ಪೀಠ, ನೀವು ಟೇಬಲ್ ಕುರ್ಚಿಯನ್ನು ಮಾತ್ರ ತೆರವು ಮಾಡಿದ್ದೀರಾ? ಅದಕ್ಕೆ ಜೆಸಿಬಿ ಬಳಕೆ ಮಾಡಿದ್ದೀರಾ? ನಮ್ಮ ಬಳಿ ವಿಡಿಯೋಗಳಿವೆ. ನಾವು ಆದೇಶ ನೀಡಿದ ಬಳಿಕವೂ ಮೇಯರ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅರ್ಜಿದಾರರಿಗೂ ನೋಟಿಸ್ ಜಾರಿ ಮಾಡುತ್ತಿದ್ದು ದಾಖಲೆಗಳನ್ನು ಒದಗಿಸಲು ಎರಡು ವಾರ ಸಮಯ ನೀಡಲಾಗುತ್ತಿದೆ ಎಂದು ಪೀಠ ಹೇಳಿತು. ಮುಂದಿನ ಆದೇಶವರೆಗೂ ಬುಲ್ಡೋಜರ್ ಕಾರ್ಯಾಚರಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಆದೇಶಸಿತು.