ನವದೆಹಲಿ: ಇಲ್ಲಿನ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಪಾಲಿಕೆ ನಡೆಸಿದ ಕಾರ್ಯಾಚರಣೆಯು ಅಪರಾಧ ಕೃತ್ಯವಾಗಿದೆ. ಸಂಬಂಧಪಟ್ಟವರಿಗೆ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಒತ್ತಾಯಿಸಿದ್ದಾರೆ.
ತೆರವು ಕಾರ್ಯಾಚರಣೆಯು ಕಾನೂನುಬಾಹಿರ, ಅಸಾಂವಿಧಾನಿಕ. ಬೆದರಿಕೆಯ ಹೊಸ ತಂತ್ರವಾಗಿದೆ. ಇಂತಹ ಘಟನೆಗಳು ದೇಶದ ಘನತೆಯನ್ನು ಕುಗ್ಗಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ
ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರವೂ ಸುಮಾರು 4 ಗಂಟೆಗಳ ಕಾಲ ಬುಲ್ಡೋಜರ್ ಕಾರ್ಯನಿರ್ವಹಿಸಿವೆ. ಇದು ಕಾನೂನುಬಾಹಿರ. ವಿಶ್ವದಲ್ಲಿ ಭಾರತದ ಘನತೆ ಕುಸಿಯುತ್ತಿದೆ. ವಿದೇಶದಲ್ಲಿರುವ ನನ್ನ ಸ್ನೇಹಿತರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಮತ್ತು ಇಸ್ಲಾಮೋಫೋಬಿಯಾ (ಇಸ್ಲಾಂ ಬಗ್ಗೆ ಭಯ ಹುಟ್ಟಿಸುವುದು) ನಡೆಯುತ್ತಿದೆ. ಈ ಎಲ್ಲಾ ದುರವಸ್ಥೆಗೆ ಬಿಜೆಪಿ ನೇರ ಹೊಣೆ ಎಂದು ತಿಳಿಸಿದ್ದಾರೆ.
ಮನೆಗಳು, ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ನಿಜಕ್ಕೂ ಇದೊಂದು ಅಪರಾಧ ಕೃತ್ಯ. ಭಾರತ ಸಂವಿಧಾನದ ಮೌಲ್ಯಗಳಿಗೆ ನೀಡಿದ ಪೆಟ್ಟು ಇದು. ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ
ಕಾರ್ಯಾಚರಣೆ ಬಗ್ಗೆ ಸೂಕ್ತ ತನಿಖೆ ಮಾಡಿ, ಯಾರು ಹೊಣೆಗಾರರೆಂದು ಪತ್ತೆ ಮಾಡಿ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರಿಗೆ ನೋಟಿಸ್ ನೀಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ಅತ್ಯಂತ ಅಮಾನವೀಯ ಸಾರ್ವಜನಿಕ ಶಿಕ್ಷೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಉತ್ತರ ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಟ್ಟಲು ಆಯ್ಕೆಯಾಗಿ ಬಂದಿರುವ ಸರ್ಕಾರ ತಾನೇ ನಾಶ ಮಾಡುತ್ತಿದೆ. ಸರ್ಕಾರದ ಕೆಲಸವು ರಾಷ್ಟ್ರವನ್ನು ಕಟ್ಟುವುದು, ಅದನ್ನು ಕೆಡವುದಲ್ಲ. ಈ ನಾಚಿಕೆಗೇಡಿನ ನಡವಳಿಕೆಯಿಂದ ಈ ಸರ್ಕಾರವು ನಾಗರಿಕರ ನಂಬಿಕೆಯನ್ನೇ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ.