36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ
ನವದೆಹಲಿ/ಕೋಲ್ಕತ್ತಾ: ವೈದ್ಯರನ್ನು 36 ಗಂಟೆಗಳ ಕಾಲ ನಿರಂತರವಾಗಿ ದುಡಿಸಿಕೊಳ್ಳುವುದು ಅಮಾನವೀಯ ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ ಹೇಳಿದೆ.
ಕೋಲ್ಕತ್ತಾ ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣದ ವಿಚಾರನೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ (DYChandrachud) ನೇತೃತ್ವದ ತ್ರಿಸದಸ್ಯ ಪೀಠ ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ಕಳವಳ ವ್ಯಕ್ತಪಡಿಸಿತು. ಅಲ್ಲದೇ ಈ ಬಗ್ಗೆ ಕ್ರಮ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.
ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಕೆಲ ವೈದ್ಯರು 36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ. ನೇಮಕಗೊಂಡ 10 ಮಂದಿ ಸದಸ್ಯರ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ವೈದ್ಯರ (Kolkata Doctor) ಕರ್ತವ್ಯದ ಸಮಯವನ್ನು ಸುವ್ಯವಸ್ಥಿತಗೊಳಿಸಲು ಪರಿಶೀಲಿಸಬೇಕು ಪೀಠ ತಾಕೀತು ಮಾಡಿದೆ. ಇದನ್ನೂ ಓದಿ: ಧರ್ಮಗುರುಗಳ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ತಡೆ – ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ
ಅಲ್ಲದೇ ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಕೋಲ್ಕತ್ತಾ ಪೊಲೀಸರ ತನಿಖೆಯಲ್ಲಿನ ವಿಳಂಬ ಮತ್ತು ಸ್ಪಷ್ಟ ಅಕ್ರಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿರುವುದು ಅತ್ಯಂತ ಗೊಂದಲದ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮೋದಿಗೆ ದೀದಿ ಪತ್ರ:
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಗುರುವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ. ಈ ಪತ್ರದ ಪ್ರತಿಯನ್ನು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಈ ದಿನ ನಾನು ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ದಿನೇ ದಿನೇ ದೇಶಾದ್ಯಂತ ಹೆಚ್ಚಾಗುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದರೆ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಮಾತ್ರ ಸಾಧ್ಯ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು:
ಕೋಲ್ಕತ್ತಾ ಆರ್.ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಅತ್ಯಾಚಾರ- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ನಾಲ್ವರು ವೈದ್ಯರ ಮೇಲೆ ಪಾಲಿಗ್ರಾಫ್ ಪರೀಕ್ಷೆ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ಸುಪ್ರೀಂ ಕೋರ್ಟ್ ಸಿಬಿಐಗೆ ಅನುಮತಿ ನೀಡಿದೆ. ಏತನ್ಮಧ್ಯೆ ಪ್ರಕರಣವನ್ನು ತಿರುಚಲು ಮತ್ತು ಮುಚ್ಚಿಹಾಕಲು ಕೋಲ್ಕತ್ತಾ ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ಸಿಬಿಐ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: Kolkata Horror | ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳಿ – ವೈದ್ಯರಿಗೆ ಸುಪ್ರೀಂ ಸೂಚನೆ!
ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸಿಬಿಐ ಅನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಂದ ಮಾಹಿತಿ ಪಡೆಯಿತು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಮಾಜಿ ಪ್ರಾಂಶುಪಾಲ ಮತ್ತು ಇತರ ನಾಲ್ವರು ವೈದ್ಯರನ್ನು ಸಿಬಿಐ ಬಂಧಿಸಿ ಕಳೆದ ಒಂದು ವಾರದಿಂದ ವಿಚಾರಣೆ ನಡೆಸುತ್ತಿದೆ. ಆದರೆ ಅವರಿಂದ ಸರಿಯಾದ ಉತ್ತರ ಸಿಗದಿರುವ ಹಿನ್ನೆಲೆಯಲ್ಲಿ ಪಾಲಿಗ್ರಾಫ್ ಟೆಸ್ಟ್ ನಡೆಸಲು ಸುಪ್ರೀಂ ಕೋರ್ಟಿನ ಅನುಮತಿ ಕೋರಿದ್ದು ಕೋರ್ಟ್ ಅಸ್ತು ಎಂದಿದೆ.