ಬೆಂಗಳೂರು: ಸುಪ್ರೀಂ ಕೋರ್ಟಿನಲ್ಲಿ ಇಂದು ಫೈನಲ್ ಬ್ಯಾಟಲ್ ನಡೆಯಲಿದೆ. ಸೋಮವಾರ ಕೂದಳೆಯ ಅಂತರದಲ್ಲಿ ಬದುಕುಳಿದ ದೋಸ್ತಿಗಳಿಗೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ.
ಶೀಘ್ರ ಬಹುಮತ ಸಾಬೀತಿಗೆ ಕೋರಿ ಪಕ್ಷೇತರ ಶಾಸಕರಾದ ಆರ್. ಶಂಕರ್, ನಾಗೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಇಂದೇ ಮಧ್ಯಂತರ ಆದೇಶ ನೀಡುವ ಸಾಧ್ಯತೆ ಇದೆ. ವಿಚಾರಣೆ ನೆಪ ಹೇಳಿ ಕಾಲದೂಡುವ ದೋಸ್ತಿಗಳಿಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕುತ್ತಾ? ಇಲ್ಲ ದೋಸ್ತಿ ಸರ್ಕಾರಕ್ಕೆ ಜೀವಧಾನ ನೀಡುತ್ತಾ ನೋಡಬೇಕಾಗಿದೆ.
Advertisement
Advertisement
ಸುಪ್ರೀಂ ಕೋರ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯುವುದು ಬಹುತೇಕ ಅನುಮಾನವಾಗಿದೆ. ಯಾಕೆಂದರೆ ಸೂಪರ್ ಪ್ಲಾನ್ ಮಾಡಿರುವ ದೋಸ್ತಿ ನಾಯಕರ ವಕೀಲರು ಸೈಲೆಂಟ್ ಆಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರು ತುರ್ತು ವಿಚಾರಣೆ ಮನವಿ ಮಾಡಿಲ್ಲ. ಹೀಗಾಗಿ ಇಂದಿನ ಸುಪ್ರೀಂ ಕಲಾಪದ ಪಟ್ಟಿಯಲ್ಲಿ ಮೈತ್ರಿ ನಾಯಕರ ಅರ್ಜಿ ಇಲ್ಲ. ಪಟ್ಟಿಯಲ್ಲಿರದ ಕೇಸ್‍ಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಲ್ಲ. ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿ, ತುರ್ತು ವಿಚಾರಣೆಗೆ ಮನವಿ ಮಾಡದೆ ಕಾಲದೂಡುವ ಪ್ಲಾನ್ ಮೈತ್ರಿ ಸರ್ಕಾರ ಹಾಕಿದ್ಯಾ ಎನ್ನುವ ಅನುಮಾನ ಎದ್ದಿದೆ.
Advertisement
Advertisement
ಸುಪ್ರೀಂಕೋರ್ಟಿನಲ್ಲಿ ಏನಾಗಬಹುದು?
ಮೊದಲಿಗೆ ಆರ್.ಶಂಕರ್ ಅರ್ಜಿ ವಿಚಾರಣೆ ತೆಗೆದುಕೊಳ್ಳಬಹುದು. ತಮ್ಮ ವಿವೇಚನಾ ಅಧಿಕಾರ ಬಳಸಿ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಬಹುದು ಅಥವಾ ಮೂರು ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಬಹುದು. ಇಲ್ಲ ಕೇವಲ ಆರ್.ಶಂಕರ್ ಅರ್ಜಿಯೊಂದಕ್ಕೆ ಸೀಮಿತವಾಗಿ ವಿಚಾರಣೆ ನಡೆಸಬಹುದು. ಜೊತೆಗೆ ವಿಶ್ವಾಸ ಮತಯಾಚನೆಗಿರುವ ಗೊಂದಲಗಳ ಸಂಬಂಧ ವಿಚಾರಣೆ ಮಾಡಬಹುದು. ವಿಶ್ವಾಸಮತ ಸಾಬೀತಿಗೆ ತಡವಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟನೆ ಕೇಳಬಹುದು.
ದೋಸ್ತಿ ಅರ್ಜಿ ವಿಚಾರಣೆಗೆ ಬಂದರೆ ಏನಾಗಬಹುದು?
ಸೆಡ್ಯೂಲ್ 10ರ ಪ್ರಕಾರ ರಾಜಕೀಯ ಪಕ್ಷಗಳಿಗಿರುವ ವಿಪ್ ನೀಡುವ ಅಧಿಕಾರದ ಬಗ್ಗೆ ಸುಪ್ರೀಂ ಪರಿಶೀಲನೆ ಮಾಡಬಹದು. ಈ ಮೂಲಕ ಶಾಸಕರ ಮೇಲೆ ಒತ್ತಡ, ವಿಪ್ ಅನ್ವಯದ ನಡುವಿನ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವ್ಯಾಪ್ತಿಗೆ ವಿಪ್ ಒಳಪಡುವ, ಪಡದಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ವಿಧಾನಸಭೆ ಕಲಾಪ ವೇಳೆ ಗವರ್ನರ್, ಸಿಎಂ ಮತ್ತು ಸ್ಪೀಕರ್‍ಗೆ ನಿರ್ದೇಶನ ನೀಡುವ ಅಧಿಕಾರದ ಬಗ್ಗೆ ಚರ್ಚೆ ಸುಪ್ರೀಂ ಚರ್ಚೆ ಮಾಡಬಹುದು. ಜೊತೆಗೆ ವಿಧಾನಸಭೆ ಕಲಾಪ ಮತ್ತು ರಾಜ್ಯಪಾಲರ ಹಕ್ಕುಗಳ ಬಗ್ಗೆ ವಿಸ್ತೃತ ವಿಚಾರಣೆ ನಡೆಸಬಹುದು.
ಪಕ್ಷೇತರ ಶಾಸಕರ ಅರ್ಜಿಯಲ್ಲಿ ಏನಿದೆ?
ಇಬ್ಬರು ಪಕ್ಷೇತರು ಸೇರಿ ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿದ್ದೇವೆ. ಆದ್ದರಿಂದ ಹಾಲಿ ಸರ್ಕಾರಕ್ಕೆ ಬಹುಮತ ಇಲ್ಲ, ಹೀಗಾಗಿ ವಿಶ್ವಾಸಮತಯಾಚನೆಗೆ ಸೂಚನೆ ನೀಡಿ. ಇಂದೇ ಬಹುಮತ ಸಾಬೀತಿಗೆ ಸೂಚನೆ ನೀಡಿ. ಬಹುಮತ ಸಾಬೀತು ಪಡಿಸುವುದನ್ನು ಸುದೀರ್ಘ ಪ್ರಕ್ರಿಯೆಯನ್ನಾಗಿ ಮಾಡಲಾಗುತ್ತಿದೆ. ಜೊತೆಗೆ ವಿಪ್ ಸೇರಿ ಬೇರೆ ಬೇರೆ ಕಾರಣಗಳನ್ನು ನೀಡಿ ವಿಶ್ವಾಸಮತ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ರಾಜ್ಯಪಾಲರು ವಿಶ್ವಾಸಮತಯಾಚನೆಗೆ ಡೆಡ್‍ಲೈನ್ ಸೂಚಿಸಿದರು ಸರ್ಕಾರ ಅದನ್ನು ಪಾಲಿಸಿಲ್ಲ. ಸುಪ್ರೀಂಕೋರ್ಟ್ ನೆಪ ಇಟ್ಟುಕೊಂಡು ಕಾಲಹರಣ ಮಾಡಲು ಯತ್ನ ನಡೆದಿದೆ. ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅತೃಪ್ತ ಶಾಸಕರು ಅರ್ಜಿಯಲ್ಲಿ ಸೂಚಿಸಿದ್ದಾರೆ.
ಅಷ್ಟೇ ಅಲ್ಲದೇ ಬಿಜೆಪಿ ಸರ್ಕಾರ ರಚನೆ ವೇಳೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿತ್ತು. 15 ದಿನ ಅವಕಾಶ ನೀಡಿದ್ದ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿ ಬಹುಮತ ಸಾಬೀತಿಗೆ ಸುಪ್ರೀಂ ಸೂಚಿಸಿತ್ತು. ಅದೇ ರೀತಿ ಮಧ್ಯಂತರ ಆದೇಶವನ್ನು ಈ ಪ್ರಕರಣದಲ್ಲಿ ನೀಡಬೇಕು. ಹೊಸದಾಗಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದರು ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರ ಹಿಂದೆ ಶಾಸಕರನ್ನು ಅನರ್ಹತೆ ಮಾಡುವ ತಂತ್ರವೂ ಇದೆ. ಪಕ್ಷೇತರ ಶಾಸಕರಾದ ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಆದಷ್ಟು ಬೇಗ ವಿಶ್ವಾಸ ಮತಯಾಚನೆಗೆ ಮಾಡುವಂತೆ ಆದೇಶ ನೀಡಿ ಎಂದು ಶಾಸಕರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.