ನವದೆಹಲಿ: ಹಿಜಬ್ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ. ಮಾತ್ರವಲ್ಲದೆ ದೇಶದಲ್ಲೂ ಈ ವಿಷಯ ಸದ್ದು ಮಾಡಿತ್ತು. ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ನ್ಯಾ ಹೇಮಂತ್ ಗುಪ್ತಾ ನೇತೃತ್ವದ ಪೀಠ ವಿಚಾರಣೆ ನಡೆಸಿತು.
Advertisement
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲ ರಾಜೀವ್ ದವನ್, ಹಿಜಬ್ ನಿಷೇಧ ಮಾಡಿರುವ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಿದೆ. ಅವರ ಶಿಕ್ಷಣದ ಹಕ್ಕು ಕಸಿದುಕೊಂಡಂತೆ ಆಗಿದೆ. ಹಿಜಬ್ ಗೆ ಸಂಬಂಧಿಸಿ ಕೇರಳ ಮತ್ತು ಕರ್ನಾಟಕ ವಿಭಿನ್ನ ತೀರ್ಪುಗಳನ್ನು ನೀಡಿವೆ, ಒಂದು ಪರವಾಗಿದ್ದರೆ ಮತ್ತೊಂದು ವಿರುದ್ಧವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿರುವ ನಿಲುವು ಅತ್ಯಂತ ಮಹತ್ವದ್ದೆನಿಸಿಕೊಳ್ಳಲಿದೆ ಎಂದರು.
Advertisement
Advertisement
ಇದಕ್ಕೆ ಹೆಚ್ಚುವರಿಯಾಗಿ ವಾದ ಮಂಡಿಸಿದ ವಕೀಲ ಸಂಜಯ್ ಹೆಗಡೆ, ಹಿಜಬ್ ವಿಚಾರವಾಗಿ ಏಕಪಕ್ಷೀಯ ನಿರ್ಧಾರ ಮಾಡಲಾಗಿದೆ, ಶಾಲೆಯ ಕಮಿಟಿಯಲ್ಲಿ ಸ್ಥಳೀಯ ಶಾಸಕರೇ ಅಧ್ಯಕ್ಷರು, ಅವರು ಹಿಜಬ್ ಗೆ ವಿರುದ್ಧವಾಗಿದ್ದಾರೆ. ಇಂತಹ ಶಾಸಕ ಅಧ್ಯಕ್ಷರಿಂದ ಪಾರದರ್ಶಕತೆ ಹೇಗೆ ಸಾಧ್ಯ.? ಹಿಜಬ್ ವಿರುದ್ಧ ಅಭಿಯಾನ ಆರಂಭದಲ್ಲಿ ವಿದ್ಯಾರ್ಥಿನಿಯರ ಬಳಿ ಒತ್ತಾಯವಾಗಿ ಹಿಜಬ್ ಧರಿಸಿ ಬರುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿಯರು ಹಿಜಬ್ ಧರಿಸುತ್ತಿದ್ದರು, ಅದಕ್ಕೆ ಬಹಳಷ್ಟು ದಾಖಲೆಗಳು, ಪುರಾವೆ ಇವೆ. ಆದರೆ ಏಕಾಏಕಿ ಹಿಜಬ್ ಧರಿಸದಂತೆ ಶಿಕ್ಷಕಿ ಸೂಚನೆ ನೀಡುತ್ತಾರೆ ತರಗತಿಯಿಂದ ವಿದ್ಯಾರ್ಥಿನಿಯನ್ನು ಹೊರಕಳುಹಿಸಲಾಗುತ್ತೆ, ಶೋಷಣೆ ಮಾಡಲಾಗುತ್ತೆ, ಹೊರಗೆ ನಿಲ್ಲಿಸಿ ಗೇಲಿ ಮಾಡಲಾಗುತ್ತೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಹಾಗೇ ನೋಡಿದ್ರೆ ಶಿಕ್ಷಣ ಸಂಸ್ಥೆಗಳಿಗೆ ನಿಯಮ ರೂಪಿಸುವ ಅಧಿಕಾರ ಇಲ್ಲ ಎಂದು ಪ್ರತಿಪಾದಿಸಿದರು.
Advertisement
ಈ ನಡುವೆ ನ್ಯಾಯಾಧೀಶರು, ಸಮವಸ್ತ್ರ ನೀತಿಯಲ್ಲಿ ರಾಜ್ಯ ಸರ್ಕಾರದ ತಪ್ಪೇನಿದೆ?. ಶಿಕ್ಷಣ ಸಂಸ್ಥೆಯು ನಿಯಮವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ಡ್ರೆಸ್ ಕೋಡ್ ಅನ್ನು ನಿರ್ಧರಿಸುವ ನಿಯಮ ಇಲ್ಲದಿದ್ದರೆ ರಾಜ್ಯದ ಕಥೆ ಏನು?, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮಿಚ್ಛೆಯ ಬಟ್ಟೆ ಧರಿಸಬಹುದೇ?, ವಿದ್ಯಾರ್ಥಿಯು ಸ್ಕರ್ಟ್, ಮಿಡಿಸ್, ಏನು ಬೇಕಾದರೂ ಧರಿಸಿ ಬರಬಹುದೇ?, ಸಮವಸ್ತ್ರ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೇಗಾಗುತ್ತೆ, ಶಿಕ್ಷಣದ ಹಕ್ಕು ಕಸಿದಂತೆ ಹೇಗಾಗುತ್ತದೆ? ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದರು.
ಇದಕ್ಕೆ ಉತ್ತರ ನೀಡಿದ ವಿದ್ಯಾರ್ಥಿನಿಯರ ಪರ ವಕೀಲರು, ಸಿಖ್ ರು ಟರ್ಬೈನ್ ಧರಿಸುವ ರೀತಿಯಲ್ಲಿ ಯುವತಿಯರು ಹಿಜಬ್ ಧರಿಸುತ್ತಾರೆ. ಇದು ಧಾರ್ಮಿಕ ಹಕ್ಕು, ಹಿಜಬ್ ಧರಿಸಿದಿದ್ದರೇ ವಿದ್ಯಾರ್ಥಿನಿಯರು ಶಾಲೆಗೆ ಬರುವುದಿಲ್ಲ ಎಂದರು. ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಮತ್ತೋರ್ವ ವಕೀಲ ದೇವದತ್ ಕಾಮತ್, ಈ ಪ್ರಕರಣ ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮದ್ಯಪ್ರಿಯರಿಗೆ ಗುಡ್‌ನ್ಯೂಸ್- ವರ್ಷಾಂತ್ಯದ ವೇಳೆಗೆ 700 ಬಾರ್‌ಗಳು ಓಪನ್
ಈ ನಡುವೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು ಮಾತ್ರ ಸಮಸ್ಯೆಯಾಗಿದೆ, ಮುಸ್ಲಿಂ ವಿದ್ಯಾರ್ಥಿನಿಯರು ಶಿಸ್ತು ಅನುಸರಿಸಲು ಬಯಸುವುದಿಲ್ಲ ಎಂದರು. ಈ ವಾದ ಒಪ್ಪದ ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಹಿಜಬ್ ಸಂಸ್ಥೆಯ ಶಿಸ್ತನ್ನು ಹೇಗೆ ಉಲ್ಲಂಘಿಸುತ್ತಿದೆ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟರಾಜ್, ಧಾರ್ಮಿಕ ಹಕ್ಕುಗಳ ಧಮನದ ಹೆಸರಿನಲ್ಲಿ ಶಾಲಾ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ ಎಂದರು.
ಕಡೆಯದಾಗಿ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಪಿ. ನಾವಡಗಿ, ನಾವು ಸಮವಸ್ತ್ರ ನಿರ್ಧರಿಸುವ ಅಧಿಕಾರ ಶಾಲಾ ಆಡಳಿತ ಮಂಡಳಿಗೆ ನೀಡಿದ್ದೇವೆ, ಕೆಲವು ಶಾಲೆಗಳು ಹಿಜಬ್ ಧರಿಸಲು ಅವಕಾಶ ನೀಡಿವೆ, ನಾವು ಅದನ್ನು ವಿರೋಧಿಸುವುದಿಲ್ಲ ಎಂದರು. ವಿಚಾರಣೆ ಬಳಿಕ ಪ್ರಕರಣದ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಇನ್ನು ಬುಧವಾರ ನಡೆಯಲಿರುವ ವಿಚಾರಣೆ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ.