ಕಾವೇರಿಗಾಗಿ ಸಂಸತ್ತಲ್ಲಿ ಒಗ್ಗಟ್ಟು ಪ್ರದರ್ಶಿಸಿ- ರಾಜ್ಯದ ಸಂಸದರಲ್ಲಿ ಎಚ್‍ಡಿಕೆ ಮನವಿ

Public TV
2 Min Read
HDK 3

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಸಂಸತ್ತಲ್ಲಿ ಒಗ್ಗಟ್ಟಾಗಿ ಹೋರಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರಾಜ್ಯದ ಸಂಸದರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ರಾಜ್ಯದ ಸರ್ವಪಕ್ಷಗಳ ಸಂಸದರ ಸಭೆ ನಡೆದಿದ್ದು, ಈ ವೇಳೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಾಧಿಕಾರ ರಚನೆಯಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಅದನ್ನು ಪ್ರಶ್ನಿಸಿ ಸಂಸತ್ತು ಮತ್ತು ಸುಪ್ರೀಂಕೋರ್ಟ್‍ನಲ್ಲಿ ಹೋರಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಒಗ್ಗಟಾಗಬೇಕೆಂದು ಸಭೆಯಲ್ಲಿ ಸಿಎಂ ಮನವಿ ಮಾಡಿದ್ರು. ಆದ್ರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಈ ಅಧಿಸೂಚನೆ ಹೊರಡಿಸಿರುವುದರಿಂದ ರಾಜ್ಯ ಬಿಜೆಪಿ ಸಂಸದರು ಕಾವೇರಿ ಅಧಿಸೂಚನೆ ವಿರೋಧಿಸಿ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಿದರೂ, ಸ್ಪೀಕರ್ ಸುಮಿತ್ರಾ ಮಹಾಜನ್ ಚರ್ಚೆಗೆ ಅನುಮತಿ ನೀಡುವುದು ಅನುಮಾನ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

vlcsnap 2018 07 19 07h09m22s66

ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯ್ತು?:
ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಆದೇಶನ್ವಯ ರಚಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸಂಸತ್ತಿನಲ್ಲಿ ವಿರೋಧಿಸುವುದು. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮುಂದುವರಿಸುವುದು. ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದು. ಈ ಬಗ್ಗೆ ಚರ್ಚೆ ಮಾಡಲು ಮತ್ತೊಮ್ಮೆ ಹಿರಿಯ ಸಂಸದರ ಕರೆ ಕರೆಯುವುದು. ಕೇಂದ್ರ ಜಲಸಂಪನ್ಮೂಲ ಸಚಿವರ ಬಳಿ ರಾಜ್ಯ ಸಂಸದರ ನಿಯೋಗ ಕರೆದೊಯ್ದು ಸಂಸತ್‍ನಲ್ಲಿ ವಿಷಯ ಪ್ರಸ್ತಾಪಿಸಲು ಒತ್ತಡ ಹಾಕುವುದು. ಪ್ರಾಧಿಕಾರದಲ್ಲಾದ ಅನ್ಯಾಯದ ಬಗ್ಗೆ ಸಂಸದರಿಗೆ ರಾಜ್ಯ ಸರ್ಕಾರ ಟಿಪ್ಪಣಿ ನೀಡಲು ಸಲಹೆ ನೀಡಲಾಗಿದೆ. ಕಾವೇರಿ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ನೆನೆಗುದಿಗೆ ಬಿದ್ದಿರುವ ಕೇಂದ್ರದ ಯೋಜನೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಇಂದು ಕಾವೇರಿ ನಿಯಂತ್ರಣ ಸಮಿತಿಯ ಎರಡನೇ ಸಭೆ:
ಇಂದು ಕಾವೇರಿ ನೀರು ನಿಯಂತ್ರಣ ಸಮಿತಿಯ ಎರಡನೇ ಸಭೆ ನಡೆಯಲಿದೆ. ದೆಹಲಿಯಲ್ಲಿರುವ ಜಲ ಆಯೋಗದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಮಿತಿ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮೊದಲ ಸಭೆಯಲ್ಲಿ ಪ್ರಾಧಿಕಾರ ಆದೇಶ ಪಾಲನೆ ಬಗ್ಗೆ ಚರ್ಚಿಸಿರುವ ಸಮಿತಿ, ಇಂದಿನ ಸಭೆಯಲ್ಲಿ ಕೇಂದ್ರ ಕಚೇರಿ ಸ್ಥಾಪನೆ ಕುರಿತು ಚರ್ಚೆ ಮಾಡಲಿದೆ. ನಿಯಂತ್ರಣ ಸಮಿತಿಯ ಕೇಂದ್ರ ಕಚೇರಿ ಬೆಂಗಳೂರಿಗೆ ವರ್ಗಾಯಿಸಬೇಕಾಗಿದ್ದು, ಪೀಠೋಪಕರಣ ಹಾಗೂ ಸಿಬ್ಬಂದಿ ನೇಮಕ ಹಾಗೂ ಇತರೆ ಕಾರ್ಯ ಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

vlcsnap 2018 07 19 07h08m41s174

ಸುಪ್ರೀಂನಲ್ಲಿಂದು ಕೇರಳ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ:
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಕೇರಳ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಕಾವೇರಿ ನೀರಿನಲ್ಲಿ ಹಂಚಿಕೆಯಾಗಿರುವ 30 ಟಿಎಂಸಿ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಹಂಚಿಕೆಯಾಗಿರುವ ತನ್ನ ಪಾಲಿನ ನೀರಿನ ಬಳಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವಂತೆ ಪುನರ್ ಪರಿಶೀಲನಾ ಅರ್ಜಿಯಲ್ಲಿ ಕೇರಳ ಉಲ್ಲೇಖಿಸಿದೆ. 30 ಟಿಎಂಸಿ ನೀರನ್ನ ಕುಡಿಯಲು ಹಾಗೂ ನೀರಾವರಿ ಯೋಜನೆಗಳಿಗೆ ಬಿಟ್ಟು ಬೇರೆ ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ. ಹಾಗೂ ಅದರ ನೈಸರ್ಗಿಕ ಹರಿವುವನ್ನು ಬದಲಾಯಿಸುವಂತಿಲ್ಲ ಅಂತಾ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕಾವೇರಿ ಪ್ರಾಧಿಕಾರಕ್ಕೆ ಎಲ್ಲ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿರುವುದರಿಂದ ಕೇರಳ ಸಲ್ಲಿಸಿರುವ ಅರ್ಜಿ ವಜಾ ಆಗುವ ಸಾಧ್ಯತೆಯೂ ಇದೆ.

vlcsnap 2018 07 19 07h09m01s120

Share This Article
Leave a Comment

Leave a Reply

Your email address will not be published. Required fields are marked *