ಬೆಂಗಳೂರು: ಈ ಕಲೆ, ಅದರ ಮೇಲಿನ ವ್ಯಾಮೋಹದ ಸೆಳೆತ ಸಮ್ಮೋಹಕವಾದದ್ದು. ಅದು ಎಲ್ಲೋ ಇದ್ದವರನ್ನೂ ಕೂಡಾ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮಾಯೆಯಂಥಾದ್ದು. ಅದಕ್ಕೆ ಚಿತ್ರರಂಗದಲ್ಲಿ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಬದುಕಿನ ಅನಿವಾರ್ಯತೆಗೆ ಸಿಕ್ಕು ಎಲ್ಲೋ ಕಳೆದು ಹೋದವರನ್ನು ಕೂಡಾ ಸಿನಿಮಾ ಮಾಯೆ ತನ್ನ ಕೇಂದ್ರಕ್ಕೆ ಹೇಗಾದರೂ ಸೆಳೆದುಕೊಂಡು ಬಿಡುತ್ತದೆ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಆಗಸ್ಟ್ 23ರಂದು ಬಿಡುಗಡೆಗೆ ರೆಡಿಯಾಗಿರುವ ರಾಂಧವ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಕೂಡಾ ಅದೇ ಸಾಲಿನಲ್ಲಿ ಸಾಗಿ ಬಂದವರು.
ತಮ್ಮ ತಂದೆಯ ಬಟ್ಟೆ ಅಂಗಡಿ ಉದ್ಯಮವನ್ನು ನೋಡಿಕೊಳ್ಳುತ್ತಲೇ ಅದರಲ್ಲಿ ಕಳೆದು ಹೋಗುವಂತಿದ್ದ ಸುನೀಲ್ ಆಚಾರ್ಯರನ್ನು ಕೈ ಹಿಡಿದು ಕರೆತಂದಿರೋದು ಸಿನಿಮಾ ಎಂಬ ಮಾಯೆಯೇ. ಆಷ್ಟಕ್ಕೂ ಅವರನ್ನು ಆರಂಭಿಕವಾಗಿ ಸೆಳೆದುಕೊಂಡಿದ್ದು ಬರವಣಿಗೆಯ ಹುಚ್ಚು. ಅದರ ಸೆಳೆತಕ್ಕೆ ಬಿದ್ದ ಅವರು ಒಂದು ಕಾದಂಬರಿ ಬರೆಯಲು ಆರಂಭಿಸಿದ್ದರು. ಹಾಗೆ ಒಂದಿಡೀ ಕಾದಂಬರಿ ಬರೆದು ಮುಗಿಸಿದ್ದ ಸುನೀಲ್ ಅದನ್ನು ಗೆಳೆಯರಿಗೆ ತೋರಿಸಿದಾಗ ಇದನ್ನು ಸಿನಿಮಾ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಒಂದಷ್ಟು ಕಾಲ ಆಲೋಚಿಸಿದ ನಂತರ ಸುನೀಲ್ ಅದಕ್ಕಾಗಿ ತಯಾರಿ ಆರಂಭಿಸಿದ್ದರು.
ಸಿನಿಮಾ ನೋಡೋ ಆಸಕ್ತಿಯ ಹೊರತಾಗಿ ಆ ಕ್ಷಣದಲ್ಲಿ ಸುನೀಲ್‍ಗೆ ಯಾವ ಅನುಭವವೂ ಇರಲಿಲ್ಲ. ಆದರೆ, ಒಂದೊಳ್ಳೆ ಸಿನಿಮಾ ಮಾಡಲು ಬೇಕಾದ ರೂಪುರೇಷೆಗಳು ರೆಡಿಯಿದ್ದವು. ತಿಂಗಳುಗಟ್ಟಲೆ ಸ್ಕ್ರಿಪ್ಟ್ ವರ್ಕ್ ಮಾಡಿದ ಸುನೀಲ್ ಅವರಿಗೆ ಮಡದಿ, ತಂಗಿಯೂ ಬೆಂಬಲಕ್ಕೆ ನಿಂತಿದ್ದರು. ಗೆಳೆಯರೂ ಕೂಡಾ ಒಂದಷ್ಟು ಸಲಹೆಗಳೊಂದಿಗೆ ಒಪ್ಪ ಓರಣ ಮಾಡಲು ಸಹಾಯ ಮಾಡಿದ್ದರು. ಇಂಥಾ ಶ್ರದ್ಧೆಯಿಂದಲೇ ರಾಂಧವ ಸುನೀಲ್ ಅವರ ಮೊದಲ ಚಿತ್ರವೆಂದರೆ ನಂಬಲಾಗದಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದೆಯಂತೆ.