ಮಾಂಸಾಹಾರಗಳಲ್ಲಿಯೇ ಅತಿ ಸುರಕ್ಷಿತವಾದ, ಕೊಲೆಸ್ಟ್ರಾಲ್ ಇಲ್ಲದ ಮತ್ತು ಪೌಷ್ಟಿಕ ಆಹಾರವೆಂದರೆ ಮೀನು. ಮಧ್ಯಾಹ್ನದ ಊಟ ಕೊಂಚ ಟೇಸ್ಟಿಯಾಗಿರಲು ಎಗ್ ಪ್ರೈಡ್ ರೈಸ್, ಚಿಕನ್ ಪ್ರೈಡ್ ರೈಸ್ (Chicken) Fried Rice ಈಗ ಹಳೆಯದಾಯಿತು. ಅಷ್ಟೇ ಏಕೆ ತೂಕ ಏರುತ್ತದೆಂಬ ಭಯದಿಂದ ಕೆಲವರು ತಿನ್ನುವುದೂ ಇಲ್ಲ. ಹಾಗಾಗಿ ಮಕ್ಕಳಿಗೂ ಹಿರಿಯರಿಗೂ ಹಿಡಿಸುವ, ಅತೀ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಮೀನಿನ ಪ್ರೈಡ್ ರೈಸ್ (Fish Fried Rice) ಮಾಡುವ ವಿಧಾನ ಇಲ್ಲಿದೆ. ಇದಕ್ಕಾಗಿ ಅಗತ್ಯವಾಗಿ ಬೇಕಾಗಿರುವುದು ಮುಳ್ಳಿಲ್ಲದ ಮೀನು (Fish). ಇತ್ತೀಚೆಗೆ ಈ ಪರಿಯ ಮೀನು ಪ್ಯಾಕೆಟ್ಟುಗಳಲ್ಲಿ ದೊರಕುತ್ತಿದೆ.
ಇಲ್ಲದಿದ್ರೆ ನಿಮ್ಮ ನೆಚ್ಚಿನ ಮೀನನ್ನು ಬರೆಯ ನೀರಿನಲ್ಲಿ ಬೇಯಿಸಿ ಬಸಿದು ಮುಳ್ಳನ್ನು ನಾಜೂಕಿನಿಂದ ನಿವಾರಿಸಿದರೂ ಸರಿ. ಅನ್ನವನ್ನೂ ಮೊದಲೇ ಮಾಡಿಟ್ಟುಕೊಂಡಿರಬೇಕು. ಇವೆರಡೂ ತಯಾರಿದ್ದರೆ ಉಳಿದ ಕೆಲಸ ಕೆಲವೇ ನಿಮಿಷಗಳದ್ದು ಮಾತ್ರ…!
ಅಗತ್ಯ ಸಾಮಾಗ್ರಿಗಳು
- ಮುಳ್ಳಿಲ್ಲದ ಮೀನು: ಅರ್ಧ ಕೇಜಿ
- ಬೇಯಿಸಿದ ಅಕ್ಕಿ: ಮೂರು ಕಪ್
- ಮೆಣಸು: ಎರಡು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
- ಈರುಳ್ಳಿ: ಮೂರು (ಮಧ್ಯಮ ಗಾತ್ರದ್ದು, ಚಿಕ್ಕದಾಗಿ ಹೆಚ್ಚಿದ್ದು)
- ಸೆಲೆರಿ ದಂಟುಗಳು: ಅರ್ಧ ಕಪ್ (ಇದು ಲಭ್ಯವಿಲ್ಲದಿದ್ದರೆ ಸಿಹಿಯಾಗಿರುವ ಎಲೆಕೋಸು ಸಹಾ ನಡೆಯುತ್ತದೆ)
- ಮೀನಿನ ಸಾಸ್: ಒಂದು ದೊಡ್ಡ ಚಮಚ
- ಚಿಲ್ಲಿ ಸಾಸ್: 2 ದೊಡ್ಡ ಚಮಚ
- ಬೆಳ್ಳುಳ್ಳಿ: 3-4 ಎಸಳುಗಳು
- ಸೋಯಾ ಸಾಸ್: 3 ಚಿಕ್ಕ ಚಮಚ
- ಕ್ಯಾರೆಟ್ : 2 ಚಿಕ್ಕದ್ದು (ಹೆಚ್ಚಿದ್ದು)
- ಕಾಳುಮೆಣಸಿನ ಪುಡಿ- 1 ಚಿಕ್ಕ ಚಮಚ
- ಮೆಕ್ಕೆ ಜೋಳದ ಹಿಟ್ಟು (ಕಾರ್ನ್ ಸ್ಟಾರ್ಚ್)- 1 ದೊಡ್ಡ ಚಮಚ
- ಎಣ್ಣೆ : ಕರಿಯಲು ಅಗತ್ಯವಿದ್ದಷ್ಟು
- ಉಪ್ಪು: ರುಚಿಗನುಸಾರ
ಮಾಡುವ ವಿಧಾನ:
1) ಮೀನಿನ ತುಂಡುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಸೋಯಾ ಸಾಸ್, ಫಿಶ್ ಸಾಸ್, ಚಿಲ್ಲಿ ಸಾಸ್ ಮತ್ತು ಕಾಳುಮೆಣಸಿನ ಪುಡಿಗಳೊಂದಿಗೆ ಬೆರೆಸಿ ಹೀರಿಕೊಳ್ಳಲು ಸಾಧ್ಯವಾಗುವಂತೆ ಸುಮಾರು 15 ನಿಮಿಷ ತೆಗೆದಿಡಿ.
3) ಕರಿಯುವ ಎಣ್ಣೆಯನ್ನು ಬಿಸಿಮಾಡಿ, ಕರಿಯುವಷ್ಟು ಬಿಸಿಯಾಗಿದೆ ಎಂದ ಬಳಿಕ ಮೀನಿಗೆ ಕಾರ್ನ್ ಸ್ಟಾರ್ಚ್ ಹಾಕಿ ಮಿಶ್ರಣ ಮಾಡಿ ಹಾಗೂ ಕೂಡಲೇ ಕರಿಯುವ ಎಣ್ಣೆಗೆ ಬಿಡಿ.
4) ಸುಮಾರು ನಸುಗಂದು ಬರುವಷ್ಟು ಮಾತ್ರ ಕರಿದು ಹೊರತೆಗೆಯಿರಿ.
5) ಬೆಳ್ಳುಳ್ಳಿ ಎಸಳುಗಳನ್ನೂ ಕರಿಯುವ ಎಣ್ಣೆಯಲ್ಲಿ ಕೊಂಚ ಕೆಂಪಗಾಗುವವರೆಗೆ ಹುರಿಯಿರಿ.
6) ಈಗ ಎಣ್ಣೆಯಲ್ಲಿ ಈರುಳ್ಳಿ, ಸೆಲೆರಿ, ಮೆಣಸು ಮತ್ತು ಕ್ಯಾರೆಟ್ಟುಗಳನ್ನು ಸುಮಾರು ಹತ್ತು ನಿಮಿಷಗಳವರೆಗೆ ಅಥವಾ ಎಲ್ಲವೂ ಕೆಂಪಗಾಗುವವರೆಗೆ ಹುರಿಯಿರಿ.
7) ಕರಿದ ಎಲ್ಲವನ್ನೂ ಮೀನಿನ ತುಂಡುಗಳೊಡನೆ ಚೆನ್ನಾಗಿ ಮಿಶ್ರಣ ಮಾಡಿ
8) ನಂತರ ಬೆಂದ ಅನ್ನವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಿ
9) ಬಿಸಿ-ಬಿಸಿಯಿರುವಂತೆಯೇ ತಿಂದರೆ ಆಹಾ.. ಎನಿಸುತ್ತೆ. ಜೊತೆಗೆ ಹಸಿ ತರಕಾರಿಗಳ ಸಾಲಾಡ್ ಇದ್ದರೆ ರುಚಿ ಇನ್ನಷ್ಟು ಹೆಚ್ಚುವುದು. ಕೆಲವರಿಗೆ ಇದು ಟೊಮೇಟೊ ಸಾಸ್ ನೊಂದಿಗೂ ರುಚಿಸುತ್ತದೆ.