ಮಂಡ್ಯಕ್ಕೆ ನೀರು ಬಿಡಲು ಯಾರು ಕಾರಣ – ಚರ್ಚೆಗೆ ಕಾರಣವಾಯ್ತು ಸುಮಲತಾ ಬರೆದ ಸಾಲುಗಳು

Public TV
2 Min Read
sumalatha 2

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ರೈತರ ಬೆಳೆಗಳಿಗೆ ನೀರು ಬಿಡಿಸಿದ್ದು ಯಾರು? ಇಂತಹದ್ದೊಂದು ಹೊಸ ಚರ್ಚೆಗೆ ಸಂಸದೆ ಸುಮಲತಾ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಕಾರಣವಾಗಿದೆ.

ಸಂಸದೆ ಸುಮಲತಾ ಅವರು “ಕೇಂದ್ರದ ಜಲಾನಯನ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ನನ್ನ ಮನವಿ ಸ್ಪಂದಿಸಿ ನೀರನ್ನು ಮಂಡ್ಯ ನಾಲೆಗೆ ಹರಿಸಲು ಆದೇಶಿಸಿದ ನಿಮಗೆ ಮಂಡ್ಯ ರೈತರ ಪರವಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು” ಎಂದು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

KRS dam

ಸುಮಲತಾ ಜೂನ್ 20 ರಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ಪತ್ರ ಬರೆದು ಮಂಡ್ಯ ಜಿಲ್ಲೆಗೆ ಕೆಆರ್‍ಎಸ್ ಅಣೆಕಟ್ಟೆಯಿಂದ 2 ಟಿಎಂಸಿ ನೀರು ಬಿಡಲು ಕೋರಿಕೊಂಡಿದ್ದರು. ಜೂನ್ 28 ರಂದು ಸುಮಲತಾ ಮನವಿಗೆ ಸಚಿವರಿಂದ ಪತ್ರದ ಮೂಲಕ ಉತ್ತರ ಬಂದಿತ್ತು. ಜುಲೈ 15 ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಆ ಸಭೆಯಲ್ಲಿ ರೈತರ ಬೆಳೆಗಳಿಗೆ 10 ದಿನ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಜುಲೈ 16ರ ಮಧ್ಯರಾತ್ರಿಯಿಂದ ರೈತರ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲಾಗಿತ್ತು.

mnd krs water 2

ಇದೀಗ ಕೇಂದ್ರ ಜಲಾನಯನ ಸಚಿವರಿಗೆ ಸುಮಲತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಜಲಾನಯನ ಸಚಿವರಿಗೆ ನೀರು ಬಿಡಲು ಪತ್ರದ ಮೂಲಕ ತಾವು ಮನವಿ ಮಾಡಿದ್ದಕ್ಕೆ ಸಚಿವರು ಪ್ರತಿಕ್ರಿಯಿಸಿದ್ದ ಪತ್ರವನ್ನು ಸುಮಲತಾ ಅವರು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರ ಪತ್ರದ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ರೈತರಿಗೆ ನೀರು ಬಿಡಿಸಿದ ಕ್ರೆಡಿಟ್ ಪಡೆಯಲು ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ತೆರೆಮರೆ ಯತ್ನ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

https://www.facebook.com/SumalathaAmbi/photos/a.570615780082318/647999459010616/?type=3&theater

ಸುಮಲತಾ ಸಚಿವರಿಂದ ಪ್ರತ್ಯುತ್ತರ ಬಂದ ದಿನವೇ ಫೇಸ್‍ಬುಕ್‍ನಲ್ಲಿ ಪತ್ರ ಹಾಕಬಹುದಿತ್ತು. ಆದರೆ ನಾಲೆಗೆ ನೀರು ಬಿಟ್ಟ ನಂತರ ಈಗ ಫೇಸ್‍ಬುಕ್‍ಗೆ ಈ ಲೆಟರ್ ಹಾಕಿದ್ದಾರೆ. ಹಾಗಾದರೆ ರೈತರ ಬೆಳೆಗಳಿಗೆ ನೀರು ಬಿಡಿಸಿದ ಕ್ರೆಡಿಡ್ ಪಡೆಯಲು ಸಂಸದೆ ಸುಮಲತಾ ಮುಂದಾದರ ಎಂದು ಮಂಡ್ಯದಲ್ಲಿ ಚರ್ಚೆಯಾಗಿತ್ತದೆ. ಆದರೆ ಸುಮಲತಾ ಕಾರ್ಯಕ್ಕೆ ಫೇಸ್‍ಬುಕ್‍ನಲ್ಲಿ ಅವರ ಬೆಂಬಲಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *