ಮಂಡ್ಯ: ನಿಜವಾದ ಜೋಡೆತ್ತುಗಳು ನಾವು, ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಕೆಂಡಕಾರಿದ್ದಾರೆ.
ಈ ಬಗ್ಗೆ ಕೆಆರ್‍ಎಸ್ ನಲ್ಲಿ ಪ್ರಚಾರದ ವೇಳೆ ಸುಮಲತಾ ಪ್ರತಿಕ್ರಿಯೆ ನೀಡಿ, ಸಿಎಂ ಸ್ಥಾನಕ್ಕೆ ಇಂತಹ ಪದಗಳು ಅದು ಶೋಭೆ ತರುವುದಿಲ್ಲ. ಸಿಎಂ ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು. ಈ ವಿಷಯವನ್ನು ಸಾರಾ ಮಹೇಶ್ ಅವರನ್ನು ಕೇಳಬೇಕಿತ್ತು. ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾರಾ ಮಹೇಶ್ ಪರ ಯಶ್ ಪ್ರಚಾರ ಮಾಡಲಿಲ್ಲವೇ? ಇವರ ಪರ ಮತ ಯಾಚನೆ ಮಾಡಿದ್ರೆ ಒಳ್ಳೆಯವರಾ? ನಮ್ಮ ಪರ ಪ್ರಚಾರ ಮಾಡಿದ್ರೆ ಅನಾಚಾರನಾ? ಅಲ್ಲದೆ ಇದು ಸರಿಯಲ್ಲ. ಜನ ಮೂರ್ಖರಲ್ಲ, ಜನರಿಗೆ ಈ ವಿಷಯ ಗೊತ್ತಾಗುತ್ತೆ. ನಿಮ್ಮ ಮಾತುಗಳಿಂದ ಯಾರೂ ಮರುಳಾಗುತ್ತಿಲ್ಲ ಎಂದರು.
ಡಿಕೆಶಿ ಅವರ ಮಾತಿನ ಅರ್ಥ ನನಗೆ ಅರ್ಥ ಆಗಿಲ್ಲ. ಅದು ಅವರಿಗೆ ಅರ್ಥವಾಗಿರಬೇಕು. ಕಳೆದ ಚುನಾವಣೆಯಲ್ಲಿ ಯಾರ್ಯಾರು ಏನೇನೂ ಮಾತನಾಡಿದ್ದಾರೆ ಎಂಬ ದಾಖಲೆ ಸಿಗುತ್ತೆ. ಈಗ ಬಂದು ಮೈತ್ರಿ ಧರ್ಮ ಪಾಲಿಸಬೇಕು ಎಂದು ಹೇಳುತ್ತಾರೆ. ಅದು ಸಂತೋಷದ ವಿಷಯ. ಹಾಗಂತ ಎಲ್ಲವನ್ನು ಟೇಕ್ ಒವರ್ ಮಾಡಿ ನೀವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಇಲ್ಲಿ ಜನರ ಅಭಿಪ್ರಯ ಮುಖ್ಯ. ಇವರು ಜನರಿಗೆ ಆದೇಶ ನೀಡಿದ ತಕ್ಷಣ ಜನರು ಪಾಲಿಸುವುದಿಲ್ಲ. ನಾವು ಜನರ ಪ್ರೀತಿಯನ್ನು ಸಂಪಾದಿಸಬೇಕು. ಅವರನ್ನು ಕಮಾಂಡ್ ಮಾಡಲು ಆಗುವುದಿಲ್ಲ ಎಂದರು.
ಡಿಕೆಶಿ ಅವರಿಗೆ ಅಂಬರೀಶ್ ಆತ್ಮ ಶಾಂತಿ ಬಗ್ಗೆ ಕಾಳಜಿ ಇರೋದು ನೋಡಿ ಸಂತೋಷವಾಗುತ್ತಿದೆ. ಅಷ್ಟು ಕಾಳಜಿ ಅವರಿಗೆ ಇದ್ದಿದ್ದರೆ, ಡಿಕೆ ಸುರೇಶ್ ಸ್ಥಾನವನ್ನ ಬಿಟ್ಟು ಕೊಡಬಹುದಿತ್ತು. ಅಂಬರೀಶ್ ಅವರ ಬಗ್ಗೆ ಇರುವ ಭಕ್ತಿಯನ್ನು ಸಾಬೀತು ಮಾಡಬಹುದಿತ್ತು. ಅದನ್ನು ಬಿಟ್ಟು ಮಂಡ್ಯದಲ್ಲಿ ಬಂದು ಈ ರೀತಿ ಮಾತನಾಡೋದು ಎಷ್ಟು ಸರಿ ಎಂಬುದು ಜನರು ಅರ್ಥ ಮಾಡಿಕೊಳ್ಳುತ್ತಾರೆ. ಈಗ ಯಾರಿಗೂ ವಿಧಿ ಇಲ್ಲ. ಮಂಡ್ಯಕ್ಕೆ ಬಂದರೆ ಅಂಬರೀಶ್ ಹೆಸರನ್ನು ಬಿಟ್ಟು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರು ಅಂಬರೀಶ್ ಹೆಸರನ್ನೇ ಉಪಯೋಗಿಸಿಕೊಳ್ಳಬೇಕು. ಆ ಹೆಸರು ಬಿಟ್ಟರೆ ಅವರಿಗೆ ಬೇರೆ ಯಾರ ಹೆಸರು ಇಲ್ಲ ಎಂದು ಡಿಕೆಶಿ ಹೇಳಿಕೆ ಸುಮಲತಾ ಟಾಂಗ್ ನೀಡಿದರು.
ಸಿಎಂ ಹೇಳಿದ್ದು ಏನು?
ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.