– ವಿರೋಧ ಬಿಟ್ಟು ಜೊತೆ ಬನ್ನಿ, ಮಂಡ್ಯ ಶಾಸಕರಿಗೆ ಸುಮಲತಾ ಆಹ್ವಾನ
ಮಂಡ್ಯ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಅವರು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದು, ಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ ಗೆಲುವು ಎಂದಿದ್ದಾರೆ.
ಪತಿ ಅಂಬಿ ನೆನೆದು ಭಾವೋದ್ವೇಗದಿಂದ ಮಾತನಾಡಿದ ಅವರು, ಮೊದಲ ಬಾರಿಗೆ ನಿಮ್ಮ ಮುಂದೆ ಬಂದ ವೇಳೆ ನಾನು ಯಾರು ಪ್ರಶ್ನೆ ಇತ್ತು. ಆದರೆ ಈಗ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಎಂಬ ಗುರುತು ನೀಡಿದ್ದೀರಿ. ನನ್ನ ಪರ ದುಡಿದ ಎಲ್ಲಾ ಕಾರ್ಯಕರ್ತರಿಗೂ ನಾನು ಋಣಿ ಎಂದರು.
Advertisement
Advertisement
ಪಕ್ಷ ಬಿಟ್ಟು ಬಂದ ಕಾಂಗ್ರೆಸ್ ನಾಯಕರು, ರೈತರ ಪರ ನಿಲ್ಲುವ ರಾಜ್ಯ ರೈತ ಸಂಘ ನಾಯಕರು ಹಾಗೂ ಮಂಡ್ಯದಲ್ಲಿ ಅಭ್ಯರ್ಥಿ ಹಾಕದೆ ಬೆಂಬಲಿಸಿದ ಬಿಜೆಪಿ ಪಕ್ಷದ ಗೆಲುವು ಆಗಿದೆ. ದೇಶಕ್ಕೆ ಮಾದರಿಯಾಗಿ ಸ್ವಾಭಿಮಾನದ ಗೆಲುವು ನೀಡಿ, ಕರ್ನಾಟಕದ ಲೋಕಸಭಾ ಇತಿಹಾಸದಲ್ಲಿ 52 ವರ್ಷಗಳ ಬಳಿಕ ಗೆದ್ದ ಸ್ವಾತಂತ್ರ್ಯ ಅಭ್ಯರ್ಥಿ ಎಂದು ಇತಿಹಾಸ ರಚನೆ ಮಾಡಿದ್ದೀರಿ ಎಂದರು.
Advertisement
Advertisement
ಐತಿಹಾಸಿಕ ಗೆಲುವು:
2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 222 ಪಕ್ಷೇತರ ಅಭ್ಯರ್ಥಿಗಳಲ್ಲಿ ಗೆಲುವು ಪಡೆದ ಏಕೈಕ ಅಭ್ಯರ್ಥಿ ಎಂಬ ಇತಿಹಾಸ ನಿರ್ಮಿಸಿದ್ದೀರಿ. ಅಲ್ಲದೇ ಭಾರತದಲ್ಲಿ ಪಕ್ಷೇತರರಾಗಿ ನಿಂತು ಗೆದ್ದ ಪ್ರಥಮ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ನಿಮ್ಮಿಂದ ಲಭಿಸಿದೆ ಎಂದರು.
ಇಡೀ ದೇಶ ತಿರುಗಿ ನೋಡುವಂತೆ ಮಾಡಿದ ಚುನಾವಣೆ ಇದಾಗಿತ್ತು. ತಾಳ್ಮೆ, ಸಹನೆ ವಹಿಸಿ ಚುನಾವಣೆ ಎದುರಿಸಿದ್ದೆ ನಮ್ಮ ಗೆಲುವಿಗೆ ಕಾರಣ. ಇನ್ನು ಮುಂದೇ ಕೂಡ ಇದೇ ತಾಳ್ಮೆ ಮುಂದುವರಿಯಬೇಕು. ಚುನಾವಣೆ ಸಮಯದಲ್ಲಿ ಆರೋಪ, ಪ್ರತ್ಯಾರೋಪ ಸಾಮಾನ್ಯ. ಆದರೆ ಫಲಿತಾಂಶ ಬಳಿಕ ಅದು ಮುಂದುವರಿಯಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜನರು ಹಣದ ರಾಜಕಾರಣಕ್ಕೆ ಉತ್ತರ ನೀಡಿದ್ದು, ನೀವು ನನಗೆ ನೀಡಿರುವ ಜವಾಬ್ದಾರಿಯನ್ನ ಉತ್ತಮವಾಗಿ ನಿರ್ವಹಿಸುತ್ತೇನೆ. ಅಂಬರೀಶ್ ಅವರ ದಾರಿಯಲ್ಲೇ ನಾನು ರಾಜಕಾರಣದಲ್ಲಿ ನಡೆದುಕೊಂಡು ಹೋಗುತ್ತೇನೆ. ಅವರು ಕಾವೇರಿಗಾಗಿ ಮಾಡಿದ ಕಾರ್ಯ ನನಗೆ ಸ್ಫೂರ್ತಿ. ನೈಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ. ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ನೀಡೋಣ ಎಂದರು.
ಜೆಡಿಎಸ್ ಶಾಸಕರಿಗೆ ಆಹ್ವಾನ:
ನಾನು ಸಾಯುವವರೆಗೂ ಮುಂದಿನ ಹುಟ್ಟುಹಬ್ಬ ಸಂಭ್ರಮಗಳನ್ನು ಮಂಡ್ಯದಲ್ಲೇ ಆಚರಣೆ ಮಾಡುತ್ತೇನೆ. ಈ ಮಾತನ್ನು ನಾನು ನಿಮಗೆ ನೀಡುತ್ತೇನೆ. ಅಲ್ಲದೇ ರಾಜ್ಯ ರೈತ ಸಂಘವೂ ನೀಡಿದ್ದ ಷರತ್ತುಗಳನ್ನು ನಾನು ಈಡೇರಿಸುತ್ತೇನೆ. ಏಕೆಂದರೆ ಅವರು ಕೇಳಿದ್ದು ನೀರಿನ ಸಮಸ್ಯೆ ಬಗ್ಗೆ, ಮಾತಿನಿಂದ ಮಾಡಲಾಗದನ್ನು ಬಿಟ್ಟು ನೈಜ ಸಮಸ್ಯೆಗೆ ಪರಿಹಾರ ಹುಡುಕೋಣ. ಕ್ಷೇತ್ರದ ಎಲ್ಲಾ ಶಾಸಕರಿಗೂ ಮನವಿ ಮಾಡುತ್ತಿದ್ದು, ರಾಜಕಾರಣ ಬಿಟ್ಟು ಮುಂದೆ ನಡೆಯೋಣ. ನಿಮ್ಮ ಮನೆಗೆ ನಾನು ಬರುತ್ತೇನೆ, ನೀವು ಏನು ಮಾಡಿ ಎಂದು ಹೇಳುತ್ತಿರೋ ಆದನ್ನು ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಮಾಡುತ್ತೇನೆ. ಕ್ಷೇತ್ರದ ಜನತೆ ಎದುರು ಮೊದಲು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದು, ಆ ಬಳಿಕ ದೆಹಲಿಯಲ್ಲಿ ಸ್ವೀಕಾರ ಮಾಡುತ್ತಿದ್ದೇನೆ ಎಂದರು.