ಮಂಡ್ಯ: ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿಯ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಆಪ್ತ ಹನಕೆರೆ ಶಶಿಕುಮಾರ್ ಅವರ ಮುಕ್ಕಾಲು ಎಕರೆ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿಯೇ ಮನೆ ನಿರ್ಮಾಣ ಮಾಡಿ ವಾಸವಿರುವುದಾಗಿ ಮಾತು ನೀಡಿದ್ದರು. ಅದರಂತೆ ಮುಕ್ಕಾಲು ಎಕರೆ ಜಮೀನು ಖರೀದಿಸಲಾಗಿದ್ದು, ಇನ್ನು 6 ತಿಂಗಳಲ್ಲಿಯೇ ಮನೆ ನಿರ್ಮಾಣ ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಈಗಾಗಲೇ ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿರುವ ಸುಮಲತಾ ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
6-7 ತಿಂಗಳಲ್ಲಿ ಮನೆ ನಿರ್ಮಿಸಿ ಅಲ್ಲಿಂದಲೇ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸುವ ಚಿಂತನೆ ನಡೆಸಲಾಗುತ್ತಿದೆ. ಸ್ವಂತ ಮನೆ ನಿರ್ಮಾಣದಲ್ಲಿ ಪುತ್ರ ಹಾಗೂ ನಟ ಅಭಿಷೇಕ್ ಅಂಬರೀಶ್ ರಾಜಕೀಯ ಭವಿಷ್ಯ ಅಡಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಹಲವು ದಿನಗಳ ಹಿಂದೆ ಮದ್ದೂರಿಗೆ ಭೇಟಿ ನೀಡಿದ್ದ ಅಭಿಷೇಕ್ ರಾಜಕೀಯ ಪ್ರವೇಶದ ಸುಳಿವು ನೀಡಿದ್ದರು. ಮದ್ದೂರಿನಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರು – ಸಹೋದ್ಯೋಗಿಗಳಿಗೆ ಸಿಎಂ ಮೆಚ್ಚುಗೆ
ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟೂರು ಕೂಡ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮವಾಗಿದ್ದು, ತಂದೆ ಹುಟ್ಟೂರು ಕ್ಷೇತ್ರದಿಂದಲೇ ಮಗನ ಸ್ಪರ್ಧೆಗೆ ಸಿದ್ಧತೆ ನಡೆಸಲು ಮನೆ ಕಟ್ಟುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‍ನನ್ನು ಕಣಕ್ಕಿಸಲು ಸುಮಲತಾ ರಾಜಕೀಯ ಸಿದ್ಧತೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕಾರಣಕ್ಕೆ ಜಿಲ್ಲಾಕೇಂದ್ರ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡದೆ ಹನಕೆರೆಯಲ್ಲೇ ಸ್ವಂತ ಮನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಸುಮಲತಾ ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದ್ದರೂ ಇದರ ಹಿಂದೆ ರಾಜಕೀಯ ತಂತ್ರವೂ ಅಡಗಿದೆ.