ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ ಆಗಿದೆ.
ಜಾಮೀನು ಅರ್ಜಿ ವಜಾಗೊಳಿಸಿ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲೂ ಜಾಮೀನು ಅರ್ಜಿ ವಜಾ ಆಗಿತ್ತು.
ಅನಾರೋಗ್ಯದ ಕಾರಣ ನೀಡಿ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೆ ಜಾಮೀನು ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯವು ವಜಾ ಮಾಡಿದೆ. ಕಳೆದ 5 ವರ್ಷ 11 ತಿಂಗಳಿಂದ ಇಮ್ಮಡಿ ಮಹದೇವಸ್ವಾಮಿ ಜೈಲಿನಲ್ಲಿದ್ದಾರೆ.
ಮಹದೇಶ್ವರ ಬೆಟ್ಟ ಸಾಲೂರು ಮಠದ ಕಿರಿಯ ಸ್ವಾಮೀಜಿ ಆಗಿದ್ದ ಇಮ್ಮಡಿ ಮಹದೇವಸ್ವಾಮಿ, ಸುಳ್ವಾಡಿ ಕಿಚ್‌ಗುತ್ ಮಾರಮ್ಮ ದೇವಸ್ಥಾನದ ಆಡಳಿತದಲ್ಲಿ ಅಧಿಪತ್ಯ ಸ್ಥಾಪಿಸಲು ಪಿತೂರಿ ನಡೆಸಿದ್ದರು. ಮತ್ತೊಂದು ಗುಂಪಿಗೆ ಕೆಟ್ಟ ಹೆಸರು ತರಲು ಪ್ರಸಾದಕ್ಕೆ ವಿಷ ಬೆರೆಸಿದ್ದ ಆರೋಪ ಕೇಳಿಬಂದಿತ್ತು.
2018ರ ಡಿ.14 ರಲ್ಲಿ ನಡೆದ ಘಟನೆಯಲ್ಲಿ 17 ಮಂದಿ ಭಕ್ತರು ಮೃತಪಟ್ಟಿದ್ದರು. 127 ಮಂದಿ ಅಸ್ವಸ್ಥಗೊಂಡಿದ್ದರು. ಸದ್ಯ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ನಾಲ್ಕನೇ ಆರೋಪಿ ತಂಬಡಿ ದೊಡ್ಡಯ್ಯ ಮೈಸೂರಿನ ಜೈಲಿನಲ್ಲಿದ್ದಾರೆ.