ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದು, ಇದೀಗ ಗರ್ಭಿಣಿಯೊಬ್ಬರಿಗೆ ಗರ್ಭಪಾತವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು. ಸ್ಥಳೀಯ ನಿವಾಸಿ ಸೌಂದರ್ಯ ಅವರು ಮಾರಮ್ಮ ದೇವಿಗೆ ಹರಕೆ ಹೊತ್ತ ಬಳಿಕ ಗರ್ಭಿಣಿಯಾಗಿದ್ದು, 3 ತಿಂಗಳು ಆಗಿತ್ತು. ಆದ್ರೆ ಇದೀಗ ಅದೇ ತಾಯಿಯ ಸನ್ನಿಧಿಯಲ್ಲಿ ವಿಷ ಪ್ರಸಾದ ಸೇವಿಸಿದ್ದರಿಂದ ಅವರಿಗೆ ಗರ್ಭಪಾತವಾಗಿದೆ. ಈ ಮೂಲಕ ಮಾರಮ್ಮ ದೇವಿ ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡಿದ್ದಾಳೆ ಅಂತ ಸೌಂದರ್ಯ ಕಣ್ಣೀರು ಹಾಕುತ್ತಿದ್ದಾರೆ.
Advertisement
Advertisement
ಹರಕೆ ಏನಿತ್ತು?
ನಾನು ಗರ್ಭಿಣಿಯಾದ್ರೆ ಪ್ರತಿ ವಾರ ಸನ್ನಿಧಿಗೆ ಬರುತ್ತೇನೆ ಎಂದು ಸೌಂದರ್ಯ ಹರಕೆ ಹೊತ್ತಿದ್ದರು. ಅಂತೆಯೇ ಅವರು ಪ್ರತೀ ವಾರ ಮಾರಮ್ಮನ ಸನ್ನಿಧಿಗೆ ಬರುತ್ತಿದ್ದರು. ಹೀಗೆ ಡಿಸೆಂಬರ್ 14ರಂದು ಸೌಂದರ್ಯ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಅಲ್ಲಿ ಕೊಟ್ಟ ಪ್ರಸಾದವನ್ನು ಸ್ವೀಕರಿಸಿದ್ದರು. ಹೀಗಾಗಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡ ಅವರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಂತವೆಂದರೆ ಸೌಂದರ್ಯ ವಿಷ ಪ್ರಸಾದ ಸೇವಿಸಿದ್ದರಿಂದ ಹೊಟ್ಟೆಯಲ್ಲಿನ ಭ್ರೂಣ ಸಾವನ್ನಪ್ಪಿದ್ದು, ಅವರಿಗೆ ಗರ್ಭಪಾತವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.
Advertisement
Advertisement
ಡಿಸೆಂಬರ್ 14 ರಂದು ದೇವಸ್ಥಾನದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವಿತ್ತು. ಹೀಗಾಗಿ ಭಕ್ತರೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಟೊಮೆಟೋ ಬಾತನ್ನು ಅಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗಿತ್ತು. ಆದ್ರೆ ಈ ಪ್ರಸಾದದಲ್ಲಿ ವಿಷ ಬೆರೆಸಲಾಗಿದ್ದು, ತಿಂದವರೆಲ್ಲ ಆಸ್ಪತ್ರೆಗೆ ಸೇರಿದ್ದರು. ಅದರಲ್ಲಿ 17 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಉಳಿದವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv