ಬೆಳಗಾವಿ: ರೈತರು ಮತ್ತು ಕಾರ್ಖಾನೆ ಮಾಲೀಕರ(Sugarcane Factory Owners) ನಡುವೆ ಸಮನ್ವಯತೆ ತರುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅಂತಿಮ ದರ ನಿಗದಿಯು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ.
ಬೆಳಗಾವಿಯಲ್ಲಿ ತಡರಾತ್ರಿಯವರೆಗೂ ನಡೆದ ಸತತ ಮ್ಯಾರಥಾನ್ ಸಭೆಯ ಬಳಿಕ ಬೆಂಗಳೂರಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಂಧಾನ ಪ್ರಕ್ರಿಯೆಯ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿಗೆ ನಿರ್ಗಮಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರೈತರು(Farmers) ದೇಶದ ಆಸ್ತಿ, ಯಾವುದೇ ಕಾರಣಕ್ಕೂ ರೈತರನ್ನು ಕೈಬಿಡಬಾರದು, ಅವರನ್ನು ಬದುಕಿಸಬೇಕು. ಅವರು ಸೂಕ್ತ ದರ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಿಳಂಬವಾದರೆ ಗದ್ದೆಗಳಲ್ಲಿ ಕಬ್ಬು ಒಣಗಿ ಹೋಗುವ ಆತಂಕವಿದೆ. ಹೀಗಾಗಿ ತಕ್ಷಣ ಕ್ರಷಿಂಗ್ ಆರಂಭವಾಗಬೇಕು ಎಂದು ಹೇಳಿದರು.
ರಾಜ್ಯದ ಸುಮಾರು 80 ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ನೈಜ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕಳೆದ 10 ವರ್ಷಗಳಿಂದ ಸಕ್ಕರೆ ಮಾರಾಟ ದರ ಹೆಚ್ಚಳವಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಖಾನೆಗಳಿಗೆ ಸುಲಭವಾಗಿ ಸಾಲ ನೀಡುತ್ತಿಲ್ಲ. ಹೀಗಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಹಕಾರ ವಲಯದಿಂದ ಸಾಲ ತಂದು ಕಾರ್ಖಾನೆ ನಡೆಸುವ ಪರಿಸ್ಥಿತಿ ಇದೆ ಎಂದು ಮಾಲೀಕರು ತಿಳಿಸಿದ್ದಾರೆ. ಮಂಡ್ಯದಲ್ಲಿ ರೈತರೇ ಕಾರ್ಖಾನೆ ನಡೆಸಿದ ಇತಿಹಾಸವಿದೆ. ರೈತರಿಲ್ಲದೆ ಕಾರ್ಖಾನೆ ಇಲ್ಲ, ಕಾರ್ಖಾನೆಗಳಿಲ್ಲದೆ ರೈತರಿಲ್ಲ. ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರಬೇಕು ಎಂದರು. ಇದನ್ನೂ ಓದಿ: ಕಬ್ಬು ದರ ಸಂಘರ್ಷ| ಸತತ 13 ಗಂಟೆಗಳ ಸಭೆ ಬಳಿಕ ತಾತ್ಕಾಲಿಕ ಸಂಧಾನ – ಅಂತಿಮ ನಿರ್ಧಾರಕ್ಕೆ 2 ದಿನಗಳ ಗಡುವು
ಕಬ್ಬು ಬೆಳೆಗಾರರಿಗೆ ನ್ಯಾಯದ ಭರವಸೆ; ಎರಡು ದಿನಗಳಲ್ಲಿ ಅಂತಿಮ ನಿರ್ಧಾರ
ನನ್ನ ಮಧ್ಯಸ್ಥಿಕೆಯಲ್ಲಿ ಕಬ್ಬು ಬೆಳೆಗಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ನಿಗದಿಪಡಿಸಿದ ಬಳಿಕ, ಅದರ ಆಧಾರದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ದರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಇನ್ನೆರಡು ದಿನಗಳಲ್ಲಿ ತಮ್ಮ ಅಂತಿಮ ನಿಲುವು ಪ್ರಕಟಿಸಲಿದ್ದಾರೆ.
ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕ್ಯೂಟ್ ಹೌಸ್ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆಗೆ ಇಡೀ ದಿನ ಐದು ಸುತ್ತಿನ ಸರಣಿ ಸಭೆಗಳನ್ನು ನಡೆಸಲಾಯಿತು. ಈ ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ರೈತರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರು ಕೇಂದ್ರ ಸಚಿವರ ಜತೆ ಚರ್ಚೆ ಮಾಡಿದ್ದು, ರೈತರಿಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಬ್ಬಿನ ಎಂಎಸ್ಪಿ ನಿಗದಿ ಬಳಿಕ ಕಾರ್ಖಾನೆಗಳು ರೈತರಿಗೆ ಎಷ್ಟು ದರ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ.
ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಮುಖ್ಯ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರು ತಮ್ಮಲ್ಲೇ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜೊತೆಗೆ ಅವರೂ ಮಾತನಾಡುತ್ತಾರೆ, ನಾವೂ ಮಾತನಾಡುತ್ತೇವೆ.
ಸದ್ಯ ಈ ಹೋರಾಟ ಸುಖಾಂತ್ಯ ಕಂಡಿದೆ. ನಾವು ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ. ಕೇಂದ್ರ ಸಚಿವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂಬ ಭರವಸೆ ರೈತರಿಗಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ರೈತರಿಲ್ಲದೆ ನಾವಿಲ್ಲ, ನಾವಿಲ್ಲದೆ ರೈತರಿಲ್ಲ. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ.
— DK Shivakumar (@DKShivakumar) October 27, 2026
ಸಕ್ಕರೆ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಳದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಸಿಎಂ ಸಕ್ಕರೆ ಬೆಲೆ ಏರಿಕೆಯ ಅಗತ್ಯತೆ ಬಗ್ಗೆ ಜೋಶಿ(Pralhad Joshi) ಅವರಿಗೆ ಸಂಪೂರ್ಣ ಮನವರಿಕೆಯಾಗಿದೆ. ಅವರು ಬೆಲೆ ಏರಿಕೆಯ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡದ ಕಾರಣ ಹೆಚ್ಚಿನ ಬಡ್ಡಿಗೆ ಸಾಲ ತಂದು ಕಾರ್ಖಾನೆ ನಡೆಸುವುದು ಅಸಾಧ್ಯವಾಗಿದೆ. ಹೀಗಾದರೆ ನಾವು ಕಾರ್ಖಾನೆಗಳನ್ನೇ ಬಿಟ್ಟುಕೊಡುತ್ತೇವೆ ಎಂದು ಮಾಲೀಕರು ತಮ್ಮ ನೈಜ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ಎಲ್ಲಾ ವಾಸ್ತವಾಂಶಗಳನ್ನು ರೈತ ಮುಖಂಡರ ಮುಂದಿಟ್ಟು ಚರ್ಚಿಸಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕಬ್ಬಿಗೆ ಹೆಚ್ಚಿನ ದರ ನೀಡಲಾಗುತ್ತಿರಬಹುದು, ಆದರೆ ನಮ್ಮ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 7,000 ದಿಂದ 8,000 ಕೋಟಿ ರೂ. ಹೊರೆಯಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಹಾಗೂ ಕರೆಂಟ್ಗೆ ಸರ್ಕಾರ ಅಪಾರ ಹಣ ವ್ಯಯಿಸುತ್ತಿರುವ ವಿಚಾರವನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಸಕ್ಕರೆ ಮಾರಾಟವನ್ನು ಎರಡು ಪ್ರತ್ಯೇಕ ವಿಭಾಗಗಳನ್ನಾಗಿ (ವಾಣಿಜ್ಯ/ಕೈಗಾರಿಕಾ ಬಳಕೆ ಮತ್ತು ಗೃಹ ಬಳಕೆ) ವಿಂಗಡಿಸಿ ದರ ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಸಕ್ಕರೆಗೆ ಏನು ದರ ನಿಗದಿ ಮಾಡುತ್ತದೆಯೋ, ಅದರ ಆಧಾರದ ಮೇಲೆ ಕಬ್ಬಿನ ಅಂತಿಮ ದರವನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಈ ಹಂತದಲ್ಲಿ ನಾನು ಯಾವುದೇ ನಿರ್ದಿಷ್ಟ ದರವನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ನುಡಿದರು.
ಸದ್ಯ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಸಂಘಟನೆಗಳು ಎರಡು ದಿನಗಳ ಕಾಲಾವಕಾಶ ಪಡೆದಿದ್ದು, ಕೇಂದ್ರ ಸರ್ಕಾರದ ಸ್ಪಷ್ಟನೆಯ ನಂತರ ಬೆಳಗಾವಿಯಲ್ಲಿ ನಡೆಯಲಿರುವ ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.
