ಕನ್ನಡದಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಧಾಮೂರ್ತಿ

Public TV
1 Min Read
Sudha Murty Rajyasabha Oath Taking

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದ ರಾಜ್ಯಸಭೆಗೆ (Rajya Sabha) ನಾಮನಿರ್ದೇಶನಗೊಂಡಿದ್ದ ಇನ್ಫೋಸಿಸ್ (Infosys) ಮುಖ್ಯಸ್ಥ ನಾರಾಯಣ ಮೂರ್ತಿ ಪತ್ನಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರಿಗೆ ಪ್ರಮಾಣ ವಚನ ಭೋಧಿಸಿದರು.

ಜಗದೀಪ್ ಧನಕರ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡಾ ಭಾಗಿಯಾಗಿದ್ದು ವಿಶೇಷವಾಗಿತ್ತು. ಕೇಂದ್ರ ಸಚಿವ ಪಿಯೂಷ್ ಗೋಯಲ್, ನಂದನ್ ನೀಲಕೇಣಿ ಈ ವೇಳೆ ಉಪಸ್ಥಿತರಿದ್ದರು.

Sudha Murty

ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದಂದು ಸಮಾಜಸೇವಕಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ನರೇಂದ್ರ ಮೋದಿ, ಭಾರತದ ರಾಷ್ಟ್ರಪತಿಗಳು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದರು. ಸಮಾಜಸೇವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಾರಿ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಲಿದೆ ಎಂದು ಹೇಳಿದ್ದರು.

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿರುವ ಸುಧಾಮೂರ್ತಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಅದರಲ್ಲಿ ಹೆಚ್ಚಾಗಿ ಮಕ್ಕಳ ಕುರಿತಾಗಿನ ಕೃತಿಗಳಾಗಿವೆ. 73 ವರ್ಷದ ಮೂರ್ತಿ ಅವರು ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಪುರಸ್ಕೃತರಾಗಿದ್ದಾರೆ.

Share This Article