ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾ ಮೂರ್ತಿ, ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್. ಎನ್. ಸುರೇಶ್, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕಾರ್ಯದರ್ಶಿ ಶಿವಯೋಗಿ ಕಳಸದ್, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸುಧಾಮೂರ್ತಿ ಅವರು ಸರ್ಕಾರಕ್ಕೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಕೆಲ ಸಲಹೆಗಳನ್ನು ನೀಡಿದರು.
Advertisement
Advertisement
ಪ್ರಾಚೀನ ಸ್ಮಾರಕಗಳ ರಕ್ಷಣೆ ಜೊತೆಗೆ ಇತಿಹಾಸ ತಿಳಿಸುವ ಕೆಲಸ ಆಗಬೇಕಿದೆ. ರಾಜ್ಯದ ಪ್ರಾಚೀನ ದೇವಸ್ಥಾನಗಳ ಮುಂದೆ ಸರ್ಕಾರದ ಕ್ರಮಗಳ ಬಗ್ಗೆ ನಾಮಫಲಕ ಇರುತ್ತದೆ, ಆದರೆ ದೇವಸ್ಥಾನ ನಿರ್ಮಿಸಿದವರು ಯಾರು? ನಿರ್ಮಿಸಿದ ರಾಜರ ಹೆಸರು? ಈ ರೀತಿಯ ಇತಿಹಾಸ ಹೇಳುವ ನಾಮಫಲಕಗಳು ಇಲ್ಲ. ಹೀಗಾಗಿ ಪ್ರಾಚೀನ ಸ್ಮಾರಕಗಳ ಇತಿಹಾಸವನ್ನು ತಿಳಿಸುವ ನಾಮಫಲಕಗಳನ್ನು ಹಾಕುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಸಭೆಯಲ್ಲಿ ಸುಧಾ ಮೂರ್ತಿ ಸಲಹೆ ನೀಡಿದರು.
Advertisement
Advertisement
ರಾಜ್ಯದ ಹಲವು ದೇವಸ್ಥಾನಗಳ ಹೆಸರು ಬದಲಾಯಿಸುವಂತೆ ಸರ್ಕಾರಕ್ಕೆ ಸುಧಾ ಮೂರ್ತಿ ಸಲಹೆ ನೀಡಿದ್ದಾರೆ. ಕೆಲವು ದೇವಸ್ಥಾನಗಳಿಗೆ ರೂಢಿಯಿಂದ ಬಂದಿರುವ ಹೆಸರುಗಳಿವೆ. ಹುಚ್ಚಮಲ್ಲಿ ಗುಡಿ, ಗೌಡರ ಗುಡಿ ಹೀಗೆ ರೂಢಿಯಿಂದ ದೇವಸ್ಥಾನಗಳಿಗೆ ಹೆಸರು ಬಂದಿವೆ. ಇತಿಹಾಸಕಾರರು ಇಂತಹ ದೇವಸ್ಥಾನಗಳ ಇತಿಹಾಸ ಪತ್ತೆಮಾಡಿ ದೇವಸ್ಥಾನಗಳ ನಿಜವಾದ ಹೆಸರು ಇಡಬೇಕು. ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಕಲೆಗಳಿವೆ. ಕಲೆಗಳ ಉಳಿಸುವಿಕೆ ಅವಶ್ಯಕವಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಸುಧಾ ಮೂರ್ತಿ ಅವರು ಹೇಳಿದರು.