ಕಿಚ್ಚ ಸುದೀಪ್ (Sudeep) ಬಿಜೆಪಿಗೆ (BJP) ಸೇರ್ಪಡೆ ಆಗಲಿದ್ದಾರೆ ಎನ್ನುವ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮತ್ತು ಆತಂಕ ಎರಡನ್ನೂ ಮೂಡಿಸಿದೆ. ಈ ಕುರಿತಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ನೆಚ್ಚಿನ ನಟ ಈಗಾಗಲೇ ತಮ್ಮದೇ ಟ್ರಸ್ಟ್ ಮೂಲಕ ಸಮಾಜಸೇವೆ ಆರಂಭಿಸಿದ್ದಾರೆ. ರಾಜಕಾರಣಕ್ಕೆ ಹೋದರೆ ಮತ್ತಷ್ಟು ಸಹಾಯ ಮಾಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಅವರು ರಾಜಕೀಯ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ಈ ನಡುವೆ ಅನೇಕ ಅಭಿಮಾನಿಗಳು ಡಾ.ವಿಷ್ಣುವರ್ಧನ್ (Vishnuvardhan) ಅವರನ್ನು ನೆನಪಿಸಿಕೊಂಡಿದ್ದಾರೆ. ವಿಷ್ಣು ಕಾಲವಾದ ನಂತರ ವಿಷ್ಣುವರ್ಧನ್ ಅವರ ಸಾಕಷ್ಟು ಅಭಿಮಾನಿಗಳು ಕಿಚ್ಚ ಸುದೀಪ್ ಬೆಂಬಲಕ್ಕೆ ನಿಂತಿದ್ದರು. ಸುದೀಪ್ ಕೂಡ ವಿಷ್ಣುವರ್ಧನ್ ಅವರ ಹೆಸರಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಹೋರಾಟಕ್ಕೂ ಬಂದಿದ್ದರು. ಈ ಎಲ್ಲ ಕಾರಣದಿಂದಾಗಿ ವಿಷ್ಣು ಅಭಿಮಾನಿಗಳು ಸುದೀಪ್ ಅಭಿಮಾನಿಗಳಾಗಿಯೂ ಇದ್ದರು. ರಾಜಕೀಯ ನಡೆಗಾಗಿ ಕೊಂಚ ಬೇಸರ ವ್ಯಕ್ತ ಪಡಿಸಿದ್ದಾರೆ ವಿಷ್ಣು ಅಭಿಮಾನಿಗಳು.
ಡಾ.ವಿಷ್ಣುವರ್ಧನ್ ಅವರು ಯಾವುದೇ ಕಾರಣಕ್ಕೂ ರಾಜಕಾರಣ ಮಾಡಲಿಲ್ಲ. ಯಾವ ಪಕ್ಷದ ಪರವಾಗಿಯೂ ಅವರು ಮಾತನಾಡಲಿಲ್ಲ. ಅವರಂತೆಯೇ ಸುದೀಪ್ ಕೂಡ ಇರಬೇಕು ಎನ್ನುವುದು ನಮ್ಮ ಅಭಿಪ್ರಾಯ. ನಾವು ನಿಮ್ಮಲ್ಲಿ ವಿಷ್ಣುದಾದಾ ಅವರನ್ನು ಕಾಣುತ್ತಿದ್ದೇವೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಬಿಜೆಪಿ ಸೇರುವ ವಿಚಾರವಾಗಿ ಸುದೀಪ್ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಕೆಲವು ವಿಚಾರಗಳನ್ನು ಸದ್ಯ ಹೇಳುವುದು ಕಷ್ಟ. ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಗೆ ಆಹ್ವಾನಿಸಿದ್ದಾರೆ. ನಾನು ಹೋಗುತ್ತಿದ್ದೇನೆ. ಅಲ್ಲೇ ಹಲವು ವಿಚಾರಗಳನ್ನು ಮಾತನಾಡುತ್ತೇನೆ’ ಎಂದಿದ್ದಾರೆ ಸುದೀಪ್. ಈ ಸಂದರ್ಭದಲ್ಲಿ ಅವರು ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘ಬಿಜೆಪಿ ಜೊತೆಗಿನ ಸಂಬಂಧವನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೇನೆ. ಆದರೆ, ಈ ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ’ ಎಂದಿದ್ದಾರೆ ಸುದೀಪ್.