ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ದೇಸಾದ್ಯಂತ ಅಗಾಧ ಕಾತರಕ್ಕೆ ಕಾರಣವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ತೆರೆ ಕಂಡಿದೆ. ಈ ಬಾರಿ ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಜೋಡಿ ಬೆರಗಾಗಿಸುವಂಥಾ ಕಮಾಲ್ ಸೃಷ್ಟಿಸುತ್ತಾರೆಂಬ ಭರವಸೆಯೂ ಎಲ್ಲಡೆ ಮೂಡಿಕೊಂಡಿತ್ತು. ಅದಕ್ಕೆ ಎಲ್ಲ ದಿಕ್ಕಿನಲ್ಲಿಯೂ ಪೂರಕವಾಗಿರುವಂತೆಯೇ ಪೈಲ್ವಾನ್ ಪ್ರೇಕ್ಷಕರ ಮುಂದೆ ಬಂದಿದ್ದಾನೆ. ಎಲ್ಲಿಯೂ ಬಿಗುವು ಕಳೆದುಕೊಳ್ಳದ ಕಥೆ, ಪ್ರತೀ ಫ್ರೇಮಿನಲ್ಲಿಯೂ ಕಣ್ಣಿಗೆ ಹಬ್ಬ ಅನ್ನಿಸೋ ದೃಷ್ಯ ವೈಭವ, ಮೈ ನವಿರೇಳಿಸೋ ಸಾಹಸ ಸನ್ನಿವೇಶ ಮತ್ತು ಆಹ್ಲಾದಕರ ಪ್ರೇಮ… ಇವಿಷ್ಟು ಅಂಶಗಳೊಂದಿಗೆ ನಿರ್ದೇಶಕ ಕೃಷ್ಣ ಪೈಲ್ವಾನನನ್ನು ಪೊಗದಸ್ತಾಗಿಯೇ ಅಖಾಡಕ್ಕಿಳಿದಿದ್ದಾರೆ.
ನಿರ್ದೇಶಕ ಕೃಷ್ಣ ಹಲವಾರು ಕೊಂಬೆ ಕೋವೆಗಳ ಸಂಕೀರ್ಣ ಕಥೆಯನ್ನು ಯಾವ ಗೊಂದಲಕ್ಕೂ ಆಸ್ಪದವಿಲ್ಲದಂತೆ, ಕ್ಷಣ ಕ್ಷಣವೂ ಕುತೂಹಲ ಕೊತಗುಡುವಂತೆ ಕಟ್ಟಿಕೊಟ್ಟಿದ್ದಾರೆ. ಕಿಚ್ಚಾ ಸುದೀಪ್ ಅನಾಥ ಹುಡುಗನಾಗಿ, ಅಖಾಡಕ್ಕಿಳಿಯೋ ಜಟ್ಟಿಯಾಗಿ, ಅಪ್ರತಿಮ ಪ್ರೇಮಿಯಾಗಿಯೂ ಕೃಷ್ಣನ ಪಾತ್ರದಲ್ಲಿ ಮುದ ನೀಡಿದ್ದಾರೆ. ಈ ಕಥೆ ತೆರೆದುಕೊಳ್ಳೋದೇ ಓರ್ವ ಅನಾಥ ಹುಡುಗನಿಂದ. ಚಿಕ್ಕಂದಿನಲ್ಲಿಯೇ ಎಲ್ಲ ಬಂಧಗಳನ್ನೂ ಕಳೆದುಕೊಂಡು ತಬ್ಬಲಿಯಾಗಿದ್ದ ಹುಡುಗ ಕೃಷ್ಣನಿಗೆ ಆಶ್ರಯ ನೀಡುವಾತ ಸರ್ಕಾರ್. ಈ ಸರ್ಕಾರ್‍ನದ್ದು ಪೈಲ್ವಾನರ ಮನೆತನ. ಕಟ್ಟುಮಸ್ತಾದ ಕೃಷ್ಣನನ್ನು ಮಗನಂತೆಯೇ ಪೊರೆಯೋ ಸರ್ಕಾರ್ ಪಾಲಿಗೆ ಆತನನ್ನು ಪೈಲ್ವಾನನಾಗಿ ರೂಪಿಸೋದೊಂದೇ ಗುರಿಯಾಗುತ್ತದೆ.
ತನ್ನ ತಂದೆಯಂಥಾ ಸರ್ಕಾರ್ ಮತ್ತು ಪೈಲ್ವಾನನಾಗೋ ಕನಸುಗಳೇ ಕೃಷ್ಣನ ಜಗತ್ತಾಗಿ ಬಿಡುತ್ತದೆ. ಈ ಸರ್ಕಾರ್ ಮತ್ತು ಕೃಷ್ಣ ಇಬ್ಬರೂ ಸೇರಿ ಒಂದೇ ಕನಸು ಕಂಡು ಮುಂದುವರೆಯುವಾಗಲೇ ಕಿಚ್ಚನ ಬಾಳಲ್ಲಿ ಪ್ರೀತಿಯ ಬೆಳಕು ಮೂಡಿಕೊಳ್ಳುತ್ತೆ. ರುಕ್ಮಿಣಿ ಎಂಬ ಬ್ಯಸಿನೆಸ್‍ಮನ್ ಮಗಳ ಮೋಹಕ್ಕೆ ಬೀಳೋ ಕಿಚ್ಚನ ಗಮನ ಕುಸ್ತಿಯಿಂದ ಬೇರೆಡೆಗೆ ಹೊರಳಿಕೊಂಡಿದ್ದ ಸರ್ಕಾರ್ ಮನಸು ಕೆಡಿಸುತ್ತೆ. ಇದುವೇ ಜಗತ್ತೇ ಆಗಿದ್ದ ಸಾಕುತಂದೆಯಿಂದಲೂ ಕಿಚ್ಚನನ್ನು ದೂರಾಗಿಸುತ್ತೆ. ಆ ನಂತರದಲ್ಲಿ ಏನಾಗುತ್ತದೆ ಅನ್ನೋದನ್ನು ಥೇಟರಿನಲ್ಲಿಯೇ ನೋಡಿದರೆ ಚೆನ್ನ.
ಇಡೀ ಸಿನಿಮಾ ಒಂದೇ ವೇಗದಲ್ಲಿ ಚಲಿಸುತ್ತದೆ ಅನ್ನೋದು ನಿಜವಾದ ಪ್ಲಸ್ ಪಾಯಿಂಟ್. ಕಿಚ್ಚ ಸುದೀಪ್ ಈ ಸಿನಿಮಾಗಾಗಿ ಅದೆಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದು ಕುಸ್ತಿ ಅಖಾಡದಲ್ಲಿ, ಬಾಕ್ಸಿಂಗ್ ರಿಂಗ್‍ನೊಳಗೆ ಸ್ಪಷ್ಟವಾಗಿಯೇ ಗೊತ್ತಾಗುವಂತಿದೆ. ಸಾಮಾನ್ಯವಾಗಿ ಪರಭಾಷಾ ನಾಯಕಿಯರು ಗ್ಲಾಮರ್‍ಗಷ್ಟೇ ಸೀಮಿತವಾಗುತ್ತಾರೆ. ಆದರೆ ನಾಯಕಿ ಆಕಾಂಕ್ಷಾ ಸಿಂಗ್ ಗಟ್ಟಿತನ ಹೊಂದಿರೋ ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಸುನೀ ಶೆಟ್ಟಿ ತಮ್ಮ ಪಾತ್ರಕ್ಕೆ ಪೈಲ್ವಾನ್ ಮನೆತನದ ಗತ್ತು ಗೈರತ್ತುಗಳನ್ನು ಆವಾಹಿಸಿಕೊಂಡಂತೆ ಜೀವ ತುಂಬಿದ್ದಾರೆ. ಎಲ್ಲ ಪಾತ್ರಗಳೂ ಕೂಡಾ ಇಂಥಾದ್ದೇ ಅಮೋಘ ನಟನೆಯಿಂದ ಕಥೆಗೆ ಜೊತೆಯಾಗಿ ಸಾಗಿವೆ.
ಪೈಲ್ವಾನ್ ಕೃಷ್ಣ ಪೈಲ್ವಾನನನ್ನು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಕಾಲೂರಿ ಕಾದಾಡುವಷ್ಟು ಶಶಕ್ತವಾಗಿ ಕಟ್ಟಿ ಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳನ್ನೇ ಮೀರಿಸುವ ದೃಷ್ಯ ವೈಭವ, ನಿರೂಪಣೆಯಲ್ಲಿನ ಕಲಾತ್ಮಕತೆ ಮತ್ತು ಸುದೀಪ್ ಅವರ ನಟನೆಯ ಖದರ್‍ನಿಂದ ಪೈಲ್ವಾನ್ ಕಳೆಗಟ್ಟಿಕೊಂಡಿದೆ. ಅವರು ಜಟ್ಟಿಯಾಗಿ ಕಣಕ್ಕಿಳಿದು ಮೈನವಿರೇಳಿಸುತ್ತಾರೆ, ಭಾವನಾತ್ಮಕ ದೃಷ್ಯಗಳಲ್ಲಿ ಮನಸು ತೊಯ್ದಾಡುವಂತೆ ಮಾಡುತ್ತಾರೆ. ಒಟ್ಟಾರೆಯಾಗಿ ಎಲ್ಲ ಶೇಡುಗಳಲ್ಲಿಯೂ ಸುದೀಪ್ ಅದ್ಭುತವೆಂಬಂಥಾ ನಟನೆಯನ್ನೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಪೈಲ್ವಾನ್ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಚಿತ್ರ.
ರೇಟಿಂಗ್: 4/5