ರಾಯಚೂರು : ಬಡ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಸಿಗಲಿ ಅಂತ ಜಾರಿಗೆ ತಂದ ಆರ್‍ಟಿಇ ಕಾಯ್ದೆ ಸೌಲಭ್ಯ ರಾಯಚೂರಿನ ಮಕ್ಕಳಿಗೆ ಸಿಕ್ಕರೂ ಸಿಗದಂತಾಗಿದೆ.
ಮಕ್ಕಳು ಸೀಟು ಪಡೆದ ರಾಯಚೂರಿನ ಪಂಚಲಿಂಗೇಶ್ವರ ಕಾಲೋನಿಯ ನಿಸರ್ಗ ವಿದ್ಯಾಲಯ ಶಾಲೆ ಏಕಾಏಕಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆ ಮತ್ತೊಂದು ಖಾಸಗಿ ಶಾಲೆಯನ್ನ ಸೂಚಿಸಿತ್ತು. ಆದ್ರೆ ಇಲಾಖೆ ಸೂಚಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಆರ್‍ಟಿಇ ಅನುದಾನವಿಲ್ಲದ ಕಾರಣ ಫೀಸ್ ಕಟ್ಟದಿದ್ದರೆ ಮಕ್ಕಳಿಗೆ ಪ್ರವೇಶ ನೀಡಲ್ಲ ಅಂತ ಪಟ್ಟುಹಿಡಿದಿರೋದು ಕಾಯ್ದೆ ವೈಫಲ್ಯಕ್ಕೆ ಕಾರಣವಾಗಿದೆ.
Advertisement
Advertisement
ಆರ್‍ಟಿಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈಗ ಕಂಗಾಲಾಗಿದ್ದಾರೆ. ಏಕಾಏಕಿ ಶಾಲೆ ಮುಚ್ಚಿದ್ದರಿಂದ ಇಲ್ಲಿನ ಮಕ್ಕಳ ಪರಸ್ಥಿತಿ ಡೋಲಾಯಮಾನವಾಗಿದೆ. 2013-14 ಹಾಗೂ 2015-16ರ ಸಾಲಿನಲ್ಲಿ ಆರ್‍ಟಿಇ ಅಡಿ ಸೀಟು ಪಡೆದ 13 ವಿದ್ಯಾರ್ಥಿಗಳಿಗೆ ಈಗ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದು ಮುಂದುವರೆಸಲು ಶಿಕ್ಷಣ ಇಲಾಖೆ ಕ್ರಮಕೈಗೊಂಡಿತ್ತು. ಆದ್ರೆ ಆರ್‍ಟಿಇ ಅನುದಾನವಿಲ್ಲದ ಕಾರಣ ಶಾಲಾ ಶುಲ್ಕ 10 ಸಾವಿರದ 400 ರೂಪಾಯಿ ಕೂಡಲೇ ಕಟ್ಟುವಂತೆ ಪೋಷಕರಿಗೆ ಒತ್ತಾಯಿಸಿದೆ.
Advertisement
ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮ್ಮನಿರುವುದರಿಂದ ಮಕ್ಕಳಿಗೆ ನಾವು ಪ್ರವೇಶಾತಿ ಕೊಡಲು ಸಾಧ್ಯವಿಲ್ಲ. ಪೋಷಕರು ಕೂಡಲೇ ಶಾಲಾ ಶುಲ್ಕ ಕಟ್ಟದಿದ್ದರೇ ಮಕ್ಕಳ ಪ್ರವೇಶಾತಿಯನ್ನ ರದ್ದುಗೊಳಿಸುತ್ತೇವೆ ಎಂದು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಮಂಜುಳಾದೇವಿ ಹೇಳಿದ್ದಾರೆ.
Advertisement
ನಿಸರ್ಗ ವಿದ್ಯಾಲಯ ತಮ್ಮ ಸಂಸ್ಥೆಗೆ ಬರುತ್ತಿದ್ದ ಆರ್‍ಟಿಇ ಅನುದಾನವನ್ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ವರ್ಗಾಯಿಸುವಂತೆ ಶಿಕ್ಷಣ ಇಲಾಖೆಗೆ ಈಗಾಗಲೇ ಕೇಳಿಕೊಂಡಿದೆ. ಆದ್ರೆ ಇಲಾಖೆಯ ಸಾಫ್ಟವೇರ್‍ನಲ್ಲಿ ಪ್ರಸಕ್ತ ವರ್ಷದಲ್ಲಿ ನಿಸರ್ಗ ವಿದ್ಯಾಲಯ ಶಾಲೆಯ ಹೆಸರು ಹಾಗೂ ಡೈಸ್ ಸಂಖ್ಯೆಯೇ ಇಲ್ಲ. ಹೀಗಾಗಿ ಶಾಲೆಗೆ ಅನುಧಾನವೂ ಬಿಡುಗಡೆಯಾಗುವುದಿಲ್ಲ. ಈಗ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಭಯಹುಟ್ಟುವಂತೆ ಮಾಡಿದೆ.
ಒಟ್ನಲ್ಲಿ, ದೇವರು ಕೊಟ್ರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೇ ಆರ್‍ಟಿಇ ಅಡಿ ಸೀಟು ಸಿಕ್ಕರೂ ಮಕ್ಕಳಿಗೆ ಶಾಲಾ ಪ್ರವೇಶಾತಿ ಸಿಗುತ್ತಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಬಡ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕಿದೆ. ಸಮಸ್ಯೆಯನ್ನ ಅರಿತು ಕೂಡಲೇ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.