ಕಾರವಾರ: ಸೇವಾದಳದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ದೈಹಿಕ ಶಿಕ್ಷಕರೊಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರಿಂದ ಸುಮಾರು 10 ಕಿ.ಮೀ ದೂರ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಮನೆ ಸೇರಿರುವ ಘಟನೆ ಜಿಲ್ಲೆಯ ಮುಂಡಗೋಡು ಪಟ್ಟಣದ ಕಾತೂರು ತಾಲೂಕಿನಲ್ಲಿ ನಡೆದಿದೆ.
ಕಾತೂರಿನಲ್ಲಿ ತಾಲೂಕು ಮಟ್ಟದ ಸೇವಾದಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದ್ದರಿಂದ ಸರ್ಕಾರಿ ಜೂನಿಯರ್ ಕಾಲೇಜಿನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂದು ಹೋಗಿದ್ದರು. ಹೋಗುವಾಗ ಮಕ್ಕಳನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕ, ವಾಪಾಸ್ ಬರುವಾಗ ಮಕ್ಕಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಮಕ್ಕಳ ಶಿಕ್ಷಕರ ಬಳಿ ಊಟದ ಚೀಟಿಯನ್ನು ನೀಡಲಾಗಿತ್ತು. ಆದ್ರೆ ದೀಪಕ್ ಅವರು ಮಕ್ಕಳ ಊಟದ ಚೀಟಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾರ್ಯಕ್ರಮದಿಂದ ಹಾಗೆಯೇ ಮುಂಡಗೋಡಿಗೆ ತೆರೆಳಿದ್ದಾರೆ. ಇತ್ತ ಮಕ್ಕಳು ಊಟವನ್ನೂ ಮಾಡದೆ ಶಿಕ್ಷಕರು ಬರುತ್ತಾರೆ ಎಂದು ಕಾದು ಕೂತಿದ್ದಾರೆ. ಆದ್ರೆ ಸಂಜೆಯಾದರೂ ಶಿಕ್ಷಕ ಬರದಿದ್ದಾಗ ಮಕ್ಕಳು ಆತಂಕಗೊಂಡಿದ್ದಾರೆ.
ಬಳಿಕ ಮನೆ ಸೇರಲು ಬಸ್ಸಿಗೆ ಹೋಗಲು ಕೈಯಲ್ಲಿ ಹಣವಿಲ್ಲದೆ ನಡೆದುಕೊಂಡೇ ಸುಮಾರು 10 ಕಿ.ಮೀ ದೂರ ಬಂದಿದ್ದಾರೆ. ಬಳಿಕ ಮಕ್ಕಳನ್ನು ನೋಡಿದ ಗ್ರಾಮಸ್ಥರೊಬ್ಬರು ಹಣ ನೀಡಿ ಎಲ್ಲರನ್ನೂ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿಯುತ್ತಿದಂತೆ ಶಿಕ್ಷಕರ ಮೇಲೆ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮರುದಿನ ಶಾಲೆಗೆ ಬಂದು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv