ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಬಾಸುಂಡೆ ಬರುವ ಹಾಗೆ ಹಲ್ಲೆ ಮಾಡಿ ವಿಕೃತಿ ಪ್ರದರ್ಶಿಸಿ ವರ್ಗಾವಣೆಯಾಗಿದ್ದ ಶಿಕ್ಷಕಿಯ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಶುಕ್ರವಾರ ಬೆಳಗ್ಗೆಯಿಂದ ವಿದ್ಯಾರ್ಥಿಗಳ ಮೇಲೆ ವಿಜ್ಞಾನ ಶಿಕ್ಷಕಿ ಅರ್ಚನಾ ಸಾಗರ ಬಾಸುಂಡೆ ಬರುವ ಹಾಗೆ ಕೋಲಿನಿಂದ ಥಳಿಸಿದ್ದ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಂದ ಬೆನ್ನಲ್ಲೇ ಶಾಲೆಗೆ ಚಿಕ್ಕೋಡಿ ಡಿಡಿಪಿಐ ಮೋಹನ ಹಂಚಾಟೆ ಭೇಟಿ ನೀಡಿದ ತಕ್ಷಣ ಶಿಕ್ಷಕಿ ಅರ್ಚನಾ ಸಾಗರ ಅವರನ್ನು ವರ್ಗಾವಣೆ ಮಾಡಲು ಆದೇಶ ಹೊರಡಿಸಿದ್ದರು. ಆದರೆ ಇಂದು ಶಾಲೆಯ ಕೆಲವು ವಿದ್ಯಾರ್ಥಿನಿಯರು ಶಿಕ್ಷಕಿಯನ್ನು ವರ್ಗಾವಣೆ ಮಾಡಬಾರದು ಎಂದು ಪಟ್ಟು ಹಿಡಿದು ಶಾಲಾ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವೈಯಕ್ತಿಕ ಕಾರಣಗಳಿಂದ ಅವರ ಮೇಲೆ ದ್ವೇಷದಿಂದ ಶಿಕ್ಷಕಿ ಮೇಲೆ ಆರೋಪ ಮಾಡಲಾಗಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಸುರೇಶ್ ಅವರ ಮನೆ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರ ಪ್ರತಿಭಟನೆಗೆ ಕೆಲ ಗ್ರಾಮಸ್ಥರು ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದರು. ಅಲ್ಲದೆ ಪ್ರತಿಭಟನೆ ವಾಪಸ್ಸು ಪಡೆಯುವಂತೆ ಮನವಿ ಮಾಡಿದರು.
ಹುಕ್ಕೇರಿ ಬಿಇಓ ಶಿಕ್ಷಕಿ ಅರ್ಚನಾ ಅವರ ವರ್ಗಾವಣೆಯನ್ನು ರದ್ದು ಮಾಡುತ್ತೇವೆ. ಸೋಮವಾರ ಅವರು ಇದೆ ಶಾಲೆಗೇ ಬರುತ್ತಾರೆ ಎಂದು ಭರವಸೆ ನೀಡಿದಾಗ ಮಕ್ಕಳು ಪ್ರತಿಭಟನೆ ವಾಪಸ್ಸು ಪಡೆದು ತರಗತಿಗಳಿಗೆ ತೆರಳಿದರು. ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಕೆಲವರು ಆರೋಪಿಸಿದರು. ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೆ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ದೂರ ಉಳಿದಿದ್ದರು.