ಮಂಡ್ಯ: ಬಸ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಚಾಲಕ, ನಿರ್ವಾಹಕನ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಶೀಳನೆರೆಯ ಬೇಲದಕೆರೆ ಗ್ರಾಮದ ಬಳಿ ನಡೆದಿದೆ.
ಬಸ್ ನಲ್ಲಿ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಏಳು ವಿದ್ಯಾರ್ಥಿಗಳ ತಂಡ ರಾಜಘಟ್ಟ ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೇಲದಕೆರೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಹಲ್ಲೆ ಮಾಡಿದ ಯುವಕರಿಗೆ ಧರ್ಮದೇಟು ನೀಡಿದ್ದಾರೆ.
ಚಾಲಕ ಸಿಂಧಘಟ್ಟ ಕುಮಾರ್ ಹಾಗೂ ನಿರ್ವಾಹಕ ಧರ್ಮೇಗೌಡ ಹಲ್ಲೆಗೊಳಗಾದವರಾಗಿದ್ದು, ಸದ್ಯ ಇವರಿಬ್ಬರೂ ಮೈಸೂರಿನ ಕೆ.ಆರ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಘಟನೆ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಐವರು ತಲೆಮರೆಸಿಕೊಂಡಿದ್ದಾರೆ. ಇದೀಗ ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕುರಿತು ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.